ಕೃಷಿ ಮಸೂದೆಯನ್ನು ವಿರೋಧಿಸುವವರು ದೇಶದ ರೈತರಿಗೆ ಅವಮಾನ ಮಾಡುತ್ತಿದ್ದಾರೆ: ಪ್ರಧಾನಿ ಮೋದಿ ಆರೋಪ

ಕೃಷಿ ಮಸೂದೆಯನ್ನು ವಿರೋಧಿಸುವವರು ರೈತರಿಗೆ ಅವಮಾನ ಮಾಡುತ್ತಿದ್ದಾರೆ, ರೈತರು ಪೂಜಿಸುವ ಯಂತ್ರೋಪಕರಣಗಳಿಗೆ ಬೆಂಕಿಹಚ್ಚಿ ಸುಟ್ಟು ರೈತರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಕೃಷಿ ಮಸೂದೆಯನ್ನು ವಿರೋಧಿಸುವವರು ರೈತರಿಗೆ ಅವಮಾನ ಮಾಡುತ್ತಿದ್ದಾರೆ, ರೈತರು ಪೂಜಿಸುವ ಯಂತ್ರೋಪಕರಣಗಳಿಗೆ ಬೆಂಕಿಹಚ್ಚಿ ಸುಟ್ಟು ರೈತರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಉತ್ತರಾಖಂಡದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿ ಇಂದು ಮಾತನಾಡಿದ ಪ್ರಧಾನಿ, ರೈತರಿಗೆ, ಕಾರ್ಮಿಕರಿಗೆ, ಜನರ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಸುಧಾರಣೆಗಳನ್ನು ಇತ್ತೀಚೆಗೆ ಮುಗಿದ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ತರಲಾಗಿದೆ. ಈ ಸುಧಾರಣೆಗಳಿಂದ ರೈತರು, ಕಾರ್ಮಿಕರು, ಯುವಜನತೆ, ಬಡವರು, ಮಹಿಳೆಯರನ್ನು ಸಶಕ್ತೀಕರಣಗೊಳಿಸಬಹುದು. ಆದರೆ ಈ ದೇಶದ ಒಂದು ವರ್ಗದ ಜನ ತಮ್ಮ ಸ್ವಹಿತಾಸಕ್ತಿಗಾಗಿ, ತಮ್ಮ ಸ್ವಾರ್ಥಕ್ಕಾಗಿ ಸರ್ಕಾರದ ಸುಧಾರಣೆ ಯೋಜನೆಗಳನ್ನು ವಿರೋಧಿಸುತ್ತಿದ್ದಾರೆ ಎಂದು ನಾವು ನೋಡುತ್ತಿದ್ದೇವೆ ಎಂದರು.

ನಿನ್ನೆ ದೆಹಲಿಯ ಇಂದಿರಾ ಗೇಟ್ ಬಳಿ ಯುವ ಕಾಂಗ್ರೆಸ್ ಕಾರ್ಯಕರ್ತರು ರೈತರು ಬಳಸುವ ಟ್ರಾಕ್ಟರ್ ಗೆ ಬೆಂಕಿ ಹಚ್ಚಿ ತಮ್ಮ ಪ್ರತಿಭಟನೆಯನ್ನು ತೋರಿಸಿದ್ದ ಬಗ್ಗೆ ವಿರೋಧ ವ್ಯಕ್ತಪಡಿಸಿದ ಅವರು, ಕನಿಷ್ಠ ಬೆಂಬಲ ಬೆಲೆ ವಿಚಾರದಲ್ಲಿ ರೈತರನ್ನು ತಪ್ಪುದಾರಿಗೆಳೆಯಲಾಗುತ್ತಿದೆ. ನೂತನ ಕೃಷಿ ಮಸೂದೆಯಲ್ಲಿ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವುದು ಮಾತ್ರವಲ್ಲದೆ, ರೈತರು ಎಲ್ಲಿ ಬೇಕಾದರೂ ತಮ್ಮ ಬೆಳೆಗಳನ್ನು ಮಾರಾಟ ಮಾಡಬಹುದು. ಆ ಸ್ವಾತಂತ್ರ್ಯ ಅವರಿಗಿದೆ. ಆದರೆ ಈ ಸ್ವಾತಂತ್ರ್ಯವನ್ನು ಕೆಲವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಡ್ಡದಾರಿ ಮೂಲಕ ಹಣ ಸಂಪಾದಿಸುವ ಕಪ್ಪು ಹಣದ ಆದಾಯ ನಿಂತು ಹೋಗುತ್ತದೆ, ಅದಕ್ಕಾಗಿ ಈ ವಿರೋಧ ಮಾಡುತ್ತಿದ್ದಾರೆ ಎಂದು ಪ್ರಧಾನಿ ಆರೋಪಿಸಿದರು.

ನಾವು ಸರ್ಕಾರದ ವಿರುದ್ಧ ಸರಿಯಾದ ವಿಷಯಕ್ಕೆ ಧ್ವನಿ ಎತ್ತಬೇಕು. ನಾವು ಸರ್ಕಾರದಲ್ಲಿಲ್ಲ. ಬೀದಿಯಲ್ಲಿ ನಿಂತು ಹೋರಾಟ ಮಾಡಬಹುದಷ್ಟೆ. ನಾವು ಬೀದಿಬದಿ ಹೋರಾಟಗಾರರು ಎಂದು ಪಂಜಾಬ್ ಯುವ ಕಾಂಗ್ರೆಸ್ ಅಧ್ಯಕ್ಷ ಬ್ರಿಂದರ್ ದಿಲ್ಲೊನ್ ಆರೋಪಿಸಿದ್ದರು. ನಿನ್ನೆ ರಾಷ್ಟ್ರಪತಿ ಭವನ ಮತ್ತು ಸಂಸತ್ತಿನಿಂದ ಕೆಲವೇ ಮೀಟರ್ ಗಳ ಅಂತರದಲ್ಲಿರುವ ಇಂಡಿಯಾ ಗೇಟ್ ಬಳಿ ಪ್ರತಿಭಟನೆ ಮಾಡುತ್ತಿದ್ದ ವೇಳೆ ಟ್ರಾಕ್ಟರ್ ನ್ನು ಉರಿಸಿ ಹಾಕಿದ್ದರು. ಪಂಜಾಬ್ ಯುವ ಕಾಂಗ್ರೆಸ್ ಇದರ ಹೊಣೆ ಹೊತ್ತುಕೊಂಡಿದೆ.

ಇದಕ್ಕೆ ಬಿಜೆಪಿಯು ಕಾಂಗ್ರೆಸ್ ಮೇಲೆ ಆರೋಪಿಸಿ, ರೈತರನ್ನು ಕಾಂಗ್ರೆಸ್ ತಪ್ಪುಹಾದಿಗೆಳೆಯುತ್ತಿದೆ, ಪ್ರಚಾರ ಪಡೆಯುವ ದುರಾಸೆಯಿಂದ ದೇಶದ ಜನರ ಮುಂದೆ ನಾಟಕವಾಡುವ ವಿರೋಧ ಪಕ್ಷದವರಿಗೆ ನಾಚಿಕೆಯಾಗಬೇಕು ಎಂದು ಬಿಜೆಪಿ ಆರೋಪಿಸಿದೆ.
ಈ ಘಟನೆ ಬಳಿಕ ಪಂಜಾಬ್ ನ ಐವರನ್ನು ಬಂಧಿಸಿ ಅವರ ಕಾರನ್ನು ವಶಪಡಿಸಿಕೊಳ್ಳಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com