ಉ.ಪ್ರದೇಶದಲ್ಲಿ 2 ವಾರಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೀಡಾಗಿದ್ದ ಮಹಿಳೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಸಾವು

ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಾಲ್ವರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಮಹಿಳೆ ಮಂಗಳವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಾಲ್ವರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಮಹಿಳೆ ಮಂಗಳವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.

ಮಹಿಳೆಯ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬರದಿದ್ದಾಗ ಆಕೆಯನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ವರು ಆರೋಪಿಗಳಿಂದ ಸಾಮೂಹಿಕ ಅತ್ಯಾಚಾರಕ್ಕೀಡಾಗಿದ್ದ ಮಹಿಳೆಯ ಪರಿಸ್ಥಿತಿ ಚಿಂತಾಜನಕವಾಗಿತ್ತು. ದೇಹದ ಹಲವು ಕಡೆಗಳಲ್ಲಿ ಗಾಯ, ನಾಲಗೆ ಕತ್ತರಿಸಿ ಹೋಗಿತ್ತು.

ಪ್ರಸ್ತುತ ಎಲ್ಲಾ ನಾಲ್ವರು ಆರೋಪಿಗಳು ಜೈಲಿನಲ್ಲಿದ್ದಾರೆ. ಮಹಿಳೆ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು ನಾಲ್ವರು ಆರೋಪಿಗಳು ಮೇಲ್ಜಾತಿಗೆ ಸೇರಿದವರಾಗಿದ್ದಾರೆ.

ಆರಂಭದಲ್ಲಿ ಉತ್ತರ ಪ್ರದೇಶ ಪೊಲೀಸರು ತಮ್ಮ ನೆರವಿಗೆ ಬಂದಿರಲಿಲ್ಲ, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ನಂತರವಷ್ಟೇ ಪೊಲೀಸರು ಸ್ಪಂದಿಸಿದರು ಎಂದು ಮಹಿಳೆಯ ಕುಟುಂಬಸ್ಥರು ಹೇಳುತ್ತಾರೆ.

ದೆಹಲಿಯಿಂದ 200 ಕಿಲೋ ಮೀಟರ್ ದೂರದಲ್ಲಿ ಹತ್ರಾಸ್ ಎಂಬ ಗ್ರಾಮದಲ್ಲಿ ಕಳೆದ ಸೆಪ್ಟೆಂಬರ್ 14ರಂದು ಮಹಿಳೆ ಮೇಲೆ ಅತ್ಯಾಚಾರ ನಡೆದಿತ್ತು. ಗದ್ದೆಯೊಂದರಲ್ಲಿ ಮಹಿಳೆ ತನ್ನ ಕುಟುಂಬದವರ ಜೊತೆ ಹುಲ್ಲು ಕೀಳುತ್ತಿದ್ದ ವೇಳೆ ಆಕೆಯನ್ನು ದುಪ್ಪಟ್ಟಾ ಹಿಡಿದು ಎಳೆದುಕೊಂಡು ಹೋಗಿ ನಾಲ್ವರು ಪುರುಷರು ಅತ್ಯಾಚಾರವೆಸಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com