ಇಂದು ಬಾಬ್ರಿ ಮಸೀದಿ ಧ್ವಂಸ ಪ್ರಕರಣ ತೀರ್ಪು: ಅಡ್ವಾಣಿ, ಜೋಷಿ, ಉಮಾ ಭಾರತಿ ಭವಿಷ್ಯ ನಿರ್ಧಾರ

1992ರಲ್ಲಿ ಬಾಬ್ರಿ ಮಸೀದಿಯನ್ನು ಕೆಡವಲು ಅಂದಿನ ಬಿಜೆಪಿ ನಾಯಕರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಮೊದಲಾದವರು ಪಿತೂರಿ ನಡೆಸಿದ್ದರೆ? ಈ ಬಗ್ಗೆ ಲಕ್ನೊದಲ್ಲಿರುವ ವಿಶೇಷ ಸಿಬಿಐ ನ್ಯಾಯಾಲಯ ಇಂದು ಮಹತ್ವದ ತೀರ್ಪು ನೀಡಲಿದ್ದು ಇದು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಪಾಲಿಗೂ ಮಹತ್ವದ್ದಾಗಿದೆ.
ಎಲ್ ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ
ಎಲ್ ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ

ನವದೆಹಲಿ: 1992ರಲ್ಲಿ ಬಾಬ್ರಿ ಮಸೀದಿಯನ್ನು ಕೆಡವಲು ಅಂದಿನ ಬಿಜೆಪಿ ನಾಯಕರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಮೊದಲಾದವರು ಪಿತೂರಿ ನಡೆಸಿದ್ದರೆ? ಈ ಬಗ್ಗೆ ಲಕ್ನೊದಲ್ಲಿರುವ ವಿಶೇಷ ಸಿಬಿಐ ನ್ಯಾಯಾಲಯ ಇಂದು ಮಹತ್ವದ ತೀರ್ಪು ನೀಡಲಿದ್ದು ಇದು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಪಾಲಿಗೂ ಮಹತ್ವದ್ದಾಗಿದೆ.

ಅಂದು ಸಂಸದರಾಗಿದ್ದ ಎಲ್ ಕೆ ಅಡ್ವಾಣಿ, ಬಾಬ್ರಿ ಮಸೀದಿ ಧ್ವಂಸ ಮಾಡುವ ಮೊದಲು ಕರ ಸೇವಕರ ಮುಂದೆ ಭಾಷಣ ಮಾಡಿದರು, ಇದರಿಂದ 1990ರ ಆರಂಭದಲ್ಲಿ ರಥ ಯಾತ್ರೆ ನಡೆಸಲಾಯಿತು. ಆ ಸಮಯದಲ್ಲಿ ಮುರಳಿ ಮನೋಹರ ಜೋಷಿ ಬಿಜೆಪಿ ಅಧ್ಯಕ್ಷರಾಗಿದ್ದರು. ಬಾಬ್ರಿ ಮಸೀದಿ ಧ್ವಂಸ ಸಮಯದಲ್ಲಿ ಅವರು ಕೂಡ ಸ್ಥಳದಲ್ಲಿದ್ದು ಕರ ಸೇವಕರನ್ನುದ್ದೇಶಿಸಿ ಮಾತನಾಡಿದ್ದರು. ಉಮಾ ಭಾರತಿಯವರು ಕೂಡ ಇದ್ದರು.

ಅಂದು ಕಲ್ಯಾಣ್ ಸಿಂಗ್ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದರು. ಮಸೀದಿ ಧ್ವಂಸ ಮಾಡಲು ಬಿಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ಬರೆದು ಕೊಟ್ಟಿದ್ದರು ಕಲ್ಯಾಣ್ ಸಿಂಗ್. ಲೆಬೆರಾನ್ ಆಯೋಗ, ಉಮಾ ಭಾರತಿಯವರು ಕರ ಸೇವಕರಿಗೆ ಮಸೀದಿ ಧ್ವಂಸ ಮಾಡಲು ಪ್ರೇರಣೆ ನೀಡಿದರು ಎಂದು ಆರೋಪಿಸಿತು. ನಂತರ ಉಮಾ ಭಾರತಿಯವರು ಬಾಬ್ರಿ ಮಸೀದಿ ಧ್ವಂಸದ ನೈತಿಕ ಹೊಣೆ ಹೊತ್ತುಕೊಂಡರು.

ಆ ಸಂದರ್ಭದಲ್ಲಿ ವಿನಯ್ ಕತಿಯಾರ್ ಭಜರಂಗದಳ ಮುಖ್ಯಸ್ಥರಾಗಿದ್ದರು. 1992ರಲ್ಲಿ ಫೈಜಾಬಾದ್ ನಲ್ಲಿ ಬಿಜೆಪಿ ಸಂಸದರಾಗಿದ್ದರು. ಅವರ ಕ್ಷೇತ್ರದಲ್ಲಿಯೇ ಬಾಬ್ರಿ ಮಸೀದಿ ಧ್ವಂಸ ಮಾಡಲು ಈ ಎಲ್ಲಾ ನಾಯಕರು ಸೇರಿ ಪಿತೂರಿ ನಡೆಸಿದ್ದರು ಎಂಬ ಆರೋಪಗಳಿವೆ.

ಅಯೋಧ್ಯೆಯ ಅತಿದೊಡ್ಡ ದೇವಾಲಯದ ಮುಖ್ಯಸ್ಥ ಹಾಗೂ ರಾಮ ಜನ್ಮಭೂಮಿ ಹೋರಾಟದಲ್ಲಿ 1984ರಿಂದ ಸಕ್ರಿಯವಾಗಿ ಭಾಗಿಯಾಗಿರುವ ಮಹಂತ್ ನೃತ್ಯ ಗೋಪಾಲ್ ದಾಸ್ ಅವರು ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಲು ಕರ ಸೇವಕರ ಗುಂಪಿಗೆ ಪ್ರಚೋದನೆ ನೀಡಿದರು ಎಂಬ ಆರೋಪವಿದೆ. ಇನ್ನು ದುರ್ಗಾ ವಾಹಿನಿಯ ಸ್ಥಾಪಕ ಅಧ್ಯಕ್ಷೆ, ವಿಎಚ್ ಪಿಯ ಮಹಿಳಾ ಗುಂಪಿನ ಮುಖ್ಯಸ್ಥೆಯಾಗಿದ್ದ ಸಾದ್ವಿ ರಿತಂಬರ ಅವರ ಭಾಷಣ ಮಸೀದಿಯ ಧ್ವಂಸದಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿತು ಎಂದು ಹೇಳಲಾಗುತ್ತಿದೆ. ಇನ್ನು, ವಿಶ್ವ ಹಿಂದೂ ಪರಿಷತ್ ನ ಇಂದಿನ ಉಪಾಧ್ಯಕ್ಷ ಮತ್ತು ರಾಮ ದೇವಸ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಕೂಡ ಧ್ವಂಸ ಪ್ರಕರಣದ ಆರೋಪಿಗಳಲ್ಲಿ ಒಬ್ಬರು.

ಇದುವರೆಗೆ ಏನಾಗಿದೆ? : 2003ರಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ರಾಯ್ ಬರೇಲಿ ಕೋರ್ಟ್ ಎಲ್ ಕೆ ಅಡ್ವಾಣಿ ವಿರುದ್ಧದ ಕೇಸನ್ನು ಸರಿಯಾದ ಸಾಕ್ಷಿಗಳಿಲ್ಲ ಎಂದು ಖುಲಾಸೆಗೊಳಿಸಿದ ನಂತರ ಉಳಿದ ಎಲ್ಲಾ ಸಹ ಆರೋಪಿಗಳು ಸಹ ಕೇಸಿನಿಂದ ಮುಕ್ತರಾದರು.

ಅಲಹಾಬಾದ್ ಹೈಕೋರ್ಟ್ 2010ರಲ್ಲಿ ಆದೇಶವನ್ನು ಎತ್ತಿಹಿಡಿಯಿತು. ಒಂದು ವರ್ಷ ಕಳೆದ ನಂತರ 2011ರಲ್ಲಿ ಸಿಬಿಐ ಕೋರ್ಟ್ ಸುಪ್ರೀಂ ಕೋರ್ಟ್ ಮೊರೆ ಹೋಗಿ ಪಿತೂರಿ ಕೇಸನ್ನು ಪುನರ್ ಪರಿಶೀಲಿಸುವಂತೆ ಕೇಳಿಕೊಂಡಿತು. 2017ರಲ್ಲಿ ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶವನ್ನು ತಿರಸ್ಕರಿಸಿ ವಿಚಾರಣೆಯನ್ನು ಮುಂದುವರಿಸುವಂತೆ ಹಸಿರು ನಿಶಾನೆ ನೀಡಿತು.

ಕೇಸಿನ ಹಿನ್ನೆಲೆ: 1992ರ ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಧ್ವಂಸಗೊಂಡ ನಂತರ ಅಯೋಧ್ಯೆಯ ರಾಮಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಎರಡು ಎಫ್ಐಆರ್ ಗಳು ದಾಖಲಾದವು.
-ಕೇಸು ಸಂಖ್ಯೆ 197/1992: ಅನಾಮಧೇಯ ಕರ ಸೇವಕರ ವಿರುದ್ಧ ಐಪಿಸಿ ಸೆಕ್ಷನ್ಸ್ 395(ಡಕಾಯಿತಿ), 397(ಡಕಾಯಿತಿ ಅಥವಾ ದರೋಡೆ ಯತ್ನದಿಂದ ಹತ್ಯೆ ಮಾಡುವ ಪ್ರಯತ್ನ), 332( ಸಾರ್ವಜನಿಕ ಸೇವೆಯಲ್ಲಿರುವವರಿಗೆ ತೊಂದರೆಯುಂಟುಮಾಡಿದ್ದು), 337,338(ತೀವ್ರ ಹಾನಿ), 295(ಧಾರ್ಮಿಕ ಅವಮಾನವುಂಟುಮಾಡಲು ಆರಾಧನೆ ಭಕ್ತಿಯ ಕೇಂದ್ರಕ್ಕೆ ಹಾನಿಯನ್ನುಂಟುಮಾಡಿದ್ದು), 297(ಧಾರ್ಮಿಕ ಸ್ಥಳಕ್ಕೆ ಹಾನಿ) ಮತ್ತು 153-ಎ(ಧಾರ್ಮಿಕತೆಯತೆಯ ಹೆಸರಿನಲ್ಲಿ ವಿವಿಧ ಗುಂಪುಗಳ ಮಧ್ಯೆ ಭಿನ್ನಾಭಿಪ್ರಾಯ ಸೃಷ್ಟಿಸಿದ್ದು).
-ಕೇಸು ಸಂಖ್ಯೆ 198/1992: ಅಶೋಕ್ ಸಿಂಘಲ್, ಗಿರಿರಾಜ್ ಕಿಶೋರ್, ಎಲ್ ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ, ವಿಷ್ಣು ಹರಿ ದಾಲ್ಮಿಯಾ, ವಿನಯ್ ಕಟಿಯಾರ್, ಉಮಾ ಭಾರತಿ, ಸಾಧ್ವಿ ರಿತಂಬರ ವಿರುದ್ಧ ಕೇಸು ದಾಖಲು. ಈ ಎಂಟು ಮಂದಿ ವಿರುದ್ಧ ಸೆಕ್ಷನ್ 153-ಎ, 153-ಬಿ ಮತ್ತು 505 ಐಪಿಸಿ ಅಡಿಯಲ್ಲಿ ಕೇಸು ದಾಖಲು.
ಧ್ವಂಸ ನಡೆದ ಸಂದರ್ಭದಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಿ ತಮ್ಮ ಸಾಧನಗಳನ್ನು ಕಿತ್ತುಕೊಂಡು ಹಾನಿ ಮಾಡಲಾಯಿತು ಎಂದು ಮಾಧ್ಯಮ ಪ್ರತಿನಿಧಿಗಳು, ಛಾಯಾಗ್ರಾಹಕರು ನೀಡಿದ ದೂರಿನ ಮೇಲೆ ಮತ್ತೆ 47 ಎಫ್ಐಆರ್ ದಾಖಲು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com