ಪಾಲಕರ ಹೊರಗಿಟ್ಟು ಅತ್ಯಾಚಾರ ಸಂತ್ರಸ್ತೆಯ ಅಂತ್ಯಕ್ರಿಯೆ: ಯುಪಿ ಪೊಲೀಸರ ದುರ್ವರ್ತನೆಯ ವಿರುದ್ಧ ಆಕ್ರೋಶ

ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ದುಷ್ಕರ್ಮಿಗಳ ಕಿರುಕುಳದಿಂದಾಗಿ ಮೃತಪಟ್ಟ ಉತ್ತರಪ್ರದೇಶದ ಹತ್ರಾಸ್'ನ ಗ್ಯಾಂಗ್'ರೇಪ್ ಸಂತ್ರಸ್ತೆಯ ಅಂತ್ಯಕ್ರಿಯೆಯನ್ನು ಪಾಲಕರ ವಿರೋಧದ ನಡುವೆಯೂ ಉತ್ತರಪ್ರದೇಶ ಪೊಲೀಸರೇ ಆತುರಾತುರವಾಗಿ ನೆರವೇಸಿದ್ದು, ಪೊಲೀಸರ ವರ್ತನೆ ವಿರುದ್ಧ ತೀವ್ರ ಆಕ್ರೋಶಗಳು ವ್ಯಕ್ತವಾಗತೊಡಗಿವೆ. 
ಪ್ರತಿಭಟನಾನಿರತ ಕಾಂಗ್ರೆಸ್ ಕಾರ್ಯಕರ್ತರು
ಪ್ರತಿಭಟನಾನಿರತ ಕಾಂಗ್ರೆಸ್ ಕಾರ್ಯಕರ್ತರು

ಲಖನೌ: ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ದುಷ್ಕರ್ಮಿಗಳ ಕಿರುಕುಳದಿಂದಾಗಿ ಮೃತಪಟ್ಟ ಉತ್ತರಪ್ರದೇಶದ ಹತ್ರಾಸ್'ನ ಗ್ಯಾಂಗ್'ರೇಪ್ ಸಂತ್ರಸ್ತೆಯ ಅಂತ್ಯಕ್ರಿಯೆಯನ್ನು ಪಾಲಕರ ವಿರೋಧದ ನಡುವೆಯೂ ಉತ್ತರಪ್ರದೇಶ ಪೊಲೀಸರೇ ಆತುರಾತುರವಾಗಿ ನೆರವೇಸಿದ್ದು, ಪೊಲೀಸರ ವರ್ತನೆ ವಿರುದ್ಧ ತೀವ್ರ ಆಕ್ರೋಶಗಳು ವ್ಯಕ್ತವಾಗತೊಡಗಿವೆ. 

ಗ್ಯಾಂಗ್'ರೇಪ್ ಸಂತ್ರಸ್ತೆಯ ಅಂತ್ಯಕ್ರಿಯೆಯನ್ನು ಪೊಲೀಸರು ಮಂಗಳವಾರ ತಡರಾತ್ರಿ 2.30ರ ಸುಮಾರಿಗೆ ನೆರವೇರಿಸಿದ್ದಾರೆ. ಪೊಲೀಸರ ಈ ವರ್ತನೆಯು ಇದೀಗ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. 

ಸುದ್ದಿ ಹರಡುತ್ತಿದ್ದಂತೆಯೇ ಉತ್ತರಪ್ರದೇಶ ಪೊಲೀಸರು ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆಗಳು ಆರಂಭವಾಗಿವೆ. ಪ್ರತಿಭಟನೆಯಲ್ಲಿ ರಾಜಕೀಯ ನಾಯಕರು, ಕ್ರೀಡೆ ಹಾಗೂ ಸಿನಿ ಕಲಾವಿದರು, ಕೆಲ ಹೋರಾಟಗಾರರು ಭಾಗಿಯಾಗಿದ್ದಾರೆ. 

2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯ ಗ್ಯಾಂಗ್​ರೇಪ್​ ಮಾದರಿಯಲ್ಲೇ ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ನಡೆದಿದ್ದು, ಸೆ. 14ರಂದು ಯುವತಿಯು ತಮ್ಮ ಜಮೀನಿನಲ್ಲಿ ತಾಯಿಯೊಂದಿಗೆ ಮೇವು ತರಲು ಹೋಗಿದ್ದಾಗ ನಾಲ್ವರು ಕಾಮುಕರು ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ. ಅಲ್ಲದೆ, ಆಕೆಯ ನಾಲಿಗೆಯನ್ನು ಕತ್ತರಿಸಿದ್ದಾರೆ. ಆಕೆಯ ಬೆನ್ನುಮೂಳೆ ಮತ್ತು ಕುತ್ತಿಗೆಗೆ ಹಾನಿ ಮಾಡಿದ್ದಾರೆ. ಗಂಭೀರ ಗಾಯಗಳಿಂದ ದೆಹಲಿಯ ಸಫ್ದಾರ್​ ಜಂಗ್​ ಆಸ್ಪತ್ರೆಗೆ ದಾಖಲಾಗಿದ್ದ ಸಂತ್ರಸ್ತೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮೃತಪಟ್ಟಿದ್ದಾರೆ.

ಅಮಾಯಕ ಯುವತಿಯ ಸಾವು ಇದೀಗ ದೇಶದೆಲ್ಲಡೆ ಆಕ್ರೋಶದ ಕಿಚ್ಚು ಹಬ್ಬಿಸಿದೆ. ಆರೋಪಿಗಳನ್ನು ನೇಣಿಗೇರಿಸಿ, ಯುವತಿ ಸಾವಿಗೆ ನ್ಯಾಯ ದೊರಕಿಸಿಕೊಡಿ ಎಂದು ಅನೇಕರು ಒತ್ತಾಯಿಸುತ್ತಿದ್ದಾರೆ. 

ಇತ್ತ ಆಸ್ಪತ್ರೆಯಲ್ಲಿ ಸಂತ್ರಸ್ತೆ ಮೃತಪಟ್ಟ ಬೆನ್ನಲ್ಲೇ ಕುಟುಂಬದವರಿಗೆ ಗೊತ್ತಾಗದಂತೆ ಮೃತದೇಹವನ್ನು ತೆಗೆದುಕೊಂಡು ಹೋಗಿದ್ದಾರೆಂದು ಸಂತ್ರಸ್ತೆಯ ಸಹೋದರು ಆರೋಪಿಸಿದ್ದಾರೆ. 

ನಾನು ಮತ್ತು ನನ್ನ ತಂದೆ ಪ್ರತಿಭಟನೆಗೆ ಕುಳಿತಿದ್ದೆವು. ಉತ್ತರಪ್ರದೇಶ ರಾಜ್ಯದ ನೋಂದಣಿಯ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಮೃತದೇಹವನ್ನು ನಮಗೆ ಗೊತ್ತಿಲ್ಲದೆ ತೆಗೆದುಕೊಂಡು ಹೋಗಿದ್ದಾರೆಂದು ಸಹೋದರರು ಆರೋಪಿಸಿದ್ದಾರೆ. 

ದೆಹಲಿಯಿಂದ ಸುಮಾರು 200 ಕಿ.ಮೀ. ದೂರವಿರುವ ಹತ್ರಾಸ್​ ಗ್ರಾಮಕ್ಕೆ ಮಧ್ಯರಾತ್ರಿ ಸಂತ್ರಸ್ತೆಯ ಶವವನ್ನು ಕೊಂಡೊಯ್ದು ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಇನ್ನು ಮಧ್ಯರಾತ್ರಿ ಅಂತ್ಯಕ್ರಿಯೆ ಮಾಡಿರುವುದು ನಮ್ಮ ಸಂಪ್ರದಾಯಕ್ಕೆ ವಿರುದ್ಧವಾದದ್ದು ಎಂದು ಗ್ರಾಮಸ್ಥರು ಮತ್ತು ಕುಟುಂಬಸ್ಥರು ಕಿಡಿಕಾರಿದ್ದು, ಮೃತದೇಹ ಹಸ್ತಾಂತರಿಸಿ ಬೆಳಗ್ಗೆ ಶವಸಂಸ್ಕಾರ ಮಾಡಿಕೊಳ್ಳುತ್ತೇವೆಂದು ಮನವಿ ಮಾಡಿದರು ಪೊಲೀಸರು ಒಪ್ಪಲಿಲ್ಲ ಎಂದು ಸಂತ್ರಸ್ತೆಯ ತಂದೆ ಅಸಮಾಧಾನ ಹೊರಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com