ಛತ್ತೀಸ್ಗಢದಲ್ಲಿ ನಕ್ಸಲರ ಭೀಕರ ದಾಳಿ: 22 ಮಂದಿ ಯೋಧರು ಹುತಾತ್ಮ, 21 ಮಂದಿ ಭದ್ರತಾ ಪಡೆಗಳು ನಾಪತ್ತೆ!
ಮಾವೋಪೀಡಿತ ಬಸ್ತಾರ್ ಪ್ರದೇಶದ ಬಿಜಾಪುರ್ ಅರಣ್ಯ ಪ್ರದೇಶದಲ್ಲಿ ಶನಿವಾರ ಭದ್ರತಾ ಪಡೆ ಮತ್ತು ನಕ್ಸಲರ ಮಧ್ಯೆ ನಡೆದ ಗುಂಡಿನ ಕಾಳಗದಲ್ಲಿ 22 ಮಂದಿ ಯೋಧರು ಹುತಾತ್ಮರಾಗಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ...
Published: 04th April 2021 01:10 PM | Last Updated: 04th April 2021 01:21 PM | A+A A-

ಘಟನಾ ಸ್ಥಳದಲ್ಲಿ ಭದ್ರತಾ ಪಡೆಗಳು
ರಾಯ್ಪುರ: ಮಾವೋಪೀಡಿತ ಬಸ್ತಾರ್ ಪ್ರದೇಶದ ಬಿಜಾಪುರ್ ಅರಣ್ಯ ಪ್ರದೇಶದಲ್ಲಿ ಶನಿವಾರ ಭದ್ರತಾ ಪಡೆ ಮತ್ತು ನಕ್ಸಲರ ಮಧ್ಯೆ ನಡೆದ ಗುಂಡಿನ ಕಾಳಗದಲ್ಲಿ 22 ಮಂದಿ ಯೋಧರು ಹುತಾತ್ಮರಾಗಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟರ್ರೆಮ್ ಅರಣ್ಯ ಪ್ರದೇಶದಲ್ಲಿ ನಕ್ಸಲರ ಇರುವಿಕೆ ಕುರಿತು ಮಾಹಿತಿ ಕಲೆಹಾಕಿದ್ದ ನಕ್ಸಲ್ ನಿಗ್ರಹ ಪಡೆ ಸಿಆರ್ ಪಿಎಫ್ ನೊಂದಿಗೆ ಶನಿವಾರ ಜಂಟಿ ಕಾರ್ಯಾಚರಣೆಗೆ ಇಳಿದಿತ್ತು.
ಸಿಆರ್ ಪಿಎಫ್ ನ ಕೋಬ್ರಾ ತಂಡ ಮತ್ತು ಜಿಲ್ಲಾ ಮೀಸಲು ಸಶಸ್ತ್ರಪಡೆ ಜಂಟಿ ಕಾರ್ಯಾಚರಣೆ ನಡೆಸಲು ಆರಂಭಿಸಿತ್ತು. ಈ ವೇಳೆ ನಕ್ಸಲರ ಅಡಗುತಾಣದ ಮೇಲೆಭದ್ರತಾ ಪಡೆ ನುಗ್ಗುತ್ತಲೇ ಎಚ್ಚೆತ್ತ ನಕ್ಸಲರು ಗುಂಡಿನ ಸುರಿಮಳೆ ಗರೆದರು.
ಬಳಿಕ ಭದ್ರತಾಪಡೆಗಳು ಹಾಗೂ ನಕ್ಸಲರ ನಡುವೆ ಭಾರೀ ಗುಂಡಿನ ಕಾಳಗ ನಡೆದಿತ್ತು. ಈ ವೇಳೆ ಐವರು ಯೋಧರು ಹುತಾತ್ಮರಾಗಿದ್ದರು. ಅಲ್ಲದೆ, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಬಳಿಕ ಗಾಯಗೊಂಡಿದ್ದ ಯೋಧರನ್ನು ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿತ್ತು.
ಇದೀಗ ನಕ್ಸಲರ ದಾಳಿಯಲ್ಲಿ 22 ಮಂದಿ ಯೋಧರು ಹುತಾತ್ಮರಾಗಿದ್ದಾರೆಂದು ಹೇಳಲಾಗುತ್ತಿದ್ದು, 21 ಮಂದಿ ಭದ್ರತಾ ಪಡೆಗಳು ನಾಪತ್ತೆಯಾಗಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಸಿಆರ್'ಪಿಎಫ್ ಡಿಜಿ ಕುಲ್ದೀಪ್ ಸಿಂಗ್ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಬಿಜಾಪುರ ಎಸ್'ಪಿ ಕಮಲೋಚನ್ ಕಶ್ಯಪ್ ಅವರೂ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಛತ್ತೀಸ್ಗಢದ ಸುಕ್ಮಾ-ಬಿಜಾಪುರದಲ್ಲಿ ನಕ್ಸಲರು ನಡೆಸಿದ ದಾಳಿಯಲ್ಲಿ 22 ಮಂದಿ ಭದ್ರತಾ ಪಡೆಗಳು ಹುತಾತ್ಮರಾಗಿದ್ದಾರೆಂದು ಹೇಳಿದ್ದಾರೆ.
ದಾಳಿ ಬಳಿಕ ನಕ್ಸಲರು ಭದ್ರತಾ ಪಡೆಗಳ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿ ಕಾಲ್ಕಿತ್ತಿದ್ದಾರೆಂದು ಸಿಆರ್'ಪಿಎಫ್ ಮೂಲಗಳು ಮಾಹಿತಿ ನೀಡಿದೆ.