ಛತ್ತೀಸ್ ಘಡ ಎನ್ಕೌಂಟರ್: ಹುತಾತ್ಮ ಯೋಧರ ಸಂಖ್ಯೆ 22ಕ್ಕೆ ಏರಿಕೆ, 400 ನಕ್ಸಲರಿಂದ ಯೋಧರ ಮೇಲೆ ದಾಳಿ!

ಛತ್ತೀಸ್ ಘಡದಲ್ಲಿ ನಡೆದ ಭೀಕರ ಎನ್ ಕೌಂಟರ್ ನಲ್ಲಿ ಸಾವಿಗೀಡಾದ ಯೋಧರ ಸಂಖ್ಯೆ 22ಕ್ಕೆ ಏರಿಕೆಯಾಗಿದ್ದು, ಸುಮಾರು 400ಕ್ಕೂ ಅಧಿಕ ಶಸ್ತ್ರ ಸಜ್ಜಿತ ನಕ್ಸಲರು ಯೋಧರ ಮೇಲೆ ದಾಳಿ ಮಾಡಿದ್ದರು ಎಂದು ಉನ್ನತ ಮಟ್ಟದ ಮೂಲಗಳು ತಿಳಿಸಿವೆ.

Published: 05th April 2021 07:50 AM  |   Last Updated: 05th April 2021 01:00 PM   |  A+A-


security personnel Injured in Naxal Attack

ನಕ್ಸಲರ ದಾಳಿಯಿಂದ ಗಾಯಗೊಂಡ ಯೋಧ (ಪಿಟಿಐ ಚಿತ್ರ)

Posted By : Srinivasamurthy VN
Source : PTI

ನವದೆಹಲಿ: ಛತ್ತೀಸ್ ಘಡದಲ್ಲಿ ನಡೆದ ಭೀಕರ ಎನ್ ಕೌಂಟರ್ ನಲ್ಲಿ ಸಾವಿಗೀಡಾದ ಯೋಧರ ಸಂಖ್ಯೆ 22ಕ್ಕೆ ಏರಿಕೆಯಾಗಿದ್ದು, ಸುಮಾರು 400ಕ್ಕೂ ಅಧಿಕ ಶಸ್ತ್ರ ಸಜ್ಜಿತ ನಕ್ಸಲರು ಯೋಧರ ಮೇಲೆ ದಾಳಿ ಮಾಡಿದ್ದರು ಎಂದು ಉನ್ನತ ಮಟ್ಟದ ಮೂಲಗಳು ತಿಳಿಸಿವೆ.

ಮೃತ 22 ಜನರಲ್ಲಿ ಸಿಆರ್‌ಪಿಎಫ್‌ನ 8 ಮಂದಿ, ‘ಕೋಬ್ರಾ’ (ಕಮಾಂಡೊ ಬೆಟಾಲಿಯನ್ಸ್‌ ಫಾರ್‌ ರೆಸಲೂಟ್‌ ಆ್ಯಕ್ಷನ್‌)ದ ಏಳು ಕಮಾಂಡೊಗಳು, ಬಸ್ತಾರಿಯಾ ತುಕಡಿಯ ಒಬ್ಬ ಯೋಧ ಸೇರಿದ್ದಾರೆ. ಸಿಆರ್‌ಪಿಎಫ್‌ನ ಒಬ್ಬ ಇನ್‌ಸ್ಪೆಕ್ಟರ್ ನಾಪತ್ತೆಯಾಗಿದ್ದಾರೆ.  ಸುಮಾರು 400ರಷ್ಟು ನಕ್ಸಲರು ಎಲ್‌ಎಂಜಿ ಗನ್ ಸೇರಿದಂತೆ ಶಸ್ತ್ರಸಜ್ಜಿತವಾಗಿ ಹೊಂಚು ಹಾಕಿ ನಡೆಸಿದ ದಾಳಿಯಲ್ಲಿ ಭದ್ರತಾ ಪಡೆಯ 22 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ 30ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ. ಅಲ್ಲದೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಅಪಹರಿಲಾಗಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಸಿಆರ್‌ಪಿಎಫ್‌ನ ವಿಶೇಷ ಜಂಗಲ್ ವಾರ್‌ಫೇರ್ ಯುನಿಟ್ ಕೋಬ್ರಾ, ನಿಯಮಿತ ಬೆಟಾಲಿಯನ್‌ಗಳು ಹಾಗೂ ಬಸ್ತಾರಿಯನ್ ಬೆಟಾಲಿಯನ್, ಛತ್ತೀಸ್ ಘಡ ಪೊಲೀಸ್‌ನ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಸೇರಿಂದೆ 1,500ರಷ್ಟು ಭದ್ರತಾ ಪಡೆಯ ಯೋಧರು ನಕ್ಸಲ್ ವಿರುದ್ಧ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು.

ದಾಳಿ ನಡೆಸಿದ್ದೇ ನಕ್ಸಲರು!
ಮಾವೋವಾದಿಗಳ ಪ್ರಾಬಲ್ಯವಿರುವ ಗಡಿ ಜಿಲ್ಲೆಯ ಸುಕ್ಮಾದ ಅರಣ್ಯ ಭಾಗದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ಭದ್ರತಾ ಪಡೆಗಳನ್ನು ಸುತ್ತುವರಿದು ನಕ್ಸಲರು ಗುಂಡಿನ ದಾಳಿ ನಡೆಸಿದ್ದರು. ಸುಮಾರು 4 ಗಂಟೆ ಗುಂಡಿನ ಚಕಮಕಿ ನಡೆದಿದೆ. ತಂಡವು ತರೆಮ್‌ನಿಂದ ಹೊರಟು ಜೋನಾಗುಡ ಅರಣ್ಯದ ಮೂಲಕ ಹೋಗುವಾಗ ದಾಳಿ ನಡೆದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಛತ್ತೀಸಗಡದ ಡಿಐಜಿ (ನಕ್ಸಲ್‌ ನಿಗ್ರಹ ಕಾರ್ಯಾಚರಣೆ) ಒ.ಪಿ.ಪಾಲ್ ಅವರು, '‘ಬಿಜಾಪುರ ಹಾಗೂ ಸುಕ್ಮಾ ಜಿಲ್ಲೆಗಳ ಗಡಿಗೆ ಹೊಂದಿಕೊಂಡ ಅರಣ್ಯದಲ್ಲಿ ಶನಿವಾರ ಗುಂಡಿನ ಚಕಮಕಿ ನಡೆದಿದ್ದು, ಸ್ಥಳದಲ್ಲೇ ಐವರು ಯೋಧರು ಸತ್ತಿದ್ದರು. ಭಾನುವಾರ ಅದೇ ಸ್ಥಳದಲ್ಲಿ 17 ಯೋಧರ ಶವ ಪತ್ತೆಯಾಗಿದೆ. ಯೋಧರ ಬಳಿಯಿದ್ದ ಶಸ್ತ್ರಾಸ್ತ್ರಗಳು ಕಾಣೆಯಾಗಿವೆ’ ಎಂದು ತಿಳಿಸಿದ್ದಾರೆ.

400 ನಕ್ಸಲರಿಂದ ದಾಳಿ
ಬಿಜಾಪುರ ಜಿಲ್ಲೆಯ ತರೆಮ್‌, ಉಸೂರ್‌, ಪಮೇಡ್‌, ಸುಕ್ಮಾ ಜಿಲ್ಲೆಯ ಮಿನ್‌ಪಾ ಹಾಗೂ ನರ್ಸಾಪುರಂ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಕಾರ್ಯಾಚರಣೆ ಆರಂಭವಾಗಿತ್ತು. 2,000 ಸಿಬ್ಬಂದಿ ಭಾಗಿಯಾಗಿದ್ದರು. ಅಧಿಕಾರಿಯೊಬ್ಬರ ಪ್ರಕಾರ, ಗುಂಡಿನ ದಾಳಿ ಕೃತ್ಯದಲ್ಲಿ ಸುಮಾರು 400 ಮಾವೋವಾದಿಗಳು ಭಾಗಿಯಾಗಿದ್ದರು. ಪಿಎಲ್‌ಜಿಎ ಸಂಘಟನೆ 1ನೇ ಬೆಟಾಲಿಯನ್‌ನ ಹಿದ್ಮಾ ಮತ್ತು ಆತನ ಸಹಚರರಾದ ಸುಜಾತಾ ಈ ದಾಳಿಯ ಹಿಂದಿದ್ದಾರೆ ಎಂದು ಶಂಕಿಸಲಾಗಿದೆ. ಕೋಬ್ರಾ ಯೋಧರು ತೀವ್ರ ಪ್ರತಿರೋಧ ತೋರಿದ್ದರಿಂದ ನಕ್ಸಲರು ಇನ್ನಷ್ಟು ದಾಳಿ ಮುಂದುವರಿಸಲಾಗಲಿಲ್ಲ.

ಮೂರು ದಿಕ್ಕಿನಿಂದ ಸುತ್ತುವರೆದ ನಕ್ಸಲರು, ಮೆಷನ್ ಗನ್ ನಿಂದ ಗುಂಡಿನ ಸುರಿಮಳೆ
ಮಾವೋವಾದಿಗಳು ಮೂರು ದಿಕ್ಕಿನಿಂದ ಭದ್ರತಾ ಪಡೆಯನ್ನು ಸುತ್ತುವರಿದಿದ್ದು, ಲೈಟ್ ಮಷಿನ್ ಗನ್ ಬಳಸಿ ಗುಂಡಿನ ಸುರಿಮಳೆಗೈದಿದ್ದಾರೆ ಹಾಗೂ ಸುಧಾರಿತ ಸ್ಫೋಟಕ ಸಾಧನ (ಎಲ್ಇಡಿ)ವನ್ನೂ ದಾಳಿಗೆ ಬಳಸಿದ್ದಾರೆ. ನಕ್ಸಲೀಯರ ಕಡೆಯೂ 10 ರಿಂದ 12 ಜನರು ಸತ್ತಿರುವ ಶಂಕೆ ಇದ್ದು, ಶವಗಳನ್ನು ಅವರು ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಒಯ್ದಿದ್ದಾರೆ. ಇನ್ನು ಗಾಯಗೊಂಡಿರುವ ಯೋಧರು, ಭದ್ರತಾ ಸಿಬ್ಬಂದಿಗಳಲ್ಲಿ 7 ಜನರನ್ನು ರಾಯಪುರದಲ್ಲಿನ ಆಸ್ಪತ್ರೆ ಹಾಗೂ 23 ಜನರನ್ನು ಬಿಜಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಸಕಾಲದಲ್ಲಿ ಸ್ಥಳಕ್ಕೆ ಆಗಮಿಸದ ಹೆಲಿಕಾಪ್ಟರ್
ನಕ್ಸಲರ ವಿರುದ್ಧ ಕಾರ್ಯಾಚರಣೆಗೆ 790 ಸಿಬ್ಬಂದಿಯ ಬಲ ಬಳಸಲು ಅನುಮೋದನೆ ದೊರೆತಿತ್ತು. ಸುದೀರ್ಘ ಅವಧಿಯ ಕಾರ್ಯಾಚರಣೆ ಆದ್ದರಿಂದ ಉಳಿದ ಸಿಬ್ಬಂದಿಯನ್ನು ಬೆಂಬಲವಾಗಿ ಬಳಸಲಾಗಿತ್ತು. ಗುಂಡಿನ ಚಕಮಕಿ ಆರಂಭವಾದ ಹಿಂದೆಯೇ ರಕ್ಷಣಾ ಕಾರ್ಯಕ್ಕೆ ನೆರವಾಗಲು ಹೆಲಿಕಾಪ್ಟರ್ ಸೇವೆ ಪಡೆಯಲಾಯಿತು. ಆದರೆ, ಸಕಾಲದಲ್ಲಿ ಹೆಲಿಕಾಪ್ಟರ್‌ ಸ್ಥಳಕ್ಕೆ ತಲುಪಲು ಆಗಲಿಲ್ಲ. ಸಂಜೆ 5ಕ್ಕೆ ಸ್ಥಳಕ್ಕೆ  ತಲುಪಿದ್ದು, ಗಾಯಾಳುಗಳ ಕರೆತರಲು ನೆರವಾಯಿತು ಎಂದು ಅಧಿಕಾರಿ ಮೂಲಗಳು ತಿಳಿಸಿವೆ.
 

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp