ತಮಿಳುನಾಡಿನಲ್ಲಿ ಮತ್ತೆ ಎಐಡಿಎಂಕೆ ಅಧಿಕಾರಕ್ಕೆ: ಸಿ.ಟಿ.ರವಿ

ತಮಿಳುನಾಡಿನಲ್ಲಿ ಬಿಜೆಪಿ ಮುಖ್ಯ ಪಕ್ಷವಲ್ಲ. ಹೀಗಾಗಿ ಎಐಡಿಎಂಕೆಯ ನೇತೃತ್ವದಲ್ಲಿ ಬಿಜೆಪಿ ಸ್ಪರ್ಧೆ ಮಾಡಿದೆ. ಪ್ರತಿಪಕ್ಷಗಳಾದ ಕಾಂಗ್ರೆಸ್, ಎಡಿಎಂಕೆ ಸೇರಿದಂತೆ ಹಲವು ಪಕ್ಚಗಳು ಸ್ಪರ್ಧೆ ಮಾಡಿವೆ.

Published: 05th April 2021 07:37 PM  |   Last Updated: 05th April 2021 07:37 PM   |  A+A-


CT ravi

ಸಿಟಿ ರವಿ

Posted By : Lingaraj Badiger
Source : UNI

ಬೆಂಗಳೂರು: ತಮಿಳುನಾಡಿನಲ್ಲಿ ಬಿಜೆಪಿ ಮುಖ್ಯ ಪಕ್ಷವಲ್ಲ. ಹೀಗಾಗಿ ಎಐಡಿಎಂಕೆಯ ನೇತೃತ್ವದಲ್ಲಿ ಬಿಜೆಪಿ ಸ್ಪರ್ಧೆ ಮಾಡಿದೆ. ಪ್ರತಿಪಕ್ಷಗಳಾದ ಕಾಂಗ್ರೆಸ್, ಎಡಿಎಂಕೆ ಸೇರಿದಂತೆ ಹಲವು ಪಕ್ಚಗಳು ಸ್ಪರ್ಧೆ ಮಾಡಿವೆ. ಮೇಲ್ನೋಟಕ್ಕೆ ಎಐಎಡಿಎಂಕೆ ಹಾಗೂ ಡಿಎಂಕೆ ನಡುವೆ ಸ್ಪರ್ಧೆ ಕಂಡುಬಂದರೂ ಸಹ ಚುನಾವಣಾ ತಂತ್ರ ಮಾಡುತ್ತಿರುವುದು ಬಿಜೆಪಿ ಪಕ್ಷವೇ ಎಂದು ತಮಿಳುನಾಡು ಬಿಜೆಪಿ ಉಸ್ತುವಾರಿ ಸಿ.ಟಿ.ರವಿ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಪಂಚರಾಜ್ಯಗಳ ಚುನಾವಣಾ ಹಿನ್ನಲೆಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿ.ಟಿ.ರವಿ, ಕಳೆದ ನವೆಂಬರ್ ನಲ್ಲಿ ತಮಿಳುನಾಡಿನ ವೆಟ್ಇವಲ್ ನಲ್ಲಿ ಬಿಜೆಪಿ ನಡೆಸಿದ್ದ ಯಾತ್ರೆಗೆ ಅಭೂತಪೂರ್ವ ಜನಸ್ಪಂದನೆ ವ್ಯಕ್ತವಾಗಿದೆ. ತಮಿಳುನಾಡಿನ 20 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಡೀ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಪ್ರಚಾರ ಮಾಡಿದೆ. ತಮಿಳುನಾಡಿನ ಚುನಾವಣಾ ಪ್ರಚಾರಕ್ಕೆ ಕರ್ನಾಟಕದ ಬಿಜೆಪಿ ನಾಯಕರು ಸಹ ಪ್ರಚಾರ ಮಾಡುತ್ತಿದ್ದಾರೆ. ಇದರ ಜೊತೆಗೆ ಪ್ರಧಾನಮಂತ್ರಿ, ಕೇಂದ್ರ ಗೃಹ ಸಚಿವರು ಸೇರಿದಂತೆ ಹಲವು ಕೇಂದ್ರ ಸಚಿವರು ಪ್ರಚಾರ ನಡೆಸಿದ್ದಾರೆ. ಇದೆಲ್ಲವನ್ನು ನೋಡಿದರೆ ತಮಿಳುನಾಡಿನಲ್ಲಿ ಬಿಜೆಪಿಗೆ ಒಳ್ಳೆಯ ಫಲಿತಾಂಶ ಬರುವ ವಿಶ‍್ವಾಸವಿರುವುದಾಗಿ ಹೇಳಿದರು.

ಕರ್ನಾಟಕ ಮಾದರಿಯಲ್ಲಿಯೇ ತಮಿಳುನಾಡಿನಲ್ಲಿಯೂ ಸಹ ಪಕ್ಷ ಸಂಘಟನೆ ಮಾಡಲಾಗಿದೆ. ಕೇಂದ್ರದ ಅಭಿವೃದ್ಧಿ ಯೋಜನೆಗಳು, ಕಾಂಗ್ರೆಸ್, ಎಡಿಎಂಕೆ ನಡೆ, ಅಲ್ಲಿನ ವಾಸ್ತವ ಸ್ಥಿತಿಗಳ ಮೂಲಕ ಪ್ರಚಾರ ಮಾಡಿದ್ದು, ಅಲ್ಲಿನ ಜನರು ಅಪಪ್ರಚಾರಕ್ಕೆ ಕಿವಿಗೊಡದೇ ವಾಸ್ತವ ಸ್ಥಿತಿಯನ್ನು ಅರ್ಥೈಸಿಕೊಂಡಿದ್ದಾರೆ ಎಂದು ಸಿ.ಟಿ.ರವಿ ಹೇಳಿದರು.

ಡಿಎಂಕೆ ತಮಿಳು ಅಸ್ಮಿತೆಯ ವಿರುದ್ದ ಇದೆ. ಅದೊಂದು ಕಾರ್ಪೊರೆಟ್ ಕಂಪನಿಯಂತೆ ಆಗಿದೆ. ಅಲ್ಲಿ ಕರುಣಾನಿಧಿಯವರ ಕುಟುಂಬಕ್ಕೆ ದೊಡ್ಡ ಪಾಲು, ಉಳಿದಂತೆ ಮಾರನ್ ಮತ್ತಿತರರಿಗೆ ಮತ್ತೊಂದಿಷ್ಟು ಷೇರು ಕೊಟ್ಟಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿಗೆ ಎಐಎಡಿಎಂಕೆ ನ್ಯಾಚುರಲ್ ಪಾರ್ಟನರ್. ಅವರಲ್ಲಿ ವಂಶಪಾರಂಪರ್ಯ ಆಡಳಿತ ಇಲ್ಲ. ಎನ್ ಡಿಎ ಒಂದು ಭಾಗ ಎಐಎಡಿಎಂಕೆ. ಸ್ವಾಭಾವಿಕವಾಗಿ ತಮಿಳುನಾಡಿನಲ್ಲಿ ಎಐಎಡಿಎಂಕೆಯೇ ಮೇಜರ್ ಪಾರ್ಟಿಯಾಗಿದ್ದರಿಂದ ಈ ಚುನಾವಣೆಯಲ್ಲಿ ಮತ್ತೆ ಎಐಎಡಿಎಂಕೆಯೇ ಅಧಿಕಾರಕ್ಕೆ ಬರಲಿದೆ. ಎಐಎಡಿಎಂಕೆ ಜೊತೆ ಬಿಜೆಪಿ ಕೈ ಜೋಡಿಸಿದೆ. ಲೋಕಸಭಾ ಕ್ಷೇತ್ರಗಳಲ್ಲೂ ಒಟ್ಟಾಗಿ ಸ್ಪರ್ಧೆ ಮಾಡಲಿದೆ ಎಂದು ಸಿ.ಟಿ.ರವಿ ಸ್ಪಷ್ಟಪಡಿಸಿದರು.

ನಾಳೆ ಅಂದರೆ ಏ 6 ಬಿಜೆಪಿ ಸಂಸ‍್ಥಾಪನೆ ದಿನವಾಗಿದ್ದು, ಪಕ್ಷ ಸ್ಥಾಪನೆಯಾಗಿ 41 ವರ್ಷವಾದ್ದರಿಂದ ನಾಳೆ ಬಿಜೆಪಿಗೆ ವಿಶೇಷವಾದ ದಿನವಾಗಿದೆ ಎಂದು ಒತ್ತಿ ಹೇಳಿದರು.

ಬಿಜೆಪಿಯ ಡಿಎನ್ ಎ ನಲ್ಲಿ ವಂಶಪಾರಂಪರ್ಯ ಆಡಳಿತ ಎಂಬುದಿಲ್ಲ. ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರೇ ಮಾಲೀಕರು. ಆದರೆ ಕಾಂಗ್ರೆಸ್ ಗೆ ಮಾಲೀಕರು ಅಂದರೆ ನೆಹರು ಕುಟುಂಬ ಮತ್ತು ಜೆಡಿಎಸ್ ಗೆ ದೇವೇಗೌಡರ ಕುಟುಂಬವೇ ಮಾಲೀಕ. ಯಡಿಯೂರಪ್ಪ ಹಾಗೂ ಮೋದಿ, ಅಮಿತ್ ಶಾ ಬಿಜೆಪಿಯ ನಾಯಕರುಗಳಷ್ಟೆ, ಕಾರ್ಯಕರ್ತರೇ ನಿಜವಾದ ಮಾಲೀಕರು. ಕರ್ನಾಟಕದಲ್ಲಿ ವಂಶಪಾರಂಪರ್ಯ ಆಡಳಿತ ಬರುವುದಿಲ್ಲ. ಪಕ್ಷದಲ್ಲಿ ಕೇಂದ್ರದ ನಾಯಕತ್ವವೇ ಅಂತಿಮ ನಿರ್ಣಯ ತೆಗೆದುಕೊಳ್ಳುತ್ತದೆ. ನಮ್ಮ ಪಕ್ಷದಲ್ಲಿ ಉತ್ತರಾಧಿಕಾರಿ ಪ್ರವೃತ್ತಿ ಇಲ್ಲ. ಪಕ್ಷದ ನಿರ್ಣಯದ ಮೇಲೆ ಫ್ಯಾಮಿಲಿ ಪ್ರಭಾವ ಬೀರುವುದಿಲ್ಲ ಎಂದ ಸಿ.ಟಿ. ರವಿ ಹೇಳಿದರು.

ಇದೇ ವೇಳೆ ಯಡಿಯೂರಪ್ಪ ವಿರುದ್ಧ ಸಚಿವ ಈಶ್ವರಪ್ಪ ದೂರು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಶ್ವರನಪ್ಪವರ ಪತ್ರ ನನಗೆ ತಲುಪಿಲ್ಲ. ಇಂದಷ್ಟೇ ಬೆಂಗಳೂರಿಗೆ ಬಂದಿದ್ದೇನೆ. ಈಶ್ವರಪ್ಪನವರೂ ನನಗೆ ದೂರವಾಣಿ ಕರೆ ಮಾಡಿದ್ದರು. ನಾನು ಅವರಿಗೆ ಸಿಎಂ ಜತೆ, ಅರುಣ್ ಸಿಂಗ್ ಜತೆ ಮಾತನಾಡಿ, ಜೆ.ಪಿ.ನಡ್ಡಾ ಅವರೊಂದಿಗೆ ಮಾತನಾಡಿ ಎಂದು ಸಲಹೆ ಮಾಡಿದ್ದೇನೆ. ಈ ಬಗ್ಗೆ ಪಕ್ಷದ ಚೌಕಟ್ಟಿನೊಳಗೆ ಮಾತನಾಡುತ್ತೇನೆ. ಬಹಿರಂಗವಾಗಿ ಮಾತನಾಡೋದಿಲ್ಲ. ಕೋರ್ ಕಮಿಟಿ ಸಭೆಯಲ್ಲಿ ಮಾತನಾಡುತ್ತೇನೆ‌. ಈಶ್ವರಪ್ಪನವರು ಪಕ್ಷದ ಅಧ್ಯಕ್ಷರಾಗಿದ್ದವರು. ಅವರಿಗೆ ನಾನು ಹೇಳೋದಕ್ಕೆ ಸಾಧ್ಯವಾಗುವುದಿಲ್ಲ. ಪಕ್ಷದ ವೇದಿಕೆಯಲ್ಲಿ ಮಾತನಾಡುವುದಾಗಿ ಹೇಳಿದರು.


Stay up to date on all the latest ರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp