ಡಸಾಲ್ಟ್ ನಿಂದ ಮಧ್ಯವರ್ತಿಗೆ 1.1 ಮಿಲಿಯನ್ ಯುರೋ ಪಾವತಿ: ಫ್ರೆಂಚ್ ಮಾಧ್ಯಮ ಹೇಳಿಕೆ ನಂತರ ತನಿಖೆಗೆ ಕಾಂಗ್ರೆಸ್ ಒತ್ತಾಯ!
ರಫೇಲ್ ವಿಮಾನ ತಯಾರಿಕಾ ಕಂಪನಿ ಡಸಾಲ್ಟ್ ನಿಂದ ಮಧ್ಯವರ್ತಿಗೆ 1.1 ಮಿಲಿಯನ್ ಯುರೋವನ್ನು ಪಾವತಿಸಲಾಗಿದೆ ಎಂಬ ಫ್ರೆಂಚ್ ಮಾಧ್ಯಮಗಳ ವರದಿ ನಂತರ ರಫೇಲ್ ರಕ್ಷಣಾ ಒಪ್ಪಂದದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಕೋರಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಉತ್ತರಿಸುವಂತೆ ಒತ್ತಾಯಿಸಿದೆ.
Published: 05th April 2021 06:28 PM | Last Updated: 05th April 2021 06:54 PM | A+A A-

ರಫೇಲ್ ಯುದ್ಧ ವಿಮಾನಗಳು
ನವದೆಹಲಿ: ರಫೇಲ್ ವಿಮಾನ ತಯಾರಿಕಾ ಕಂಪನಿ ಡಸಾಲ್ಟ್ ನಿಂದ ಮಧ್ಯವರ್ತಿಗೆ 1.1 ಮಿಲಿಯನ್ ಯುರೋವನ್ನು ಪಾವತಿಸಲಾಗಿದೆ ಎಂಬ ಫ್ರೆಂಚ್ ಮಾಧ್ಯಮಗಳ ವರದಿ ನಂತರ ರಫೇಲ್ ರಕ್ಷಣಾ ಒಪ್ಪಂದದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಕೋರಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಉತ್ತರಿಸುವಂತೆ ಒತ್ತಾಯಿಸಿದೆ.
ರಾಹುಲ್ ಗಾಂಧಿ ರಫೇಲ್ ರಕ್ಷಣಾ ಒಪ್ಪಂದದಲ್ಲಿನ ಅವ್ಯವಹಾರ ಕುರಿತು ಪದೇ ಪದೇ ಮಾಡುತ್ತಿದ್ದ ಆರೋಪಗಳು ಸರಿಯಾಗಿವೆ. ಫ್ರೆಂಚ್ ನ್ಯೂಸ್ ಫೋರ್ಟಲ್ ವರದಿ ಇದನ್ನು ಸಾಬೀತುಪಡಿಸಿದೆ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ ಸುದ್ದಿಗೋಷ್ಠಿಯಲ್ಲಿಂದು ಹೇಳಿದರು.
ಈ ಆರೋಪ ಕುರಿತಂತೆ ಕೇಂದ್ರ ಸರ್ಕಾರ ಅಥವಾ ಬಿಜೆಪಿಯಿಂದ ಯಾವುದೇ ತತ್ ಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಈ ಹಿಂದೆ ದೇಶದ ಅತಿದೊಡ್ಡ ರಕ್ಷಣಾ ಒಪ್ಪಂದದಲ್ಲಿ ಯಾವುದೇ ಅಕ್ರಮ ನಡೆದಿಲ್ಲ, ಪ್ರಾಮಾಣಿಕವಾಗಿ ಖರೀದಿ ಪ್ರಕ್ರಿಯೆ ನಡೆದಿದೆ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದರು.
2016ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ರಫೇಲ್ ತಯಾರಿಕಾ ಕಂಪನಿ ಡೆಸಾಲ್ಟ್ ಅಕ್ರಮವಾಗಿ 1.1 ಮಿಲಿಯನ್ ಯುರೋವನ್ನು ಮಧ್ಯವರ್ತಿ ಭಾರತದ ಕಂಪನಿ-Defsys ಸಲ್ಯೂಷನ್ ಗೆ ನೀಡಿದೆ ಎಂದು ಫ್ರೆಂಚ್ ಭ್ರಷ್ಟಾಚಾರ ತಡೆ ಏಜೆನ್ಸಿ ನಡೆಸಿದ ತನಿಖೆಯಲ್ಲಿ ಬಹಿರಂಗಪಡಿಸಿದೆ ಎಂದು ಫ್ರೆಂಚ್ ಪೋರ್ಟಲ್ ವರದಿ ಮಾಡಿರುವುದಾಗಿ ಸುರ್ಜೆವಾಲಾ ಹೇಳಿದರು.
ವಾಸ್ತವದಲ್ಲಿ ಎಷ್ಟು ಲಂಚ ಮತ್ತು ಕಮಿಷನ್ ಪಾವತಿಸಲಾಗಿದೆ ಮತ್ತು ಭಾರತ ಸರ್ಕಾರದಲ್ಲಿನ ಯಾರಿಗೆ ನೀಡಲಾಗಿದೆ ಎಂಬುದನ್ನು ಕಂಡುಹಿಡಿಯಲು ಭಾರತದ ಅತಿದೊಡ್ಡ ರಕ್ಷಣಾ ಒಪ್ಪಂದದ ಬಗ್ಗೆ ಪೂರ್ಣ ಮತ್ತು ಸ್ವತಂತ್ರ ತನಿಖೆಯ ಅಗತ್ಯವಿಲ್ಲವೇ?ಎಂದು ಪ್ರಶ್ನಿಸಿದ ಸುರ್ಜೆವಾಲಾ, ಪ್ರಧಾನಿ ನರೇಂದ್ರ ಮೋದಿ ಇದೀಗ ದೇಶಕ್ಕೆ ಉತ್ತರಿಸಬೇಕಾಗಿದೆ ಎಂದರು.