ಕ್ಯಾಚ್ ಹಿಡಿದು ಔಟ್ ಮಾಡಿದ ಫೀಲ್ಡರ್ ಮೇಲೆ ಬ್ಯಾಟ್ ನಿಂದ ಹಲ್ಲೆ, ಫೀಲ್ಡರ್ ಗೆ ಗಂಭೀರ ಗಾಯ!
49ರನ್ ಗಳಿಸಿ ಅರ್ಧಶತಕ ಹೊಸ್ತಿಲಲ್ಲಿದ್ದ ಬ್ಯಾಟ್ಸ್ ಮನ್ ಅನ್ನು ಕ್ಯಾಚ್ ಹಿಡಿದು ಔಟ್ ಮಾಡಿದ ಫೀಲ್ಡರ್ ಮೇಲೆ ಬ್ಯಾಟ್ಸ್ ಮನ್ ಮಾರಣಾಂತಿಕ ಹಲ್ಲೆ ನಡೆಸಿದ್ದು, ಹಲ್ಲೆ ನಡೆಸಿದ ಆಟಗಾರನ ಮೇಲೆ ಇದೀಗ ಕೊಲೆಯತ್ನ ಪ್ರಕರಣ ದಾಖಲಾಗಿದೆ.
Published: 05th April 2021 10:49 AM | Last Updated: 05th April 2021 01:05 PM | A+A A-

ಸಾಂದರ್ಭಿಕ ಚಿತ್ರ
ಗ್ವಾಲಿಯರ್: 49ರನ್ ಗಳಿಸಿ ಅರ್ಧಶತಕ ಹೊಸ್ತಿಲಲ್ಲಿದ್ದ ಬ್ಯಾಟ್ಸ್ ಮನ್ ಅನ್ನು ಕ್ಯಾಚ್ ಹಿಡಿದು ಔಟ್ ಮಾಡಿದ ಫೀಲ್ಡರ್ ಮೇಲೆ ಬ್ಯಾಟ್ಸ್ ಮನ್ ಮಾರಣಾಂತಿಕ ಹಲ್ಲೆ ನಡೆಸಿದ್ದು, ಹಲ್ಲೆ ನಡೆಸಿದ ಆಟಗಾರನ ಮೇಲೆ ಇದೀಗ ಕೊಲೆಯತ್ನ ಪ್ರಕರಣ ದಾಖಲಾಗಿದೆ.
ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡ ಆಟಗಾರನನ್ನು 23 ವರ್ಷದ ಸಚಿನ್ ಪರಶಾರ್ ಎಂದು ಗುರುತಿಸಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಟಗಾರನನ್ನೂ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಹಲ್ಲೆ ಮಾಡಿದ ಬ್ಯಾಟ್ಸ್ ಮನ್ ಅನ್ನು ಸಂಜಯ್ ಪಾಳಿಯಾ ಎಂದು ಗುರುತಿಸಲಾಗಿದ್ದು, ಈತನನ್ನು ವಶಕ್ಕೆ ಪಡೆಯಲು ಪೊಲೀಸರು ಬಲೆ ಬೀಸಿದ್ದಾರೆ. ಅಲ್ಲದೆ ಕೊಲೆಯತ್ನ ಪ್ರಕರಣ ದಾಖಲಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಗ್ವಾಲಿಯರ್ ಎಸ್ ಪಿ ರಾಮ್ ನರೇಶ್ ಪಚೌರಿ ಅವರು, ಶನಿವಾರ ಇಲ್ಲಿನ ಗೋಲಾ ಕಾ ಮಂದಿರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮೇಲಾ ಗ್ರೌಂಡ್ ನಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಸಂಜಯ್ ಪಾಳಿಯಾ 49 ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿದ್ದರು. ಈ ವೇಳೆ ಬೌಲರ್ ಎಸೆದ ಚೆಂಡನ್ನು ಸಿಕ್ಸರ್ ಭಾರಿಸಲು ಬಲವಾಗಿ ಭಾರಿಸಿದ್ದಾರೆ. ಆದರೆ ಚೆಂಡು ನೇರವಾಗಿ ಫೀಲ್ಡರ್ ಸಚಿನ್ ಪರಶಾರ್ ಕೈ ಸೇರಿದೆ. ಈ ವೇಳೆ ಅರ್ಧಶತಕ ಪೂರೈಸಲು ಬಿಡಲಿಲ್ಲ ಎಂದು ಕ್ರೋಧಗೊಂಡ ಸಂಜಯ್ ಏಕಾಏಕಿ ಸಚಿನ್ ಮೇಲೆ ಬ್ಯಾಟ್ ನಿಂದ ಹಲ್ಲೆ ನಡೆಸಿದ್ದಾನೆ. ತಲೆಗೆ ತೀವ್ರ ಪೆಟ್ಟಾಗಿದ್ದ ಸಚಿನ್ ನನ್ನು ಸಹ ಆಟಗಾರರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ.
ಇತ್ತ ಹಲ್ಲೆ ನಡೆಸಿದ ಸಚಿನ್ ಪರಶಾರ್ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ಪಚೌರಿ ಹೇಳಿದ್ದಾರೆ.