ಪಂಚರಾಜ್ಯ ಚುನಾವಣೆ: ತಮಿಳುನಾಡು, ಕೇರಳ ಪುದುಚೇರಿಯಲ್ಲಿ ಏಕಹಂತ, ಪ.ಬಂಗಾಳ, ಅಸ್ಸಾಂನಲ್ಲಿ 3ನೇ ಹಂತದ ಮತದಾನ ಆರಂಭ

ಪಂಚರಾಜ್ಯ ಚುನಾವಣೆ ಕುತೂಹಲದ ಘಟ್ಟ ತಲುಪಿದ್ದು, ಮಂಗಳವಾರ ತಮಿಳುನಾಡು, ಪುದುಚೇರಿ ಹಾಗೂ ಕೇರಳದಲ್ಲಿ ಒಂದನೇ ಹಂತ ಹಾಗೂ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ 3ನೇ ಹಂತದ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. 

Published: 06th April 2021 07:59 AM  |   Last Updated: 06th April 2021 07:59 AM   |  A+A-


Voting

ಮತದಾನ

Posted By : Manjula VN
Source : Online Desk

ನವದೆಹಲಿ: ಪಂಚರಾಜ್ಯ ಚುನಾವಣೆ ಕುತೂಹಲದ ಘಟ್ಟ ತಲುಪಿದ್ದು, ಮಂಗಳವಾರ ತಮಿಳುನಾಡು, ಪುದುಚೇರಿ ಹಾಗೂ ಕೇರಳದಲ್ಲಿ ಒಂದನೇ ಹಂತ ಹಾಗೂ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ 3ನೇ ಹಂತದ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. 

ಪಶ್ಚಿಮ ಬಂಗಾಳ ಹೊರತುಪಡಿಸಿ ಉಳಿದ 4 ರಾಜ್ಯಗಳಲ್ಲಿ ಚುನಾವಣೆ ಮುಕ್ತಾಯಗೊಳ್ಳಲಿದ್ದು, ಮೇ.2 ರಂದು ಫಲಿತಾಂಶ ಪ್ರಕಟವಾಗಲಿದೆ. ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಬಗ್ಗೆ ಹೇಳುವುದಾದರೆ ಇಲ್ಲಿ 94 ವಿಧಾನಸಭಾ ಸ್ಥಾನಗಳಿಗೆ 8 ಹಂತಗಳಲ್ಲಿ ಮತದಾನ ನಡೆಯಲಿದೆ. 

ಮಾರ್ಚ್ 27, ಏಪ್ರಿಲ್ 1ರಂದು ಮೊದಲ ಮತ್ತು ಎರಡನೇ ಹಂತದಲ್ಲಿ 30-30 ಸ್ಥಾನಗಳಲ್ಲಿ ಎರಡು ಹಂತಗಳ ಮತದಾನ ಪೂರ್ಣಗೊಂಡಿದ್ದು ಇಂದು ರನೇ ಹಂತದಲ್ಲಿ 31 ಸ್ಥಾನಗಳಲ್ಲಿ ಮತದಾನ ನಡೆಯಲಿದೆ. ಇವುಗಳಲ್ಲಿ ಹೂಗ್ಲಿ (8), ಹೌರಾ (7), ದಕ್ಷಿಣ 24 ಪರಗಣ (16) ಸ್ಥಾನಗಳಿಗೆ ಮತದಾನ ನಡೆಯಲಿದೆ. 

ಈ ಹಂತದಲ್ಲಿ 205 ಅಭ್ಯರ್ಥಿಗಳು ಕಣದಲ್ಲಿದ್ದಾರೆ.  ಚುನಾವಣೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದ್ದು, ಇಡೀ ರಾಜ್ಯದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಈ ಭಾಗದಲ್ಲಿ ಯಾವುದೇ ತೊಂದರೆ ಇಲ್ಲದೆ ಮತದಾನ ನಡೆಸುವ ಉದ್ದೇಶದಿಂದ ಸಾಕಷ್ಟು ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ.  

ತಮಿಳುನಾಡಿನಲ್ಲಿ 2021ರ ವಿಧಾನಸಭಾ ಚುನಾವಣೆ ಇತಿಹಾಸದಲ್ಲೇ ಬಹಳ ಮಹತ್ವದ ಚುನಾವಣೆ ಎಂದು ಹೇಳಲಾಗುತ್ತಿದೆ. ಏಕೆಂದರೆ ತಮಿಳುನಾಡಿನ ಬಲಿಷ್ಠ ರಾಜಕೀಯ ನಾಯಕರಾದ ಡಿಎಂಕೆ ನಾಯಕ ಎಂ ಕರುಣಾನಿಧಿ ಮತ್ತು ಎಐಎಡಿಎಂಕೆ ನಾಯಕಿ ಜೆ ಜಯಲಲಿತಾ ಅವರ ಅನುಪಸ್ಥಿತಿಯಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. 

ರಾಜ್ಯದಲ್ಲಿ ಇಂದು ಒಂದೇ ಹಂತದಲ್ಲಿ 234 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.  ತಮಿಳುನಾಡಿನಲ್ಲಿ ಪುರುಷರಿಗಿಂತ (3,09,23,651) ಮಹಿಳೆಯರೇ (3,19,39,112) ಅಧಿಕ ಸಂಖ್ಯೆಯಲ್ಲಿದ್ದಾರೆ. 7,192 ತೃತೀಯ ಲಿಂಗ ಜನರನ್ನು ಒಳಗೊಂಡಂತೆ 6.28 ಕೋಟಿ ಮತದಾರರು 3,998 ಅಭ್ಯರ್ಥಿಗಳಲ್ಲಿ ತಮ್ಮ ನಾಯಕನನ್ನು ಆರಿಸಲಿದ್ದಾರೆ.

ಕೇರಳದಲ್ಲಿ, ಎಲ್ಲಾ 140 ವಿಧಾನಸಭಾ ಕ್ಷೇತ್ರಗಳ ಮತದಾನಕ್ಕಾಗಿ ಒಟ್ಟು 40,771 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ರಾಜ್ಯದ ಒಟ್ಟು ಮತದಾರರ ಸಂಖ್ಯೆ 2,74,46,039, ಇದರಲ್ಲಿ 1,32,83,724 ಪುರುಷರು, 1,41,62,025 ಮಹಿಳೆಯರು ಮತ್ತು 290 ತೃತೀಯ ಲಿಂಗದವರು ಸೇರಿದ್ದಾರೆ. 

ಈ ಬಾರಿ ಒಟ್ಟು 957 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕೇರಳದ ಪಾಲಕ್ಕಾಡ್ ಕ್ಷೇತ್ರವು ಒಂದು ಪ್ರಮುಖ ಕ್ಷೇತ್ರವಾಗಿದೆ, ಏಕೆಂದರೆ ಈ ಚುನಾವಣಾ ಯುದ್ಧದಲ್ಲಿ 'ಮೆಟ್ರೋ ಮ್ಯಾನ್' ಇ.ಶ್ರೀಧರನ್ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಕೂಡ ಇಂದು ಮತದಾನ ನಡೆಯಲಿದೆ. ಇಲ್ಲಿ ಮತದಾನಕ್ಕಾಗಿ 1,558 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಟ್ಟು 30 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಇದರಲ್ಲಿ 324 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪುದುಚೇರಿಯ 30 ಕ್ಷೇತ್ರಗಳಲ್ಲಿ 324 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು ಒಟ್ಟು 10,04,507 ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ.

ಅದೇ ಸಮಯದಲ್ಲಿ, ಅಸ್ಸಾಂನಲ್ಲಿ ಇಂದು ಕೊನೆಯ ಹಂತದ ಮತದಾನ ನಡೆಯಲಿದೆ. 40 ವಿಧಾನಸಭಾ ಸ್ಥಾನಗಳಲ್ಲಿ ಒಟ್ಟು 337 ಅಭ್ಯರ್ಥಿಗಳು ತಮ್ಮ ಅದೃಷ್ಟವನ್ನು ಪ್ರಯತ್ನಿಸುತ್ತಿದ್ದಾರೆ. ಈ ಸ್ಥಾನಗಳು ರಾಜ್ಯದ 12 ಜಿಲ್ಲೆಗಳಲ್ಲಿ ಬರುತ್ತವೆ. ಈ ಹಂತದಲ್ಲಿ, ಈಶಾನ್ಯದಲ್ಲಿ ಬಿಜೆಪಿಯ ಚಾಣಕ್ಯ ಎಂದು ಕರೆಯಲ್ಪಡುವ ಹೇಮಂತ್ ಬಿಸ್ವಾ ಶರ್ಮಾ ಅವರ ಭವಿಷ್ಯವನ್ನು ಸಹ ನಿರ್ಧರಿಸಲಾಗುತ್ತದೆ. ಅವರು ಜಲುಕ್ಬಾದಿ ವಿಧಾನಸಭಾ ಕ್ಷೇತ್ರದಿಂದ ತಮ್ಮ ಅದೃಷ್ಟ ಪರೀಕ್ಷಿಸುತ್ತಿದ್ದಾರೆ. ಗುವಾಹಟಿ ವಿಧಾನಸಭಾ ಸ್ಥಾನದಲ್ಲಿ ಗರಿಷ್ಠ 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp