ರಫೇಲ್ ಡೀಲ್ ನಲ್ಲೂ ಮಧ್ಯವರ್ತಿಗೆ ಕಿಕ್ ಬ್ಯಾಕ್: ವಿವಿಐಪಿ ಚಾಪರ್ ಹಗರಣದ ಆರೋಪಿಗೆ 1.1 ಮಿಲಿಯನ್ ಯೂರೋ ಲಂಚ!

ಭಾರತ-ಫ್ರಾನ್ಸ್ ನಡುವಿನ ರಫೇಲ್ ಯುದ್ಧ ವಿಮಾನ ಒಪ್ಪಂದದ ಕುರಿತು ಮತ್ತೆ ವಿವಾದ ಭುಗಿಲೆದ್ದಿದ್ದು, ರಫೇಲ್ ಯುದ್ಧ ವಿಮಾನ ತಯಾರಿಕಾ ಸಂಸ್ಥೆ ಡಸಾಲ್ಟ್ ಏವಿಯೇಷನ್ ಭಾರತೀಯ ಮಧ್ಯವರ್ತಿಗೆ ಒಂದು ಮಿಲಿಯನ್ ಯುರೋ ಲಂಚ ನೀಡಿದೆ ಎಂಬ ಆರೋಪ ಕೇಳಿ ಬಂದಿದೆ.

Published: 06th April 2021 12:26 PM  |   Last Updated: 06th April 2021 01:12 PM   |  A+A-


Rafale1

ರಫೇಲ್ ಯುದ್ಧ ವಿಮಾನ

Posted By : Srinivasamurthy VN
Source : PTI

ನವದೆಹಲಿ: ಭಾರತ-ಫ್ರಾನ್ಸ್ ನಡುವಿನ ರಫೇಲ್ ಯುದ್ಧ ವಿಮಾನ ಒಪ್ಪಂದದ ಕುರಿತು ಮತ್ತೆ ವಿವಾದ ಭುಗಿಲೆದ್ದಿದ್ದು, ರಫೇಲ್ ಯುದ್ಧ ವಿಮಾನ ತಯಾರಿಕಾ ಸಂಸ್ಥೆ ಡಸಾಲ್ಟ್ ಏವಿಯೇಷನ್ ಭಾರತೀಯ ಮಧ್ಯವರ್ತಿಗೆ ಒಂದು ಮಿಲಿಯನ್ ಯುರೋ ಲಂಚ ನೀಡಿದೆ ಎಂಬ ಆರೋಪ ಕೇಳಿ ಬಂದಿದೆ.

ಫ್ರಾನ್ಸ್ ಮೂಲದ 'ಮಿಡಿಯಾಪಾರ್ಟ್' ಎಂಬ ಸಂಸ್ಥೆ ಈ ಬಗ್ಗೆ ವರದಿ ಮಾಡಿದ್ದು, ಭಾರತ ಮತ್ತು ಫ್ರಾನ್ಸ್ ನಡುವಿನ ಸುಮಾರು 58 ಸಾವಿರ ಕೋಟಿ ರೂ ವೆಚ್ಚದಲ್ಲಿ 36 ರಫೇಲ್ ಜೆಟ್ ಖರೀದಿಗೆ  2016ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಫ್ರೆಂಚ್ ಫೈಟರ್ ಜೆಟ್ ರಫೇಲ್ ತಯಾರಿಕಾ ಸಂಸ್ಥೆ ಡಸಾಲ್ಟ್, 36 ರಫೇಲ್‌ ಯುದ್ಧ ವಿಮಾನ ಖರೀದಿಗೆ ಭಾರತವನ್ನು ಒಪ್ಪಿಸಲು ಭಾರತದ ಮಧ್ಯವರ್ತಿಯೊಬ್ಬರಿಗೆ ಒಂದು ಮಿಲಿಯನ್ ಯೂರೋ ಪಾವತಿಸಿದೆ ಎಂದು ಫ್ರಾನ್ಸ್‌ನ ಭ್ರಷ್ಟಾಚಾರ ವಿರೋಧಿ ಸಂಸ್ಥೆ (ಎಎಫ್ಎ)ಯ ತನಿಖೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.

ಅಲ್ಲದೆ ಇದೇ ಮಧ್ಯವರ್ತಿ ಬೇರೊಂದು ರಕ್ಷಣಾ ಒಪ್ಪಂದ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿದ್ದಾನೆ ಎಂದು ಮಿಡಿಯಾಪಾರ್ಟ್ ವರದಿಯಲ್ಲಿ ಹೇಳಲಾಗಿದೆ. 

'ಡಸಾಲ್ಟ್ ಸಂಸ್ಥೆ ಒಪ್ಪಂದ ಕುದುರಿಸಲು ಭಾರತೀಯ ಮಧ್ಯವರ್ತಿಯೋರ್ವನಿಗೆ ಒಂದು ಮಿಲಿಯನ್ ಯುರೋ ಲಂಚ ನೀಡಿದೆ. ಇದೇ ಮಧ್ಯವರ್ತಿ ಬೇರೊಂದು ರಕ್ಷಣಾ ಒಪ್ಪಂದದಲ್ಲಿಯೂ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿದ್ದಾನೆ. ರಫೇಲ್ ಜೆಟ್‌ಗಳ 50 ದೊಡ್ಡ ಮಾದರಿಗಳ ತಯಾರಿಕೆಗಾಗಿ ಈ ಹಣವನ್ನು ಬಳಸಲಾಗಿದೆ ಎಂದು ಡಸಾಲ್ಟ್ ಹೇಳಿದೆ. ಆದರೆ ಇವುಗಳನ್ನು ತಯಾರಿಸಿರುವ ಕುರಿತು ಕಂಪನಿ ಎಎಫ್ಎಗೆ ಯಾವುದೇ ಪುರಾವೆ ಒದಗಿಸಿಲ್ಲ. ಡಸಾಲ್ಟ್ ಕಂಪನಿಯ ವಾರ್ಷಿಕ ಲೆಕ್ಕಪರಿಶೋಧನೆಯ ಸಮಯದಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ. ಮಧ್ಯವರ್ತಿಗೆ ನೀಡಲಾಗಿದೆ ಎಂದು ಹೇಳಲಾಗುತ್ತಿರುವ ಒಟ್ಟು 508,925 ಯುರೋ ಹಣದ ಮಾಹಿತಿ ಬಗ್ಗೆ ತನಿಖೆ ಮಾಡಿದಾಗ, ವರದಿಯಲ್ಲಿ 'ಗ್ರಾಹಕರಿಗೆ ಉಡುಗೊರೆಗಳು' ಎಂಬ ಉಲ್ಲೇಖ ಎಎಫ್ಎ ಗಮನ ಸೆಳೆದಿತ್ತು. ಈ ಕುರಿತು ಹೆಚ್ಚಿನ ತನಿಖೆ ನಡೆಸಿದಾಗ ಒಂದು ಮಿಲಿಯನ್ ಯುರೋ ಇದಕ್ಕಾಗಿ ಖರ್ಚು ಮಾಡಲಾಗಿದೆ ಎಂಬ ಅಂಶ ಬಯಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವರದಿಯಲ್ಲಿರುವ ಮಧ್ಯವರ್ತಿಯಾರು?
ಇನ್ನು ಮಿಡಿಯಾಪಾರ್ಟ್ ವರದಿಯಲ್ಲಿರುವಂತೆ ರಫೇಲ್ ಡೀಲ್ ನಲ್ಲಿರುವ ಮಧ್ಯವರ್ತಿಯ ಹೆಸರು ಸುಶೇನ್ ಗುಪ್ತಾ ಎಂದು ಶಂಕಿಸಲಾಗಿದೆ. ಈ ಹಿಂದೆ ಇದೇ ಸುಶೇನ್ ಗುಪ್ತಾ, ಅಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಚಾಪರ್ ಖರೀದಿ ಪ್ರಕರಣದಲ್ಲೂ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತನಿಖೆ ಎದುರಿಸುತ್ತಿದ್ದಾರೆ ಎನ್ನಲಾಗಿದೆ. ಸುಶೇನ್ ಗುಪ್ತಾಒಡೆತನದ ಭಾರತೀಯ ಕಂಪನಿ ಡೆಫ್ಸಿಸ್ ಸೊಲ್ಯೂಷನ್ಸ್‌, ಗ್ರಾಹಕರಿಗೆ ಉಡುಗೊರೆ ನೀಡಲು ಒಂದು ಮಿಲಿಯನ್ ಯುರೋ ಪಡೆದ ಕುರಿತು ದಾಖಲೆಗಳು (ಇನ್ ವಾಯ್ಸ್) ಎಎಫ್ಎಗೆ ಲಭ್ಯವಾಗಿದೆ ಎನ್ನಲಾಗಿದೆ.

ಈ ಇನ್ವಾಯ್ಸ್ ವಹಿವಾಟಿನ ಒಟ್ಟು ಆದೇಶದ ಮೊತ್ತದ (1,017,850 ಯೂರೊ) ಶೇ. 50ರಷ್ಟು ಆಗಿದ್ದು, 50 ರಫೇಲ್‍ ಸಿ ಯುದ್ಧ ವಿಮಾನದ ತಯಾರಿಕೆಗೆ ಸಂಬಂಧಿಸಿದ್ದಾಗಿದೆ. ಪ್ರತಿ ವಿಮಾನದ ದರ 20,357 ಯೂರೊ ಆಗಿದೆ. ಡಸಾಲ್ಟ್ ಸಂಸ್ಥೆಯು, 59 ರಫೇಲ್‌ ಯುದ್ಧ ವಿಮಾನಗಳ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿದ್ದ ಭಾರತೀಯ ಸಂಸ್ಥೆಗೆ  ಕೊಡುಗೆ ನೀಡಿದ್ದಾಗಿ ಭ್ರಷ್ಟಾಚಾರ ವಿರೋಧಿ ಸಂಸ್ಥೆಗೆ ತಿಳಿಸಿದೆ. ಸ್ವತಃ ಜೆಟ್ ತಯಾರಿಕಾ ಸಂಸ್ಥೆಯಾಗಿ  ಭಾರತೀಯ ಸಂಸ್ಥೆ ಜೊತೆಗೆ ಏಕೆ ಕೈಜೋಡಿಸಬೇಕು ಎಂದು ಫ್ರಾನ್ಸ್‌ನ ಅಧಿಕಾರಿಗಳು ಪ್ರಶ್ನಿಸಿದಾಗ ಡಸಾಲ್ಟ್‌ ಸಂಸ್ಥೆಯಿಂದ ಸಮಾಧಾನಕರವಾದ ಉತ್ತರ ಬಂದಿಲ್ಲ ಎಂದು ಎಎಫ್‍ಎ ಹೇಳಿಕೆಯನ್ನು ಆಧರಿಸಿ ಮೀಡಿಯಾ ಪಾರ್ಟ್ ವೆಬ್‍ಸೈಟ್ ವರದಿ ಮಾಡಿದೆ.
 


Stay up to date on all the latest ರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp