ತಮಿಳುನಾಡು ಚುನಾವಣೆ: ಮತದಾರರ ಪಟ್ಟಿಯಲ್ಲಿ ಶಶಿಕಲಾ ಹೆಸರು ನಾಪತ್ತೆ, ಆಯೋಗಕ್ಕೆ ದೂರು

ತಮಿಳುನಾಡು ವಿಧಾನಸಭೆ ಚುನಾವಣೆ ಮತದಾನ ಚಾಲ್ತಿಯಲ್ಲಿರುವಂತೆಯೇ ಮಾಜಿ ಸಿಎಂ ದಿ. ಜಯಲಲಿತಾ ಅವರ ಆಪ್ತೆ, ವಿ.ಕೆ.ಶಶಿಕಲಾ ಅವರು ಚುನಾವಣಾ ಆಯೋಗದ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

Published: 06th April 2021 11:09 AM  |   Last Updated: 06th April 2021 01:10 PM   |  A+A-


Sasikala

ಶಶಿಕಲಾ

Posted By : Srinivasamurthy VN
Source : Online Desk

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆ ಮತದಾನ ಚಾಲ್ತಿಯಲ್ಲಿರುವಂತೆಯೇ ಮಾಜಿ ಸಿಎಂ ದಿ. ಜಯಲಲಿತಾ ಅವರ ಆಪ್ತೆ, ವಿ.ಕೆ.ಶಶಿಕಲಾ ಅವರು ಚುನಾವಣಾ ಆಯೋಗದ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

ಹೌದು.. ತಮಿಳುನಾಡು ವಿಧಾನಸಭೆ ಚುನಾವಣೆ ಮತದಾನ ಮಾಡಲು ಮುಂದಾಗಿದ್ದ ಶಶಿಕಲಾ ಅವರ ಹೆಸರು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದೆ. ಇದೇ ಕಾರಣಕ್ಕೆ ಶಶಿಕಲಾ ಅವರು ಚುನಾವಣಾ ಆಯೋಗದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಗಮನಕ್ಕೇ ತಾರದೇ ಮತದಾರರ ಪಟ್ಟಿಯಿಂದ ತಮ್ಮ ಹೆಸರು ತೆಗೆಯಲಾಗಿದೆ ಎಂದು ಆರೋಪಿಸಿರುವ ಶಶಿಕಲಾ ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ ಮಾಡುವುದಾಗಿ ಹೇಳಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿರುವ ಶಶಿಕಲಾ ಪರ ವಕೀಲರು, ಅವರ ಗಮನಕ್ಕೆ ತಾರದೇ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯುವುದು ಅನ್ಯಾಯ. ಘಟನೆಯಿಂದ ಅವರಿಗೆ ನೋವಾಗಿದೆ. ಈ ಬಗ್ಗೆ ಕಾನೂನು ಹೋರಾಟ ಮಾಡಲು ಮುಂದಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ಥೌಸಂಡ್ ಲೈಟ್ಸ್ ವಿಧಾನಸಭಾ ಕ್ಷೇತ್ರದಲ್ಲಿನ ಮತದಾರರ ಪಟ್ಟಿಯಲ್ಲಿದ್ದ ಶಶಿಕಲಾ ಹೆಸರನ್ನು ಅಳಿಸಿಹಾಕಲಾಗಿದೆ ಎಂದು ಹೇಳಲಾಗಿದೆ. ಶಶಿಕಲಾ ಅವರು ಈ ಮುನ್ನ ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸದಲ್ಲಿದ್ದರು. ಬಳಿಕ ಎಐಎಡಿಎಂಕೆ ಸರ್ಕಾರ ಆ ಸ್ಥಳವನ್ನು ಸ್ಮಾರಕವಾಗಿಸಲು ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು.

ಲೋಕಸಭಾ ಚುನಾವಣೆ ಸಂದರ್ಭದಲ್ಲೇ ಹೆಸರು ತೆಗೆಯಲಾಗಿತ್ತು!
ಇದೇ ವಿಚಾರವಾಗಿ ಮಾತನಾಡಿರುವ ಶಶಿಕಲಾ ಅವರ ಆಪ್ತ ಹಾಗೂ ವಕೀಲ ಎನ್ ರಾಜಾ ಸೆಂತೂರು ಪಾಂಡಿಯನ್ ಅವರು, ಲೋಕಸಭಾ ಚುನಾವಣೆ ಸಮಯ ಜನವರಿ 31, 2019ರಲ್ಲಿ ಶಶಿಕಲಾ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ. ಈ ವಿಷಯ ಕಳೆದ ತಿಂಗಳು ಗಮನಕ್ಕೆ ಬಂದಿದ್ದು, ಹೆಸರು ಅಳಿಸುವ ಮುನ್ನ ಯಾವುದೇ ನೋಟೀಸ್ ನೀಡಿಲ್ಲ. ಇದು ಅನ್ಯಾಯ ಎಂದು ಮುಖ್ಯ ಚುನಾವಣಾಧಿಕಾರಿ ಸತ್ಯಬ್ರಾತ ಸಾಹೂ ಅವರಿಗೆ ಪತ್ರ ಬರೆದಿದ್ದಾರೆ.

ಈ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯ ಚುನಾವಣಾಧಿಕಾರಿ ಸತ್ಯಬ್ರಾತ ಸಾಹೂ ಅವರು, ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ಶಶಿಕಲಾ ಅವರ ಜವಾಬ್ದಾರಿ. ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು, ಅಳಿಸಲು ಕೊನೆಯ ದಿನಾಂಕವು ಮುಗಿದಿದೆ. ಇದಕ್ಕೆ ಯಾರು ಹೊಣೆಗಾರರು ತಿಳಿದಿಲ್ಲ. ಚುನಾವಣೆ ನಡೆದ ನಂತರ ಈ ವಿಷಯದ ಕುರಿತು ವಿಚಾರಣೆ ನಡೆಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಉತ್ತರಿಸಿದ್ದಾರೆ. 

ಪಿತೂರಿ ಇಲ್ಲ
ಮತದಾರರ ಪಟ್ಟಿಯಲ್ಲಿ ಶಶಿಕಲಾ ಅವರ ಹೆಸರು ಕೈಬಿಟ್ಟು ಹೋಗಿರುವ ಪ್ರಕರಣದಲ್ಲಿ ಯಾವುದೇ ರೀತಿಯ ಪಿತೂರಿ ಇಲ್ಲ. ಮತದಾರರ ಪಟ್ಟಿಯಲ್ಲಿ ಹೆಸರಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದು ಶಶಿಕಲಾ ಅವರ ಜವಾಬ್ದಾರಿಯಾಗಿರುತ್ತದೆ ಎಂದು ಚುನಾವಣಾ ಅಧಿಕಾರಿ ಹೇಳಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp