
ರಾಹುಲ್ ಗಾಂಧಿ
ನವದೆಹಲಿ: ಸುರಕ್ಷಿತ ಜೀವನಕ್ಕೆ ಪ್ರತೀಯೊಬ್ಬ ಭಾರತೀಯನೂ ಅರ್ಹನಾಗಿದ್ದಾನೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಬುಧವಾರ ಹೇಳಿದ್ದಾರೆ.
ಲಸಿಕೆ ಕುರಿತು ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಆರೋಗ್ಯ ಸಚಿವಾಲಯ, ಕೊರೋನಾ ಲಸಿಕೆಯನ್ನು ಆಗತ್ಯವಿರುವವರಿಗೆ ನೀಡಬೇಕೇ ವಿನಃ ಬಯಸುವವರಿಗೆಲ್ಲರಿಗೂ ಅಲ್ಲ ಎಂದು ಹೇಳಿತ್ತು.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರು, ಇಂತಹ ಸಮಯದಲ್ಲಿ ಬೇಡಿಕೆ ಹಾಗೂ ಅಗತ್ಯ ಕುರಿತು ಚರ್ಚೆ ನಡೆಸುವುದು ಸರಿಯಲ್ಲ. ಸುರಕ್ಷಿತ ಜೀವನಕ್ಕೆ ಪ್ರತೀಯೊಬ್ಬ ಭಾರತೀಯನೂ ಅರ್ಹನಾಗಿದ್ದಾನೆಂದು ಹೇಳಿದ್ದಾರೆ.
ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಟ್ ಮತ್ತು ಕೋವ್ಯಾಕ್ಸಿನ್ ಕೊರೋನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್'ಗೆ ಲಸಿಕೆಯ ಮೊದಲ ಆದ್ಯತೆಯನ್ನು ನೀಡಲಾಗಿತ್ತು. ಇದೀಗ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೆ ಲಸಿಕೆ ನೀಡಲಾಗುತ್ತಿದೆ.
ಇದರಂತೆ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 8,70,77,474 ಮಂದಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.