ಕೋವಿಡ್ ಲಸಿಕೆ ದಾಸ್ತಾನು 2 ದಿನದಲ್ಲಿ ಮುಗಿಯಲಿದೆ, ಕನಿಷ್ಠ 30 ಲಕ್ಷ ಡೋಸ್ ಲಸಿಕೆ ನೀಡಿ: ಪ್ರಧಾನಿಗೆ ಅಶೋಕ್ ಗೆಹ್ಲೋಟ್ ಮನವಿ

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ರಾಜ್ಯದಲ್ಲಿ ಕೊರೋನಾ ವೈರಸ್ ಲಸಿಕೆ ದಾಸ್ತಾನು ಮುಂದಿನ ಎರಡು ದಿನಗಳಲ್ಲಿ ಮುಗಿಯಲಿದೆ.
ಸಿಎಂ ಅಶೋಕ್ ಗೆಹ್ಲೋಟ್
ಸಿಎಂ ಅಶೋಕ್ ಗೆಹ್ಲೋಟ್

ಜೈಪುರ: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ರಾಜ್ಯದಲ್ಲಿ ಕೊರೋನಾ ವೈರಸ್ ಲಸಿಕೆ ದಾಸ್ತಾನು ಮುಂದಿನ ಎರಡು ದಿನಗಳಲ್ಲಿ ಮುಗಿಯಲಿದೆ. ಹೀಗಾಗಿ ರಾಜ್ಯಕ್ಕೆ ಕನಿಷ್ಠ 30 ಲಕ್ಷ ಡೋಸ್‌ ಲಸಿಕೆಯನ್ನು ತಕ್ಷಣ ಒದಗಿಸುವಂತೆ ಒತ್ತಾಯಿಸಿದ್ದಾರೆ.

ನಿನ್ನೆ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ನಡೆದ ವಿಡಿಯೋ ಕಾನ್ಫರೆನ್ಸ್ ನಂತರ ಅಶೋಕ್ ಗೆಹ್ಲೋಟ್ ಅವರು ಪತ್ರ ಬರೆದಿದ್ದು, ರಾಜ್ಯವು ಪ್ರತಿದಿನ ಐದು ಲಕ್ಷ ಜನರಿಗೆ ಲಸಿಕೆ ನೀಡುವ ಗುರಿಯನ್ನು ಹೊಂದಿದೆ ಮತ್ತು ಜನವರಿ 16 ರಿಂದ ಏಪ್ರಿಲ್ 7 ರವರೆಗೆ 86,89,770 ಡೋಸ್‌ ಲಸಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

"ರಾಜಸ್ಥಾನದಲ್ಲಿ ಪ್ರಸ್ತುತ ಇರುವ ಲಸಿಕೆ ದಾಸ್ತಾನು ಮುಂದಿನ ಎರಡು ದಿನಗಳಲ್ಲಿ ಮುಗಿಯಲಿದೆ. ಆದ್ದರಿಂದ, ಕನಿಷ್ಠ 30 ಲಕ್ಷ ಡೋಸ್ ಲಸಿಕೆಗಳನ್ನು ತಕ್ಷಣ ನಮಗೆ ಒದಗಿಸಬೇಕೆಂದು ವಿನಂತಿ. ಇದರಿಂದಾಗಿ ನಾವು ಲಸಿಕೆ ನೀಡುವ ವೇಗವನ್ನು ಕಾಪಾಡಿಕೊಳ್ಳಬಹುದು ಮತ್ತು ಗರಿಷ್ಠ ಅರ್ಹ ಫಲಾನುಭವಿಗಳಿಗೆ ಬೇಗನೆ ಲಸಿಕೆ ನೀಡಬಹುದು" ಎಂದು ರಾಜಸ್ಥಾನ ಸಿಎಂ ವಿವರಿಸಿದ್ದಾರೆ.

ಅಶೋಕ್ ಗೆಹ್ಲೋಟ್ ಅವರು ಎರಡು ದಿನಗಳ ಹಿಂದೆ ಪ್ರಧಾನಿ ಮೋದಿಗೆ ಬರೆದಿದ್ದ ಪತ್ರದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೊರೋನಾ ಲಸಿಕೆ ನೀಡಲು ಆರಂಭಿಸಬೇಕು ಎಂದು ಸಲಹೆ ನೀಡಿದ್ದರು.

ಪ್ರಸ್ತುತ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ದೇಶದಲ್ಲಿ ಲಸಿಕೆ ನೀಡಲಾಗುತ್ತಿದೆ. ಮೊದಲೆರಡು ಹಂತಗಳಲ್ಲಿ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಮಾತ್ರ ಲಸಿಕೆ ನೀಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com