ಕೋವಿಡ್-19: ದೇಶದಲ್ಲಿ ಮೊದಲ ಬಾರಿಗೆ 11 ಲಕ್ಷ ಗಡಿ ದಾಟಿದ ಸಕ್ರಿಯ ಪ್ರಕರಣಗಳು

ದೇಶದಲ್ಲಿ ಮೊದಲ ಬಾರಿಗೆ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ 11 ಲಕ್ಷ ಗಡಿ ದಾಟಿದ್ದು,  ಆರೋಗ್ಯ ಮೂಲಸೌಕರ್ಯವನ್ನು ಅಂಚಿಗೆ ಸರಿಸುವ ಬೆದರಿಕೆಯೊಡ್ಡಿದೆ.
ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಂದ ಮಾದರಿ ಸಂಗ್ರಹಿಸುತ್ತಿರುವ ಆರೋಗ್ಯ ಕಾರ್ಯಕರ್ತರು
ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಂದ ಮಾದರಿ ಸಂಗ್ರಹಿಸುತ್ತಿರುವ ಆರೋಗ್ಯ ಕಾರ್ಯಕರ್ತರು

ನವದೆಹಲಿ: ದೇಶದಲ್ಲಿ ಮೊದಲ ಬಾರಿಗೆ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ 11 ಲಕ್ಷ ಗಡಿ ದಾಟಿದ್ದು,  ಆರೋಗ್ಯ ಮೂಲಸೌಕರ್ಯವನ್ನು ಅಂಚಿಗೆ ಸರಿಸುವ ಬೆದರಿಕೆಯೊಡ್ಡಿದೆ. ಈ ಮಧ್ಯೆ  ಕೋವಿಡ್-19 ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಭಾನುವಾರ ಚಾಲನೆಗೊಂಡ ಲಸಿಕಾ ಉತ್ಸವ ಕೊರೋನಾ ವೈರಸ್ ವಿರುದ್ಧದ ಮತ್ತೊಂದು ಹೋರಾಟ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ 18 ರಂದು ಅತಿ ಹೆಚ್ಚು 10,17,754 ಸಕ್ರಿಯ ಪ್ರಕರಣಗಳು ಕಂಡುಬಂದಿದ್ದವು. ಮತ್ತೆ ಸೋಂಕು ಉಲ್ಬಣಕ್ಕೂ ಮುಂಚೆ ಫೆಬ್ರವರಿ 12, 2021ರಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,35,926ಕ್ಕೆ ಇಳಿದಿತ್ತು. 

ಮಹಾರಾಷ್ಟ್ರ, ಛತ್ತೀಸ್ ಗಢ, ಕರ್ನಾಟಕ, ಉತ್ತರ ಪ್ರದೇಶ ಮತ್ತು ಕೇರಳ ರಾಜ್ಯಗಳು  ದೇಶದ ಸಕ್ರಿಯ ಕೋವಿಡ್ -19 ಪ್ರಕರಣಗಳಲ್ಲಿ ಒಟ್ಟು ಶೇ. 70.82 ರಷ್ಟು ಪ್ರಕರಣಗಳನ್ನು ಹೊಂದಿದ್ದರೆ,  ಮಹಾರಾಷ್ಟ್ರ ಒಂದೇ ಶೇ. 48. 57 ರಷ್ಟು ಪ್ರಕರಣ ಹೊಂದಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕೊರೋನಾವೈರಸ್ ಚಿಕಿತ್ಸೆಗಾಗಿ ಬಳಸುತ್ತಿರುವ ರೆಮ್ ಡೆಸಿವಿರ್ ರಫ್ತುನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದ್ದು, ಎಲ್ಲ ದೇಶಿಯ ಲಸಿಕೆ ತಯಾರಕರು ಲಭ್ಯವಿರುವ ದಾಸ್ತಾನು ಹಾಗೂ ವಿತರಣೆಯ ಸಮಗ್ರ ವಿವರವನ್ನು ವೆಬ್ ಸೈಟ್ ನಲ್ಲಿ ತಿಳಿಸುವಂತೆ ಸೂಚಿಸಲಾಗಿದೆ. 

ಪಿಟಿಐ ಪ್ರಕಾರ, ಭಾನುವಾರ ರಾತ್ರಿಯೊಳಗೆ ದೇಶಾದ್ಯಂತ ಸಕ್ರಿಯ ಪ್ರಕರಣಗಳ ಸಂಖ್ಯೆ 11,89,238 ಆಗಿದ್ದು, ಒಟ್ಟಾರೇ ಪ್ರಕರಣಗಳ ಸಂಖ್ಯೆ 1,35,09,746ಕ್ಕೆ ಏರಿಕೆಯಾಗಿದೆ. 85 ದಿನಗಳ ನಂತರ ದೇಶದಲ್ಲಿ 10 ಕೋಟಿ ಕೋವಿಡ್-19 ಲಸಿಕೆ ಡೋಸ್ ನ್ನು ನೀಡಲಾಗಿದೆ. ಏಪ್ರಿಲ್ 14ರವರೆಗೂ ವಿಶೇಷ ಲಸಿಕಾ ಉತ್ಸವವನ್ನು ಹಮ್ಮಿಕೊಂಡಿದ್ದು, ಅರ್ಹ ಎಲ್ಲ ನಾಗರಿಕರು ಲಸಿಕೆ ಪಡೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕೋರಿದ್ದಾರೆ. 

ಲಸಿಕಾ ಉತ್ಸವ ಕೊರೋನಾ ವಿರುದ್ಧದ ಮತ್ತೊಂದು ಪ್ರಮುಖ ಹೋರಾಟವಾಗಿದೆ. ವೈಯಕ್ತಿಕ ನೈರ್ಮಲ್ಯ ಮತ್ತು ಸಾಮಾಜಿಕ ನೈರ್ಮಲ್ಯಕ್ಕೆ ನಾವು ವಿಶೇಷ ಒತ್ತು ನೀಡಬೇಕಾಗಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com