ಛತ್ತೀಸ್‌ಗಢದಲ್ಲಿ ಕೋವಿಡ್ ಸೋಂಕು ಹೆಚ್ಚಳ: ಆಸ್ಪತ್ರೆ ಎದುರು ಶವಗಳ ರಾಶಿ, ವಿಲೇವಾರಿ ಮಾಡಲು ಸಿಬ್ಬಂದಿ, ಜಾಗದ ಕೊರತೆ

ಛತ್ತೀಸ್‌ಗಢದಲ್ಲಿ ಕೋವಿಡ್ ಸೋಂಕು ಹೆಚ್ಚಳದ ಪರಿಣಾಮ ಇಲ್ಲಿನ ಸರ್ಕಾರಿ ಆಸ್ಪತ್ರೆ ಅವರಣದ ಎದುರು ರಾಶಿ ರಾಶಿ ಹೆಣಗಳನ್ನು ಹಾಕಲಾಗಿದೆ.
ಆಸ್ಪತ್ರೆ ಆವರಣದಲ್ಲಿ ಶವಗಳ ರಾಶಿ
ಆಸ್ಪತ್ರೆ ಆವರಣದಲ್ಲಿ ಶವಗಳ ರಾಶಿ

ಭೋಪಾಲ್: ಛತ್ತೀಸ್‌ಗಢದಲ್ಲಿ ಕೋವಿಡ್ ಸೋಂಕು ಹೆಚ್ಚಳದ ಪರಿಣಾಮ ಇಲ್ಲಿನ ಸರ್ಕಾರಿ ಆಸ್ಪತ್ರೆ ಅವರಣದ ಎದುರು ರಾಶಿ ರಾಶಿ ಹೆಣಗಳನ್ನು ಹಾಕಲಾಗಿದೆ.

ಕೋವಿಡ್ ಸೋಂಕಿನಿಂದಾಗಿ ಸಾವನ್ನಪ್ಪಿದವರ ಶವಗಳನ್ನು ವಿಲೇವಾರಿ ಮಾಡಲು ಸಿಬ್ಬಂದಿ ಮತ್ತು ಜಾಗದ ಕೊರತೆ ಎದುರಾಗಿದ್ದು ಇದರಿಂದ ಆಸ್ಪತ್ರೆ ಆವರಣದಲ್ಲಿ ಹೆಣಗಳ ರಾಶಿಯೇ ಶೇಖರಣೆಯಾಗಿದೆ. ಹೌದು ಛತ್ತೀಸ್ ಘಡದಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು,  ಡಾ.ಭೀಮರಾವ್ ಅಂಬೇಡ್ಕರ್ ಸ್ಮಾರಕ ಆಸ್ಪತ್ರೆಯಲ್ಲಿ ಮೃತದೇಹಗಳನ್ನು ಇಡಲು ಕೂಡಾ ಸ್ಥಳಾವಕಾಶ ಇಲ್ಲದಂತಾಗಿದೆ. ಕೋವಿಡ್ ಶಿಷ್ಟಾಚಾರದ ಪ್ರಕಾರ ಶವಗಳನ್ನು ಅಂತ್ಯಸಂಸ್ಕಾರಕ್ಕೆ ಮುನ್ನ ಶೈತ್ಯಾಗಾರಗಳಲ್ಲಿ ದಾಸ್ತಾನು ಮಾಡಬೇಕು. ಆದರೆ ಸ್ಥಳಾವಕಾಶವಿಲ್ಲದೇ ಸಿಬ್ಬಂದಿಗಳು ಆಸ್ಪತ್ರೆಯ ಆವರಣದಲ್ಲೇ  ಶವಗಳನ್ನು ಇಟ್ಟಿದ್ದಾರೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಸೃಷ್ಟಿ ಮಾಡಿದೆ.

ಇನ್ನು ಈ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳು ಈ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ್ದು, ಕೋವಿಡ್-19 ಸೋಂಕಿನಿಂದಾಗಿ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸುವುದಕ್ಕಿಂತ ವೇಗವಾಗಿ ಸಾವಿನ ಸಂಖ್ಯೆ ಹೆಚ್ಚುತ್ತಿರುವುದರಿಂದ ಶವಾಗಾರಗಳು ಭರ್ತಿಯಾಗಿವೆ. ಹೊಸ ಶವಗಳನ್ನು ಇಡಲು ಜಾಗವೇ ಇಲ್ಲ ಎಂದು ತಮ್ಮ  ಅಳಲು ತೋಡಿಕೊಂಡಿದ್ದಾರೆ.

"ಒಂದೇ ಬಾರಿ ಇಷ್ಟೊಂದು ಸಾವು ಸಂಭವಿಸಬಹುದು ಎಂದು ಯಾರೂ ಊಹಿಸಿರಲಿಲ್ಲ. ಸಾಮಾನ್ಯ ಸಾವಿನ ಸಂಖ್ಯೆಗೆ ಸಾಕಾಗುವಷ್ಟು ಶೈತ್ಯಾಗಾರ ವ್ಯವಸ್ಥೆ ಇದೆ. ಆದರೆ ಒಂದೆರಡು ಸಾವುಗಳು ಸಂಭವಿಸುತ್ತಿದ್ದ ಕಡೆಗಳಿಂದ 10-20 ಸಾವುಗಳು ಹೇಗೆ ವರದಿಯಾಗುತ್ತಿವೆ ಎನ್ನುವುದು ಅರ್ಥವಾಗುತ್ತಿಲ್ಲ. ನಾವು  10-20ಕ್ಕೆ ಸಜ್ಜಾದರೆ 50-60 ಮಂದಿ ಸಾಯುತ್ತಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯ ಶವಗಳಿಗೆ ಶೈತ್ಯಾಗಾರಗಳ ವ್ಯವಸ್ಥೆ ಮಾಡುವುದು ಹೇಗೆ? ಸ್ಮಶಾನಗಳು ಕೂಡಾ ಭರ್ತಿಯಾಗಿವೆ" ಎಂದು ರಾಯಪುರದ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಮೀರಾ ಬಘೇಲ್ ಹೇಳುತ್ತಾರೆ.

ರೋಗಲಕ್ಷಣ ಇಲ್ಲದ ರೋಗಿಗಳ ಆರೋಗ್ಯ ಸ್ಥಿತಿ ಕೂಡಾ ತೀವ್ರವಾಗಿ ಹದಗೆಟ್ಟು ಹೃದಯಾಘಾತದಿಂದ ರೋಗಿಗಳು ಸಾಯುತ್ತಿದ್ದಾರೆ. ಆದ್ದರಿಂದ ಎರಡನೇ ಅಲೆಯ ಹೊಡೆತವನ್ನು ಅಂದಾಜಿಸುವುದು ಸಾಧ್ಯವಾಗುತ್ತಿಲ್ಲ ಎಂದು ಮೀರಾ ಬಘೇಲ್ ಅಭಿಪ್ರಾಯಪಟ್ಟಿದ್ದಾರೆ. ಅಧಿಕೃತ ಮೂಲಗಳ ಪ್ರಕಾರ ರಾಯಪುರ  ನಗರದ ಸ್ಮಶಾನದಲ್ಲಿ ದಿನಕ್ಕೆ ಸರಾಸರಿ 55 ಶವಗಳ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ. ಈ ಪೈಕಿ ಬಹುತೇಕ ಕೊರೋನ ವೈರಸ್ ರೋಗಿಗಳದ್ದೇ ಎಂದು ಹೇಳಲಾಗಿದೆ.

ದೇಶದಲ್ಲಿ ಎರಡನೇ ಅಲೆಯ ಹೊಡೆತಕ್ಕೆ ಸಿಕ್ಕ ಹತ್ತು ರಾಜ್ಯಗಳ ಪೈಕಿ ಛತ್ತೀಸ್‌ಗಢ ಕೂಡಾ ಒಂದಾಗಿದ್ದು, ಭಾನುವಾರ 10521 ಪ್ರಕರಣಗಳು ಹಾಗೂ 122 ಸಾವು ವರದಿಯಾಗಿದೆ. ರಾಜ್ಯದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 4899ಕ್ಕೇರಿದೆ. ಇನ್ನು ಛತ್ತೀಸ್ ಘಡದಲ್ಲಿ ಅತೀ ಹೆಚ್ಚು ಸೋಂಕಿತರನ್ನು ಹೊಂದಿರುವ ಜಿಲ್ಲೆಗಳ ಪೈಕಿ ರಾಯ್‌ಪುರ ಮತ್ತು ದುರ್ಗ್ ಜಿಲ್ಲೆಗಳಿದ್ದು ಇಲ್ಲಿ ಲಾಕ್‌ಡೌನ್ ಮಾಡಲು ಚಿಂತನೆ ಮಾಡಲಾಗುತ್ತಿದೆ. ರಾಯ್ ಪುರದಲ್ಲಿ ನಿನ್ನೆ 2,833 ಮತ್ತು ದುರ್ಗ್ ಜಿಲ್ಲೆಯಲ್ಲಿ 1,650 ಹೊಸ ಪ್ರಕರಣಗಳು ದಾಖಲಾಗಿವೆ. ರಾಯ್‌ಪುರದಲ್ಲಿ ಒಟ್ಟು 1,203 ಸಾವುಗಳು ಸೇರಿದಂತೆ ಒಟ್ಟಾರೆ ಸೋಂಕಿತರ ಸಂಖ್ಯೆ 91,311ಕ್ಕೆ ಏರಿಕೆಯಾಗಿದೆ. ದುರ್ಗ್‌ನಲ್ಲೂ ಕೂಡ 939 ಸಾವುಗಳು ಸೇರಿದಂತೆ ಒಟ್ಟಾರೆ ಸೋಂಕಿತರ ಸಂಖ್ಯೆ 55,395 ಕ್ಕೆ ಏರಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com