ಜಗತ್ತಿನ ಅತ್ಯಂತ ಅಗ್ಗದ ಲಸಿಕೆ ಸ್ಪುಟ್ನಿಕ್‌-ವಿ; ಶೇ.95ರಷ್ಟು ಪರಿಣಾಮಕಾರಿ

ಜಗತ್ತಿನ ಅತ್ಯಂತ ಅಗ್ಗದ ಕೋವಿಡ್ ಲಸಿಕೆ ಎಂದೇ ಖ್ಯಾತಿಗಳಿಸಿರುವ ರಷ್ಯಾದ ಸ್ಪುಟ್ನಿಕ್ ವಿ ಇದೀಗ ಭಾರತದಲ್ಲೂ ಬಳಕೆಗೆ ಅನುಮತಿ ಪಡೆದುಕೊಂಡಿದೆ. ಅಂತೆಯೇ ಈ ಲಸಿಕೆ ಶೇ.95ರಷ್ಟು ಪರಿಣಾಮಕಾರಿ ಎಂದು ರಷ್ಯಾ ಹೇಳಿಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಜಗತ್ತಿನ ಅತ್ಯಂತ ಅಗ್ಗದ ಕೋವಿಡ್ ಲಸಿಕೆ ಎಂದೇ ಖ್ಯಾತಿಗಳಿಸಿರುವ ರಷ್ಯಾದ ಸ್ಪುಟ್ನಿಕ್ ವಿ ಇದೀಗ ಭಾರತದಲ್ಲೂ ಬಳಕೆಗೆ ಅನುಮತಿ ಪಡೆದುಕೊಂಡಿದೆ. ಅಂತೆಯೇ ಈ ಲಸಿಕೆ ಶೇ.95ರಷ್ಟು ಪರಿಣಾಮಕಾರಿ ಎಂದು ರಷ್ಯಾ ಹೇಳಿಕೊಂಡಿದೆ.

ಲಸಿಕೆ ಕುರಿತು ಕೇಂದ್ರ ಸರ್ಕಾರ ಕೋರಲಾಗಿದ್ದ ಪ್ರಶ್ನೆಗಳಿಗೆ ರಷ್ಯಾದ ಗಮಾಲೆಯ ರಾಷ್ಟ್ರೀಯ ಸಂಶೋಧನಾ ಕೇಂದ್ರ ಹಾಗೂ ಆರ್‌ಡಿಐಎಫ್ ಉತ್ತರ ನೀಡಿದ್ದು, ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಅಭಿವೃದ್ಧಿಪಡಿಸಿರುವ ‘ಸ್ಪುಟ್ನಿಕ್ ವಿ’ ಲಸಿಕೆ ಶೇ 95ಕ್ಕಿಂತಲೂ ಹೆಚ್ಚು ಪರಿಣಾಮಕಾರಿ ಎಂದು ಹೇಳಿವೆ. ಈ  ಕುರಿತಂತೆ ಮಾಸ್ಕೊದಲ್ಲಿ ವರ್ಚ್ಯುವಲ್ ಸಭೆಯಲ್ಲಿ ಮಾತನಾಡಿದ ‘ರಷ್ಯಾ ಡೈರೆಕ್ಟ್‌ ಇನ್‌ವೆಸ್ಟ್‌ಮೆಂಟ್‌ ಫಂಡ್‌ನ (ಆರ್‌ಡಿಐಎಫ್) ಸಿಇಒ ಕಿರಿಲ್ ಡಿಮಿಟ್ರಿವ್ ಅವರು, ‘ಸ್ಪುಟ್ನಿಕ್ ವಿ ಹೆಚ್ಚು ಪರಿಣಾಮಕಾರಿಯಾಗಿದ್ದು, ರಷ್ಯಾ, ಭಾರತ ಸೇರಿ ಹಲವು ದೇಶಗಳಲ್ಲಿ ಮನುಷ್ಯನ ಮೇಲೆ ಪ್ರಯೋಗ ನಡೆಯುತ್ತಿದೆ. ರಷ್ಯಾದಲ್ಲಿ  42 ಸಾವಿರ ಸ್ವಯಂಸೇವಕರು ಪರೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಪರೀಕ್ಷೆಯ ದತ್ತಾಂಶಗಳು ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಎಂದೂ ಹೇಳಿದ್ದಾರೆ.

ಜಗತ್ತಿನ ಅತ್ಯಂತ ಅಗ್ಗದ ಲಸಿಕೆ ಮತ್ತು ಸರಳ ಶೇಖರಣಾ ವಿಧಾನ
ಇದೇ ವೇಳೆ ಜಗತ್ತಿನ ಅತ್ಯಂತ ಅಗ್ಗದ ಲಸಿಕೆ ಎಂದು ಹೇಳಿರುವ ಅವರು, ಈ ಲಸಿಕೆಯನ್ನು 2 ಡಿಗ್ರಿ ಸೆಲ್ಸಿಯಸ್‌ನಿಂದ 18 ಡಿಗ್ರಿ ಸೆಲ್ಸಿಯಸ್‌ ವರೆಗಿನ ತಾಪಮಾನದಲ್ಲಿ ಶೇಖರಿಸಿ ಇಡಬಹುದು. ಲಸಿಕೆಯನ್ನು ಸುಲಭವಾಗಿ ವಿತರಣೆ ಮಾಡುವಲ್ಲಿ ಈ ಅಂಶ ಪ್ರಮುಖವಾಗಿದೆ. ಲಸಿಕೆಯ ಶುಷ್ಕ ರೂಪವನ್ನು (ಡ್ರೈ  ಫಾರ್ಮ್) ಈ ತಾಪಮಾನದಲ್ಲಿ ಇರಿಸುವುದರಿಂದ ಶೇಖರಣೆ, ಸಾಗಣೆ ವೆಚ್ಚ ಕಡಿಮೆ ಆಗಲಿದೆ ಎಂದು ಕಿರಿಲ್ ಡಿಮಿಟ್ರಿವ್ ಹೇಳಿದ್ದಾರೆ.

ಭಾರತದಲ್ಲಿ ಡಾ.ರೆಡ್ಡೀಸ್ ಲ್ಯಾಬ್ ನಿಂದ ಲಸಿಕೆ ನಿರ್ವಹಣೆ
ಇನ್ನು ಭಾರತದಲ್ಲಿ ಡಾ.ರೆಡ್ಡೀಸ್ ಲ್ಯಾಬ್ ಜೊತೆ ರಷ್ಯಾ ಒಪ್ಪಂದ ಮಾಡಿಕೊಂಡಿದ್ದು, ದೇಶದಲ್ಲಿ ಪ್ರಾಯೋಗಿಕ ಪರೀಕ್ಷೆಯನ್ನು ರೆಡ್ಡೀಸ್ ಲ್ಯಾಬ್ ನಿರ್ವಹಿಸುತ್ತಿದ್ದು, ಸ್ಪುಟ್ನಿಕ್ ಲಸಿಕೆ ವಿತರಣೆ ಜವಾಬ್ದಾರಿಯನ್ನೂ ಹೊತ್ತಿದೆ. ರಷ್ಯಾದ ಸ್ಪುಟ್ನಿಕ್‌-ವಿ ಲಸಿಕೆಯ ಒಂದು ಡೋಸ್‌ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹತ್ತು  ಡಾಲರ್‌ಗಳಿಂತಲೂ (ಭಾರತದಲ್ಲಿ ರೂ 740) ಕಡಿಮೆ ಬೆಲೆಗೆ ಸಿಗಲಿದೆ. ರಷ್ಯಾದ ನಾಗರಿಕರಿಗೆ ಉಚಿತವಾಗಿ ನೀಡಲಾಗುತ್ತದೆ. 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಲ್ಲಿ COVID-19 ಅನ್ನು ತಡೆಗಟ್ಟಲು ಸಕ್ರಿಯ ರೋಗನಿರೋಧಕ ಶಕ್ತಿಯನ್ನು ಲಸಿಕೆ ನೀಡಲಿದೆ. 21 ದಿನಗಳ ಅವಧಿಯಲ್ಲಿ  0.5 ಮಿಲಿಯಂತೆ ತಲಾ ಎರಡು ಡೋಸ್ ಲಸಿಕೆ ಪಡೆದರೆ ಇದು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಲಾಗಿದೆ. 

10 ಕೋಟಿ ಡೋಸ್ ಉತ್ಪಾದಿಸಲು ರಷ್ಯಾ ಒಪ್ಪಿಗೆ
ಕೋವಿಡ್‌-19 ತಡೆಗೆ ರಷ್ಯಾ ಅಭಿವೃದ್ಧಿಪಡಿಸಿರುವ ‘ಸ್ಪುಟ್ನಿಕ್ ವಿ’ ಲಸಿಕೆಯ 10 ಕೋಟಿ ಡೋಸ್‌ಗಳನ್ನು (ವರ್ಷದಲ್ಲಿ) ಭಾರತದಲ್ಲಿ ಉತ್ಪಾದಿಸಲು ರಷ್ಯಾದ ‘ಆರ್‌ಡಿಐಎಫ್‌ ಸಾವರಿನ್ ವೆಲ್ತ್ ಫಂಡ್’ ಜತೆ ಔಷಧ ತಯಾರಿಕಾ ಸಂಸ್ಥೆ ‘ಹೆಟೆರೊ’ ಒಪ್ಪಂದ ಮಾಡಿಕೊಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಸಿಕೆ  ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ‘ಹೆಟೆರೊ’ ಜತೆಗಿನ ಒಪ್ಪಂದದ ಮೂಲಕ ಆರ್‌ಡಿಐಎಫ್‌ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಮುಂದಿನ ವರ್ಷದಲ್ಲಿ ‘ಹೆಟೆರೊ’ ಲಸಿಕೆ ಉತ್ಪಾದನೆ ಆರಂಭಿಸುವ ನಿರೀಕ್ಷೆ ಇದೆ’ ಎಂಬ ಜಂಟಿ ಹೇಳಿಕೆಯನ್ನು ‘ಸ್ಪುಟ್ನಿಕ್ ವಿ’ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಲಾಗಿದೆ. ಅದರಂತೆ ಮುಂದಿನ 6  ರಿಂದ 7 ತಿಂಗಳ ಕಾಲದವರೆಗೂ ಭಾರತ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನು ಆಮದು ಮಾಡಿಕೊಳ್ಳಲಿದೆ. 2021ರ ಹೊತ್ತಿಗೆ 50 ಕೋಟಿ ಜನರಿಗೆ ಲಸಿಕೆ ತಯಾರಿಸಲು ಆರ್‌ಡಿಐಎಫ್ ಅಂತಾರಾಷ್ಟ್ರೀಯ ಉತ್ಪಾದನಾ ಪಾಲುದಾರರೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com