ಕೋವಿಡ್-19: ಅಯೋಧ್ಯೆ, ವಾರಣಾಸಿಗೆ ಭೇಟಿ ನೀಡುವ ಭಕ್ತರಿಗೆ ಆರ್ ಟಿ- ಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ

ರಾಮ ನವಮಿಯಂದು ರಾಮ ಜನ್ಮಭೂಮಿಗೆ ಭೇಟಿ ನೀಡಲು ಬಯಸುವ ಭಕ್ತಾಧಿಗಳಿಗೆ ಆರ್ ಟಿ- ಪಿಸಿಆರ್ ನೆಗೆಟಿವ್ ವರದಿಯನ್ನು ಅಯೋಧ್ಯೆ ಜಿಲ್ಲಾಡಳಿತ ಕಡ್ಡಾಯಗೊಳಿಸಿದೆ. 

Published: 14th April 2021 07:25 PM  |   Last Updated: 14th April 2021 07:25 PM   |  A+A-


Casual_Images1

ಸಾಂದರ್ಭಿಕ ಚಿತ್ರ

Posted By : Nagaraja AB
Source : The New Indian Express

ಲಖನೌ: ರಾಮ ನವಮಿಯಂದು ರಾಮ ಜನ್ಮಭೂಮಿಗೆ ಭೇಟಿ ನೀಡಲು ಬಯಸುವ ಭಕ್ತಾಧಿಗಳಿಗೆ ಆರ್ ಟಿ- ಪಿಸಿಆರ್ ನೆಗೆಟಿವ್ ವರದಿಯನ್ನು ಅಯೋಧ್ಯೆ ಜಿಲ್ಲಾಡಳಿತ ಕಡ್ಡಾಯಗೊಳಿಸಿದೆ. 

ಕೋವಿಡ್-19 ನೆಗೆಟಿವ್ ವರದಿ ಇಲ್ಲದ ಭಕ್ತರಿಗೆ ಏಪ್ರಿಲ್ 21 ರಂದು ರಾಮ ನವಮಿಯಂದು ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅಗತ್ಯ ಬಿದ್ದರೆ ಅಯೋಧ್ಯೆ ಸುತ್ತಮುತ್ತ ನಿರ್ಬಂಧ ಹೇರಲಾಗುವುದು, ರಾಮ ನವಮಿಯಂದು ಧಾರ್ಮಿಕ ಸಮ್ಮೇಳನ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಅಯೋಧ್ಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಂಜು ಝಾ ತಿಳಿಸಿದ್ದಾರೆ.

ಆದಾಗ್ಯೂ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉನ್ನತ ಮಠಗಳು, ಅಯೋಧ್ಯೆಯ ಸ್ನಾಮೀಜಿಗಳೊಂದಿಗೆ ಮಂಗಳವಾರ ವರ್ಚುಯಲ್ ಸಭೆ ನಡೆಸಿದ್ದು, ದೇವಾಲಯ ನಗರದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಳವಾಗಿ ರಾಮ ನವಮಿ ಆಚರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಭಕ್ತರು ಅಯೋಧ್ಯೆ ಅಥವಾ ಬೇರೆ ಯಾವುದೇ ಕಡೆಗಳಲ್ಲಿ ಪುಣ್ಯ ಸ್ನಾನ ಮಾಡದೆ ಮನೆಯಲ್ಲಿಯೇ ರಾಮನವಮಿ ಆಚರಿಸುವಂತೆ ಮುಖ್ಯಮಂತ್ರಿ ಕೋರಿದ್ದಾರೆ.

ಈ ಮಧ್ಯೆ, ರಾಮನವಮಿಯಂದು ದೇವಾಲಯಕ್ಕೆ ಆಗಮಿಸುವ ಭಕ್ತಗಣ ಹೆಚ್ಚಾಗುವುದರಿಂದ ದೇವರ ಪ್ರಾರ್ಥನೆಗಾಗಿ ಒಂದು ಬಾರಿಗೆ ಐವರು ಭಕ್ತರಿಗೆ ಮಾತ್ರ ಪ್ರವೇಶ ನೀಡಲಾಗುವುದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.

ವಾರಣಾಸಿ ವಿಭಾಗೀಯ ಆಯುಕ್ತ ದೀಪಕ್ ಅಗರ್ ವಾಲ್, ಈ ಮಾಸಾಂತ್ಯದಲ್ಲಿ ದೇವಾಲಯ ನಗರಕ್ಕೆ ಆಗಮಿಸುವ ಭಕ್ತಾಧಿಗಳು ಹಾಗೂ ವಿದೇಶಿಗರನ್ನು ನಿಯಂತ್ರಿಸಲು ಇದೇ ರೀತಿಯ ಮನವಿಯನ್ನು ಮಾಡಿಕೊಂಡಿದ್ದಾರೆ. ವಾರಣಾಸಿಗೆ ಬಂದು ವಾಸ್ತವ್ಯ ಹೂಡುವವರಿಗೆ ಆರ್ ಟಿ- ಪಿಸಿಆರ್ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸುವ ಸಾಧ್ಯತೆ ಹೆಚ್ಚಾಗಿರುವುದಾಗಿ ಅವರು ತಿಳಿಸಿದ್ದಾರೆ.

ವಾರಣಾಸಿಯಲ್ಲೂ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬುಧವಾರ 828 ಸಕ್ರಿಯ ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೇ ಸೋಂಕಿತರ ಸಂಖ್ಯೆ 9607  ಹಾಗೂ ಮೃತರ ಸಂಖ್ಯೆ 405 ಆಗಿದೆ. 


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp