ಬಿಹಾರ: ಸಚಿವರ ಆಸ್ಪತ್ರೆ ಭೇಟಿ ವೇಳೆ ಸಿಗದ ತುರ್ತು ಚಿಕಿತ್ಸೆ; ಕೊರೋನಾ ವಿರುದ್ಧದ ಯುದ್ಧ ಸೋತ ಮಾಜಿ ಯೋಧ

ಬಿಹಾರದಲ್ಲಿ ಆರೋಗ್ಯ ಮೂಲ ಸೌಕರ್ಯದ ಕೊರತೆಯಿಂದಾಗಿ ಮಾರಕ ಕೊರೋನಾ ವೈರಸ್ ಮರಣ ಮೃದಂಗ ಭಾರಿಸುತ್ತಿದ್ದು, ಬಿಹಾರ ಸಚಿವರು ಆಸ್ಪತ್ರೆ ಭೇಟಿಯಲ್ಲಿರುವಾಗಲೇ ಸೋಂಕು ಪೀಡಿತ ನಿವೃತ್ತ ಯೋಧರೊಬ್ಬರು ತುರ್ತು ಚಿಕಿತ್ಸೆ ಸಿಗದೇ ಅಲ್ಲಿಯೇ ಸಾವನ್ನಪ್ಪಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪಾಟ್ನಾ: ಬಿಹಾರದಲ್ಲಿ ಆರೋಗ್ಯ ಮೂಲ ಸೌಕರ್ಯದ ಕೊರತೆಯಿಂದಾಗಿ ಮಾರಕ ಕೊರೋನಾ ವೈರಸ್ ಮರಣ ಮೃದಂಗ ಭಾರಿಸುತ್ತಿದ್ದು, ಬಿಹಾರ ಸಚಿವರು ಆಸ್ಪತ್ರೆ ಭೇಟಿಯಲ್ಲಿರುವಾಗಲೇ ಸೋಂಕು ಪೀಡಿತ ನಿವೃತ್ತ ಯೋಧರೊಬ್ಬರು ತುರ್ತು ಚಿಕಿತ್ಸೆ ಸಿಗದೇ ಅಲ್ಲಿಯೇ ಸಾವನ್ನಪ್ಪಿದ್ದಾರೆ.

ಬಿಹಾರ ರಾಜಧಾನಿ ಪಟ್ನಾದಲ್ಲಿ ಆಸ್ಪತ್ರೆ ಎದುರಲ್ಲೇ ಚಿಕಿತ್ಸೆಗಾಗಿ ಕಾದು ಕುಳಿತಿದ್ದ ಕೊರೊನಾ ಸೋಂಕಿತ ನಿವೃತ್ತ ಯೋಧ ಚಿಕಿತ್ಸೆ ಸಿಗದೆ ಜೀವ ಬಿಟ್ಟಿದ್ದಾನೆ. ಇಲ್ಲಿನ ಎನ್‌ಎಂಸಿಎಚ್ ಆಸ್ಪತ್ರೆ ಆವರಣದಲ್ಲಿ ಈ ಘಟನೆ ನಡೆದಿದ್ದು, ಸಾವಿಗೀಡಾದ ನಿವೃತ್ತ ಯೋಧರನ್ನು 60 ವರ್ಷದ ವಿಕೆ ಸಿಂಗ್ ಎಂದು  ಗುರುತಿಸಲಾಗಿದೆ.

ಬಿಹಾರದ ಲಾಖಿ ಸರಾಯ್ ನ ನಿವಾಸಿಗಳಾದ ವಿಕೆ ಸಿಂಗ್ ಅವರು, ಇತ್ತೀಚೆಗೆ ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಬಳಲುತ್ತಿದ್ದ ಅವರನ್ನು ಮೊದಲು ಪಾಟ್ನಾ ಏಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಇಲ್ಲಿ ಬೆಡ್ ಇಲ್ಲವಾದ್ದರಿಂದ ಎನ್‌ಎಂಸಿಎಚ್ ಆಸ್ಪತ್ರೆಗೆ  ಆ್ಯಂಬುಲೆನ್ಸ್ ನಲ್ಲಿ ಕರೆತರಲಾಗಿತ್ತು. ಈ ವೇಳೆ ಸಿಂಗ್ ಅವರ ಪುತ್ರ ಆಸ್ಪತ್ರೆಯಲ್ಲಿನ ಸಿಬ್ಬಂದಿಗಳನ್ನು ಭೇಟಿಯಾಗಿ ತಮ್ಮ ತಂದೆಯ ಪರಿಸ್ಥಿತಿ ಕುರಿತು ವಿವರಿಸಿದ್ದಾರೆ. ಆದರೆ ಸಿಬ್ಬಂದಿಗಳು ಕಾಯುವಂತೆ ಸೂಚಿಸಿದ್ದಾರೆ. ಎಚ್‌ಎಂಸಿಎಚ್ ಆಸ್ಪತ್ರೆ ಎದುರು ಸತತ ಒಂದೂವರೆ ಗಂಟೆ ಕಾದ ಬಳಿಕವೂ ಆಸ್ಪತ್ರೆಯೊಳಗೆ  ಸೇರಿಸಲಿಲ್ಲ. ಮೊದಲೇ ನಿಶ್ಯಕ್ತರಾಗಿದ್ದ ನನ್ನ ತಂದೆ ಚಿಕಿತ್ಸೆ ಸಿಗದೆ ಜೀವ ಬಿಟ್ಟರು ಎಂದು ಮೃತನ ಮಗ ಕಣ್ಣೀರಿಟ್ಟಿದ್ಧಾರೆ.

ಈ ಘಟನೆ ಕುರಿತಾಗಿ ಮೃತ ವ್ಯಕ್ತಿಯ ಮಗ ಅಭಿಮನ್ಯು ಮಾಧ್ಯಮಗಳಿಗೆ ವಿವರಣೆ ನೀಡಿದ್ದಾರೆ. ನನ್ನ ತಂದೆಗೆ ಕೊರೊನಾ ಸೋಂಕು ತಗುಲಿತ್ತು. ಪಾಟ್ನಾದ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಲು ಯತ್ನಿಸಿದೆವು. ಆದರೆ, ಯಾರೊಬ್ಬರೂ ದಾಖಲು ಮಾಡಿಕೊಳ್ಳಲಿಲ್ಲ. ಹೀಗಾಗಿ. ನಾವು ಕೊನೆಗೆ ಎಚ್‌ಎಂಸಿಎಚ್  ಆಸ್ಪತ್ರೆಗೆ ನನ್ನ ತಂದೆಯನ್ನು ಕರೆತಂದೆವು. ಆದರೆ, ಇಲ್ಲಿಯೂ ಕೂಡಾ ಸೂಕ್ತ ಸಮಯಕ್ಕೆ ದಾಖಲು ಮಾಡಿಕೊಳ್ಳಲಿಲ್ಲ. ಸಚಿವರು ಬಂದಿದ್ದರಿಂದ ಸಿಬ್ಬಂದಿಗಳು ಅಲ್ಲಿ ಬಿಸಿಯಾಗಿದ್ದರು. ಇತ್ತ ಯಾರೂ ಕೂಡ ಗಮನ ನೀಡಲಿಲ್ಲ. ಇದರಿಂದಾಗಿ ನಮ್ಮ ತಂದೆ ಸಾವನ್ನಪ್ಪಿದರು ಎಂದು ನೋವು ತೋಡಿಕೊಂಡಿದ್ದಾರೆ.

ಘಟನಾ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿಯೇ ಇದ್ದ ಸಚಿವರು
ಇನ್ನು ಆಸ್ಪತ್ರೆ ಆವರಣದಲ್ಲಿನ ಆ್ಯಂಬುಲೆನ್ಸ್ ನಲ್ಲಿ ಮಾಜಿ ಯೋಧ ಚಿಕಿತ್ಸೆ ಸಿಗದೇ ಸಾವನ್ನಪ್ಪುತ್ತಿದ್ದ ವೇಳೆ ಬಿಹಾರ ರಾಜ್ಯದ ಆರೋಗ್ಯ ಸಚಿವ ಮಂಗಲ್ ಪಾಂಡೆ ಅದೇ ಆಸ್ಪತ್ರೆಯಲ್ಲಿ ವೀಕ್ಷಣೆಗೆ ತೆರಳಿದ್ದರು. ಅದಾಗ್ಯೂ ಇಂತಹ ಘಟನೆ ಸಂಭವಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಈ ರೀತಿಯ ಘಟನೆಗಳು  ದುರಾದೃಷ್ಟಕರ. ಕಳೆದ ಕೆಲವು ದಿನಗಳಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದೆ. ಹೀಗಾಗಿ, ಮೂಲಸೌಕರ್ಯ ಕೊರತೆ ಉಂಟಾಗಿದೆ ಎಂದು ಸ್ಪಷ್ಟನೆ ನೀಡಿದ್ಧಾರೆ.

ನಿರ್ಲಕ್ಷ್ಯ ಆರೋಪ ನಿರಾಕರಿಸಿದ ಆಸ್ಪತ್ರೆ ಅಧೀಕ್ಷಕ
ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಎಂಸಿಎಚ್ ಅಧೀಕ್ಷಕ ಡಾ.ವಿನೋದ್ ಕುಮಾರ್ ಸಿಂಗ್ಲ ಪ್ರತಿಕ್ರಿಯೆ ನೀಡಿದ್ದು, ನಿರ್ಲಕ್ಷ್ಯದ ಆರೋಪ ನಿರಾಕರಿಸಿದ್ದಾರೆ. ಆಸ್ಪತ್ರೆಯಲ್ಲಿನ ವ್ಯವಸ್ಥೆಗಳ ಮೇಲ್ವಿಚಾರಣೆಗಾಗಿ ಬಂದಿದ್ದ ಸಚಿವರೊಂದಿಗೆ ಕೇವಲ ಮೂವರು ವೈದ್ಯಕೀಯ ಅಧಿಕಾರಿಗಳು ಮಾತ್ರ ಇದ್ದರು. ಬಾಕಿ ವೈದ್ಯರು  ಕರ್ತವ್ಯನಿರತರಾಗಿದ್ದರು. ಆಸ್ಪತ್ರೆಗೆ ಎಲ್ಲರಿಗೂ ಪ್ರವೇಶವಿದೆ. ರೋಗಿ ಸತ್ತಿದ್ದಾರೆ ನಿಜ.. ಆದರೆ ಇದರಲ್ಲಿ ಆಸ್ಪತ್ರೆ ನಿರ್ಲಕ್ಷವೇ ಕಾರಣ ಎನ್ನುವುದು ತಪ್ಪು ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com