ಕೋವಿಡ್-19 ಹೆಚ್ಚಳ: ನೈತಿಕ ಹೊಣೆ ಹೊತ್ತು ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕು- ಮಮತಾ ಬ್ಯಾನರ್ಜಿ

 ಕೋವಿಡ್-19 ಎರಡನೆ ಅಲೆ ಅಸಮರ್ಪಕ ನಿರ್ವಹಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ಒತ್ತಾಯಿಸಿದ್ದಾರೆ. ಸೋಂಕು ಪ್ರಕರಣಗಳು ಹೆಚ್ಚಾಗದಂತೆ ತಡೆಯುವಲ್ಲಿ ಯೋಜನೆ ರೂಪಿಸುವಲ್ಲಿ ಪ್ರಧಾನಿ ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿ
ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿ

ಕೊಲ್ಕತ್ತಾ: ಕೋವಿಡ್-19 ಎರಡನೆ ಅಲೆ ಅಸಮರ್ಪಕ ನಿರ್ವಹಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ಒತ್ತಾಯಿಸಿದ್ದಾರೆ. ಸೋಂಕು ಪ್ರಕರಣಗಳು ಹೆಚ್ಚಾಗದಂತೆ ತಡೆಯುವಲ್ಲಿ ಯೋಜನೆ ರೂಪಿಸುವಲ್ಲಿ ಪ್ರಧಾನಿ ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19 ಎರಡನೇ ಅಲೆ ಈ ವರ್ಷ  ಹರಡುವ ಮುನ್ನ ಐದಾರು ತಿಂಗಳುಗಳಲ್ಲಿ ಸಂಭಾವ್ಯ ವೈದ್ಯಕೀಯ ಆಕ್ಸಿಜನ್ ಪೂರೈಕೆಯಲ್ಲಿ ಸಂಭವನೀಯ ಬಿಕ್ಕಟ್ಟನ್ನು ಸ್ಪಲ್ಪ ಪರಿಹರಿಸಬಹುದಿತ್ತು ಆದರೆ,  ಮೋದಿ ತನ್ನ ಸ್ವಂತ ದೇಶದಲ್ಲಿ ಕೊರತೆಯಿರುವಾಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳಲು ಲಸಿಕೆಯನ್ನು ಇತರ ರಾಷ್ಟ್ರಗಳಿಗೆ ರಪ್ತು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕೋವಿಡ್-19 ಪ್ರಕರಣಗಳು ಹೆಚ್ಚಾಗಿರುವ ಕಾರಣ ಮೋದಿ ರಾಜೀನಾಮೆ ನೀಡಬೇಕು, ಪ್ರಸ್ತುತದಲ್ಲಿನ ಪರಿಸ್ಥಿತಿಗೆ ಮೋದಿ ಕಾರಣ, ಈ ವರ್ಷ ಅವರು ಯಾವುದೇ ಆಡಳಿತಾತ್ಮಕ ಯೋಜನೆ ಮಾಡಲಿಲ್ಲ, ಗುಜರಾತಿನ ಪರಿಸ್ಥಿತಿ ನೋಡಿ, ಅಲ್ಲೂ ಕೂಡಾ ಕೋವಿಡ್-19 ಪರಿಸ್ಥಿತಿಯನ್ನು ಬಿಜೆಪಿ ನಿಭಾಯಿಸಿಲ್ಲ. ಪಶ್ಚಿಮ ಬಂಗಾಳ ಸೇರಿದಂತೆ ಇಡೀ ದೇಶವನ್ನು ಅಂತಹ ಪರಿಸ್ಥಿತಿಗೆ ಬಿಜೆಪಿ ತಂದಿದೆ ಎಂದು ಟಿಎಂಸಿ ವರಿಷ್ಠೆ ಕಿಡಿಕಾರಿದರು.

ಪ್ರತಿಯೊಬ್ಬರ ನಾಗರಿಕರಿಗೂ ಉಚಿತವಾಗಿ ಲಸಿಕೆ ನೀಡಲು  ಪಶ್ಚಿಮ ಬಂಗಾಳಕ್ಕೆ 5.4 ಕೋಟಿ ಡೋಸ್ ಲಸಿಕೆ ನೀಡುವಂತೆ ಪ್ರಧಾನ ಮಂತ್ರಿ ಅವರನ್ನು ಕೇಳಲಾಗಿತ್ತು. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರ ಸಂಪೂರ್ಣ ವೆಚ್ಚವನ್ನು ಪಶ್ಚಿಮ ಬಂಗಾಳ ಸರ್ಕಾರವೇ ಭರಿಸುತಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಪತ್ರವೊಂದನ್ನು ಪ್ರಧಾನಿಗೆ ಕಳುಹಿಸಿದ್ದೇನೆ. ದೇಶಾದ್ಯಂತ ರೆಮಿಡಿಸಿವಿರ್ ಹಾಗೂ ಆಮ್ಲಜನಕ ಕೊರತೆಯಿದೆ. ಇದಕ್ಕೆ ಹೊಣೆ ಯಾರು? ಎಂದು ಪ್ರಶ್ನಿಸಿದರು.

ಮಹಾರಾಷ್ಟ್ರದಲ್ಲಿನ ಜೀವ ರಕ್ಷಕ ಸಲಕರಣೆ ಸಮಸ್ಯೆ ಬಗೆಹರಿಸದ  ಪ್ರಧಾನಿ, ಪಶ್ಚಿಮ ಬಂಗಾಳದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com