ನನ್ನ ಗಂಡನಿಗೆ ಮುತ್ತು ಕೊಡುತ್ತೇನೆ, ಧೈರ್ಯವಿದ್ದರೆ ತಡೆಯಿರಿ; ಮಾಸ್ಕ್ ಹಾಕದ ದಂಪತಿಗಳಿಂದ ಪೊಲೀಸರ ಮೇಲೆ ದರ್ಬಾರ್!

ಕೋವಿಡ್ ನಿಯಮ ಪಾಲಿಸದ ದಂಪತಿಗಳನ್ನು ತಡೆದ ಪೊಲೀಸರ ಮೇಲೆಯೇ ಅನುಚಿತ ವರ್ತನೆ ತೋರಿರುವ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಪೊಲೀಸರೊಂದಿಗೆ ಅನುಚಿತ ವರ್ತನೆ ತೋರಿದ ದಂಪತಿ
ಪೊಲೀಸರೊಂದಿಗೆ ಅನುಚಿತ ವರ್ತನೆ ತೋರಿದ ದಂಪತಿ

ನವದೆಹಲಿ: ಕೋವಿಡ್ ನಿಯಮ ಪಾಲಿಸದ ದಂಪತಿಗಳನ್ನು ತಡೆದ ಪೊಲೀಸರ ಮೇಲೆಯೇ ಅನುಚಿತ ವರ್ತನೆ ತೋರಿರುವ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಕೊರೊನಾ ಸಾಂಕ್ರಾಮಿಕದಿಂದಾಗಿ ತತ್ತರಿಸಿ ಹೋಗಿರುವ ರಾಜಧಾನಿ ದೆಹಲಿಯಲ್ಲಿ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆಯಾದರೂ, ಕೆಲ ವ್ಯಕ್ತಿಗಳು ಮಾತ್ರ ತಮಗೂ ನಿಯಮಗಳಿಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಹಾಕದ  ಕಾರಣ ದಂಡ ಹಾಕಲು ಬಂದ ಪೊಲೀಸರ ಮೇಲೆಯೇ ಅನುಚಿತ ವರ್ತನೆ ತೋರಿರುವ ಘಟನೆ ನಡೆದಿದೆ. 

ವೀಕೆಂಡ್ ಕರ್ಫ್ಯೂ ಸಮಯದಲ್ಲಿ ಮಾಸ್ಕ್​ ಹಾಕದೆ ಮತ್ತು ಯಾವುದೇ ಪಾಸ್​ ಇಲ್ಲದೆ ಸಂಚರಿಸುತ್ತಿದ್ದ ದಂಪತಿಯ ಕಾರನ್ನು ಪೊಲೀಸರು  ತಡೆದು ಪ್ರಶ್ನಿಸಿದ್ದಾರೆ. ಈ ವೇಳೆ ಕಾರಿನಿಂದ ಇಳಿದ ಮಹಿಳೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾಳೆ. "ನಾನು ನನ್ನ ಗಂಡನಿಗೆ ಮುತ್ತು ಕೊಡುತ್ತೇನೆ, ನನ್ನನ್ನು ತಡೆಯಲು  ನಿಮಗೆ ಸಾಧ್ಯವೇ?, ಕೊರೊನಾ ಹೆಸರಲ್ಲಿ ನೀವು ನೌಟಂಕಿ ಯಾಕೆ ಮಾಡುತ್ತೀರಿ?, ಮಾಸ್ಕ್‌ ಹಾಕುವುದು, ಬಿಡುವುದು ನನ್ನಿಷ್ಟ" ಎಂದು ಮಹಿಳೆ ಪೊಲೀಸರನ್ನೇ ಗದರಿಸಿದ್ದಾಳೆ.

ಅಂತೆಯೇ "ನೀವು ನನ್ನ ಕಾರನ್ನು ಏಕೆ ನಿಲ್ಲಿಸಿದ್ದೀರಿ?, ನಾನು ನನ್ನ ಹೆಂಡತಿಯೊಂದಿಗೆ ಕಾರಿನೊಳಗೆ ಇದ್ದೆ" ಎಂದು ಮಾಸ್ಕ್​ ಧರಿಸದ ವ್ಯಕ್ತಿ ಪೊಲೀಸರನ್ನು ಪ್ರಶ್ನಿಸಿದ್ದಾನೆ. ಭಾನುವಾರ ದೆಹಲಿಯ ದರಿಯಾಗಂಜ್​​​ ಪ್ರದೇಶದಲ್ಲಿ ಸಂಜೆ 4 ಗಂಟೆಯ ಹೊತ್ತಿಗೆ ಈ ಘಟನೆ ನಡೆದಿದೆ. ದಂಪತಿಗಳ ರೌದ್ರಾವತಾರವನ್ನು  ವಿಡಿಯೋ ಮಾಡಿಕೊಂಡ ಪೊಲೀಸರು ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಜೋಡಿಯ ಈ ವರ್ತನೆಗೆ ಭಾರೀ ವಿರೋಧ ವ್ಯಕ್ತವಾಗಿದ್ದು, ದಂಪತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳಡಿ ದೂರು ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಇನ್ನು ಇತ್ತೀಚೆಗಷ್ಟೇ ದೆಹಲಿ ಹೈಕೋರ್ಟ್ ಕಾರಿನಲ್ಲಿದ್ದಾಗಲೂ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com