ರಾಶಿ ರಾಶಿ ಶವಗಳನ್ನು ತೋರಿಸುವ ಮಾಧ್ಯಮ ವರದಿಗಳಿಂದ ಭೀತಿ ಸೃಷ್ಟಿ: ಬಿಜೆಪಿ ಮುಖಂಡ ಕೈಲಾಶ್ ವಿಜಯ್ ವರ್ಗೀಯಾ
ಕೋವಿಡ್-19 ಸೋಂಕಿನಿಂದ ಮೃತಪಟ್ಟ ರಾಶಿ ರಾಶಿ ಶವಗಳನ್ನು ತೋರಿಸುವ ಮಾಧ್ಯಮ ವರದಿಗಳಿಂದ ಭೀತಿ ಹರಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯಾ ಮಂಗಳವಾರ ಆರೋಪಿಸಿದ್ದಾರೆ.
Published: 20th April 2021 08:41 PM | Last Updated: 21st April 2021 01:59 PM | A+A A-

ಕೈಲಾಶ್ ವಿಜಯ್ ವರ್ಗಿಯಾ
ಇಂದೋರ್: ಕೋವಿಡ್-19 ಸೋಂಕಿನಿಂದ ಮೃತಪಟ್ಟ ರಾಶಿ ರಾಶಿ ಶವಗಳನ್ನು ತೋರಿಸುವ ಮಾಧ್ಯಮ ವರದಿಗಳಿಂದ ಭೀತಿ ಹರಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯಾ ಮಂಗಳವಾರ ಆರೋಪಿಸಿದ್ದು, ಸೋಂಕು ಪೀಡಿತ ಜನರಿಗೆ ಸೇವೆ ಸಲ್ಲಿಸುವವರ ಸಕಾರಾತ್ಮಕ ಕಥೆಗಳನ್ನು ಸಹ ತೋರಿಸಬೇಕೆಂದು ಮಾಧ್ಯಮದವರನ್ನು ಇಂದಿಲ್ಲಿ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ, ಎನ್ ಜಿಒಗಳು, ಇತರ ಕ್ಷೇತ್ರಗಳ ಜನರು ಕೋವಿಡ್-19 ಪೀಡಿತ ಜನರಿಗಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಾಧ್ಯಮಗಳಲ್ಲಿ ಮನವಿ ಮಾಡುತ್ತೇನೆ, ನೀವುಗಳ ಪ್ರತಿದಿನ ತೋರಿಸುವ ರಾಶಿ ರಾಶಿ ಶವಗಳು, ರೋಗಿಗಳ ಸಂಕಟಗಳು, ಸಾಮಾನ್ಯ ಜನರಲ್ಲಿ ಭೀತಿಯನ್ನು ಸೃಷ್ಟಿಸುತ್ತವೆ ಎಂದರು.
ಇತಿಹಾಸವನ್ನು ನೋಡಿದರೆ ಸಾಂಕ್ರಾಮಿಕ ಪ್ರತಿ 100 ವರ್ಷಗಳಿಗೆ ಒಮ್ಮೆ ಬರುತ್ತದೆ. ಇಂತಹ ಸಂದರ್ಭದಲ್ಲಿ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ನಿರಂತರವಾಗಿ ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಮಾಧ್ಯಮಗಳು ತೋರಿಸಬೇಕು, ಅನೇಕ ವೈದ್ಯಕೀಯೇತರ ಸಿಬ್ಬಂದಿ ಕೂಡಾ ಕೊರೋನಾ ಪೀಡಿತ ಜನರಿಗಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನು ಸಹ ಸಾರ್ವಜನಿಕರಿಗೆ ತೋರಿಸಬೇಕು ಏಕೆಂದರೆ ಇದು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು ಬಹಳ ಅವಶ್ಯಕವಾಗಿದೆ ಎಂದು ಅವರು ಹೇಳಿದರು.
ಮಧ್ಯಪ್ರದೇಶದಲ್ಲಿ ಕೋವಿಡ್-19 ರೋಗಿಗಳಿಗೆ ಆಸ್ಪತ್ರೆ, ಹಾಸಿಗೆಗಳ ಕೊರತೆ, ರೆಮ್ಡೆಸಿವಿರ್ ಚುಚ್ಚುಮದ್ದು ಮತ್ತು ವೈದ್ಯಕೀಯ ಆಮ್ಲಜನಕದ ಬಗ್ಗೆ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಕುರಿತು ಮಾತನಾಡಿದ ಅವರು, ಇಂತಹ ಕಠಿಣ ಪರಿಸ್ಥಿತಿಯಲ್ಲಿ ರಾಜಕಾರಣಿಗಳು, ಪಕ್ಷ ರಾಜಕಾರಣ ಬದಿಗೊತ್ತಿ ಜನರಿಗೆ ಸಹಾಯ ಮಾಡಲು ಮುಂದಾಗಬೇಕು ಎಂದು ಹೇಳಿದರು.