ಕೇಂದ್ರ ಸರ್ಕಾರ ಐಎಸ್ ಐ ಜೊತೆ ಬೇಕಾದರೆ ಮಾತನಾಡುತ್ತದೆ, ವಿರೋಧ ಪಕ್ಷದವರ ಜೊತೆ ಸಿದ್ಧವಿಲ್ಲ: ಪ್ರಿಯಾಂಕಾ ಗಾಂಧಿ ವಾಗ್ದಾಳಿ

ಕೇಂದ್ರ ಸರ್ಕಾರ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜೊತೆ ಬೇಕಾದರೆ ಮಾತುಕತೆ ನಡೆಸುತ್ತದೆ, ಆದರೆ ವಿರೋಧ ಪಕ್ಷದ ನಾಯಕರ ಜೊತೆ ಕೋವಿಡ್-19 ಪರಿಸ್ಥಿತಿ ಬಗ್ಗೆ ಮಾತನಾಡಲು ಸಿದ್ಧವಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಗಂಭೀರ ಆರೋಪ ಮಾಡಿದ್ದಾರೆ.
ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಿಯಾಂಕಾ ಗಾಂಧಿ ವಾದ್ರಾ

ನವದೆಹಲಿ: ಕೇಂದ್ರ ಸರ್ಕಾರ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜೊತೆ ಬೇಕಾದರೆ ಮಾತುಕತೆ ನಡೆಸುತ್ತದೆ, ಆದರೆ ವಿರೋಧ ಪಕ್ಷದ ನಾಯಕರ ಜೊತೆ ಕೋವಿಡ್-19 ಪರಿಸ್ಥಿತಿ ಬಗ್ಗೆ ಮಾತನಾಡಲು ಸಿದ್ಧವಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಗಂಭೀರ ಆರೋಪ ಮಾಡಿದ್ದಾರೆ.

ಎಎನ್ಐ ಸುದ್ದಿಸಂಸ್ಥೆಯೊಂದಿಗೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ದುಬೈಯಲ್ಲಿರುವ ಗುಪ್ತಚರ ಸಂಸ್ಥೆಯೊಂದಿಗೆ ಮಾತನಾಡುವ ಕೇಂದ್ರ ಸರ್ಕಾರ ವಿರೋಧ ಪಕ್ಷದ ನಾಯಕರೊಂದಿಗೆ ಏಕೆ ಕೋವಿಡ್ ಬಗ್ಗೆ ಚರ್ಚೆ ನಡೆಸುತ್ತಿಲ್ಲ, ಸರ್ಕಾರದ ಮಟ್ಟದಲ್ಲಿ ಕೊರೋನಾ ಬಗ್ಗೆ ರಚನಾತ್ಮಕವಾಗಿ ಸಕಾರಾತ್ಮಕವಾಗಿ ಸಲಹೆಗಳನ್ನು ವಿರೋಧ ಪಕ್ಷದ ನಾಯಕರು ಯಾರೂ ನೀಡುವುದಿಲ್ಲ ಎಂದು ನಾನು ಭಾವಿಸುವುದಿಲ್ಲ, ಎಲ್ಲಾ ರಾಜಕೀಯ ನಾಯಕರು ಇಂದು ಸರ್ಕಾರದ ಪರವಾಗಿ ನಾವಿದ್ದೇವೆ ಎನ್ನುತ್ತಿದ್ದಾರೆ, ಪ್ರಜಾಪ್ರಭುತ್ವದಲ್ಲಿ ಚರ್ಚೆಗಳಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇಲೆ ವಾಗ್ದಾಳಿ ನಡೆಸಿದ ಪ್ರಿಯಾಂಕಾ ಗಾಂಧಿ, ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳನ್ನು ಮೋದಿಯವರು ನಿಲ್ಲಿಸಿ ಜನರ ಬಳಿ, ವಿರೋಧ ಪಕ್ಷದ ನಾಯಕರಲ್ಲಿ ದೇಶದ ಕೋವಿಡ್ ಸಮಸ್ಯೆ ಬಗ್ಗೆ ಮಾತನಾಡಬೇಕು, ವಿರೋಧ ಪಕ್ಷದ ನಾಯಕರು ಸಮಸ್ಯೆ ಬಗ್ಗೆ ಮಾತನಾಡದಿದ್ದರೆ, ಸರ್ಕಾರದ ತಪ್ಪುಗಳನ್ನು ಹೇಳದಿದ್ದರೆ ಯಾರು ಹೇಳುತ್ತಾರೆ ಎಂದು ಕೇಳಿದರು.

ಈ ಕಷ್ಟದ ಸಂದರ್ಭದಲ್ಲಿ ದೇಶದ ಜನತೆ ಜೊತೆಗಿದ್ದು ನಾವೆಲ್ಲರೂ ಒಟ್ಟುಸೇರಿ ಕೊರೋನಾ ವಿರುದ್ಧ ಹೋರಾಟ ಮಾಡಬೇಕಿದೆ. ಮನಮೋಹನ್ ಸಿಂಗ್ ಅವರು 10 ವರ್ಷಗಳ ಕಾಲ ಪ್ರಧಾನಿಯಾಗಿದ್ದರು, ಅವರು ಎಷ್ಟು ಗೌರವಾನ್ವಿತ, ಸಂಭಾವಿತ ವ್ಯಕ್ತಿ ಎಂದು ಪ್ರತಿಯೊಬ್ಬರೂ ಬಲ್ಲರು, ಅವರು ಕೊರೋನಾ ಸಾಂಕ್ರಾಮಿಕವನ್ನು ಹೇಗೆ ಎದುರಿಸುವುದೆಂದು ಸಲಹೆ ನೀಡುತ್ತಾರೆಂದರೆ ಆ ಸಲಹೆಯನ್ನು ಅಷ್ಟೇ ಗೌರವದಿಂದ ಸರ್ಕಾರ ಸ್ವೀಕರಿಸಬೇಕು, ಮಾಜಿ ಪ್ರಧಾನ ಮಂತ್ರಿಗಳ ಮಾತನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡೇ ಇಲ್ಲ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದರು.

ಕೊರೋನಾ ತಾಂಡವವಾಡುತ್ತಿರುವಾಗ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಚುನಾವಣಾ ಪ್ರಚಾರ, ರ್ಯಾಲಿಗಳನ್ನು ನಡೆಸುವ ಅಗತ್ಯವೇನಿತ್ತು ಎಂದು ಕೇಳಿದರು.

ಆಸ್ಪತ್ರೆಗಳಲ್ಲಿ ಕೋವಿಡ್-19 ರೋಗಿಗಳನ್ನು ದಾಖಲು ಮಾಡಿಕೊಳ್ಳಲು ಮುಖ್ಯ ವೈದ್ಯಕೀಯ ಅಧಿಕಾರಿಯಿಂದ ಅನುಮತಿ ಪಡೆಯಬೇಕೆಂಬ ನಿಯಮಕ್ಕೆ ವಿನಾಯ್ತಿ ನೀಡಬೇಕೆಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ಪತ್ರ ಬರೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com