ಸರಿಯಾದ ಯೋಜನೆ, ಕಾರ್ಯತಂತ್ರಗಳಿಲ್ಲದೆ ರೆಮೆಡಿಸಿವಿರ್, ಆಕ್ಸಿಜನ್ ಕೊರತೆಯಾಗಿದೆ, ಇದು ಸರ್ಕಾರದ ವೈಫಲ್ಯ: ಪ್ರಿಯಾಂಕಾ ಗಾಂಧಿ

ಭಾರತದಲ್ಲಿ ಆಕ್ಸಿಜನ್ ಉತ್ಪಾದನೆ ವಿಶ್ವದಲ್ಲಿಯೇ ಬೃಹತ್ ಪ್ರಮಾಣದಲ್ಲಿದೆ. ಹೀಗಿರುವಾಗ ಕೊರತೆ ಏಕೆ ಉಂಟಾಗುತ್ತಿದೆ. ಕೊರೋನಾ ಮೊದಲ ಅಲೆ ಭಾರತದಲ್ಲಿ ಕಾಣಿಸಿಕೊಂಡು ಕಡಿಮೆಯಾಗಿ ಎರಡನೇ ಅಲೆ ಎದ್ದ ಮಧ್ಯೆ 8 ರಿಂದ 9 ತಿಂಗಳು ಸಮಯವಿತ್ತು.
ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಿಯಾಂಕಾ ಗಾಂಧಿ ವಾದ್ರಾ

ನವದೆಹಲಿ: ಭಾರತದಲ್ಲಿ ಆಕ್ಸಿಜನ್ ಉತ್ಪಾದನೆ ವಿಶ್ವದಲ್ಲಿಯೇ ಬೃಹತ್ ಪ್ರಮಾಣದಲ್ಲಿದೆ. ಹೀಗಿರುವಾಗ ಕೊರತೆ ಏಕೆ ಉಂಟಾಗುತ್ತಿದೆ. ಕೊರೋನಾ ಮೊದಲ ಅಲೆ ಭಾರತದಲ್ಲಿ ಕಾಣಿಸಿಕೊಂಡು ಕಡಿಮೆಯಾಗಿ ಎರಡನೇ ಅಲೆ ಎದ್ದ ಮಧ್ಯೆ 8ರಿಂದ 9 ತಿಂಗಳು ಸಮಯವಿತ್ತು.ಸರ್ಕಾರದ ಸಮೀಕ್ಷೆಯೇ ಎರಡನೇ ಅಲೆ ತೀವ್ರವಾಗಿದೆ ಎಂದು ಹೇಳುತ್ತಿದೆ, ಆದರೆ ನೀವು ಅದನ್ನು ನಿರ್ಲಕ್ಷ್ಯ ಮಾಡಿದಿರಿ ಎಂದು ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಸರ್ಕಾರದ ಮುಂದೆ ಸಾಕಷ್ಟು ಸಮಯವಿತ್ತು. ಇಂದು ಭಾರತ ಕೇವಲ 2 ಸಾವಿರ ಟ್ರಕ್ ನಷ್ಟು ಮಾತ್ರ ಆಕ್ಸಿಜನ್ ನ್ನು ಸಾಗಾಟ ಮಾಡಬಹುದಾಗಿದೆ. ಆಕ್ಸಿಜನ್ ನಮ್ಮಲ್ಲಿ ಇದೆ, ಆದರೆ ಅದು ಎಲ್ಲಿಗೆ ತಲುಪಬೇಕೋ ಅಲ್ಲಿಗೆ ತಲುಪುತ್ತಿಲ್ಲ. ಕಳೆದ ಆರು ತಿಂಗಳಲ್ಲಿ 1.1 ಮಿಲಿಯನ್ ರೆಮೆಡಿಸಿವಿರ್ ರಫ್ತಾಗಿದೆ. ಇಂದು ನಾವು ಕೊರತೆ ಎದುರಿಸುತ್ತಿದ್ದೇವೆ ಎಂದರೆ ಏನರ್ಥ ಎಂದು ಪ್ರಶ್ನಿಸಿದ್ದಾರೆ.

ಕಳೆದ ಜನವರಿಯಿಂದ ಮಾರ್ಚ್ ಮಧ್ಯೆ ಕೇಂದ್ರ ಸರ್ಕಾರ 6 ಕೋಟಿ ಲಸಿಕೆಗಳನ್ನು ರಫ್ತು ಮಾಡಿದೆ. ಈ ಸಮಯದಲ್ಲಿ 3ರಿಂದ 4 ಕೋಟಿ ಭಾರತೀಯರಿಗೆ ಲಸಿಕೆ ಹಾಕಲಾಗಿದೆ. ಭಾರತೀಯರಿಗೆ ಏಕೆ ಪ್ರಾಧಾನ್ಯತೆ ಕೊಡಲಿಲ್ಲ, ಸರ್ಕಾರದ ತಪ್ಪು ನಿರ್ಧಾರ, ಸರಿಯಾದ ಯೋಜನೆಯಿಲ್ಲದೆ ಲಸಿಕೆಯ ಕೊರತೆಯುಂಟಾಗಿದೆ, ರೆಮೆಡಿಸಿವಿರ್ ಕೊರತೆ ಸರಿಯಾದ ಯೋಜನೆಯಿಲ್ಲದೆ, ಆಕ್ಸಿಜನ್ ಕೊರತೆ ಸರಿಯಾದ ಕಾರ್ಯತಂತ್ರ ರೂಪಿಸದೆ ಇಂದು ಉಂಟಾಗಿದೆ ಎಂದು ಪ್ರಿಯಾಂಕಾ ಆರೋಪಿಸಿದರು.

ಇಂದು ಕೂಡ ಸರ್ಕಾರದ ನಾಯಕರು ಚುನಾವಣಾ ಪ್ರಚಾರ ನಡೆಸುವುದರಲ್ಲಿ, ರ್ಯಾಲಿಗಳನ್ನು ಆಯೋಜಿಸುವುದರಲ್ಲಿ ನಿರತರಾಗಿದ್ದಾರೆ. ವೇದಿಕೆ ಮೇಲೆ ನಿಂತುಕೊಂಡು ವಿರೋಧ ಪಕ್ಷವನ್ನು ಟೀಕಿಸುತ್ತಾರೆ, ನಗುತ್ತಾರೆ, ದೇಶದಲ್ಲಿ ಉಂಟಾಗಿರುವ ಭೀಕರ ಆರೋಗ್ಯ ತುರ್ತು ಪರಿಸ್ಥಿತಿ ಬಗ್ಗೆ ಅವರಿಗೆ ಗಾಂಭೀರ್ಯತೆಯೇ ಇಲ್ಲದಾಗಿದೆ, ಜನ ಅಳುತ್ತಿದ್ದಾರೆ, ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಆಕ್ಸಿಜನ್, ಆಸ್ಪತ್ರೆಗಳಲ್ಲಿ ಬೆಡ್, ಔಷಧಿಗೋಸ್ಕರ ಬೊಬ್ಬಿಡುತ್ತಿದ್ದಾರೆ. ಆದರೆ ಸರ್ಕಾರದ ನಾಯಕರು ಮಾತ್ರ ರ್ಯಾಲಿಗಳಲ್ಲಿ ಭಾಗಿಯಾಗುತ್ತಾ ನಗುತ್ತಿದ್ದಾರೆ. ಇದು ಹೇಗೆ ಸಾಧ್ಯ ಎಂದು ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com