ಪಾಕ್ ಗುರುದ್ವಾರಕ್ಕೆ ತೆರಳಿ ಬಂದಿದ್ದ 100 ಮಂದಿ ಸಿಖ್ ಯಾತ್ರಾರ್ಥಿಗಳಲ್ಲಿ ಕೊರೋನಾ ಸೋಂಕು!

ಬೈಸಾಖಿ ಆಚರಣೆ ನಿಮಿತ್ತ ಪಾಕಿಸ್ತಾನಕ್ಕೆ ತೆರಳಿದ್ದ 100 ಸಿಖ್ ಯಾತ್ರಾರ್ಥಿಗಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚಂಡೀಘಡ: ಬೈಸಾಖಿ ಆಚರಣೆ ನಿಮಿತ್ತ ಪಾಕಿಸ್ತಾನಕ್ಕೆ ತೆರಳಿದ್ದ 100 ಸಿಖ್ ಯಾತ್ರಾರ್ಥಿಗಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

ಬೈಸಾಕಿ ಆಚರಣೆ ನಿಮಿತ್ತ ಪಾಕಿಸ್ತಾನದ ಲಾಹೋರ್ ನಲ್ಲಿರುವ ಗುರುದ್ವಾರ ಪಂಜಾ ಸಾಹಿಬ್‌ಗೆ ಭಾರತದಿಂದ ತೆರಳಿದ್ದ ಸುಮಾರು 815 ಸಿಖ್ ಯಾತ್ರಾರ್ಥಿಗಳ ಪೈಕಿ 100 ಮಂದಿಗೆ ಸೋಂಕು ತಗುಲಿರುವುದು ಸ್ಪಷ್ಟವಾಗಿದೆ. ಸೋಂಕಿತ ಸಿಖ್ ಯಾತ್ರಾರ್ಥಿಗಳು ಬೈಸಾಖಿಯ ಕೊನೆಯ ದಿನ ಅಂದರೆ ಏಪ್ರಿಲ್  14 ರಂದು ಹಸನ್ ಅಬ್ದಾಲ್‌ನಲ್ಲಿರುವ ಗುರುದ್ವಾರ ಪಂಜಾ ಸಾಹಿಬ್‌ಗೆ ಭೇಟಿ ನೀಡುವುದರ ಜೊತೆಗೆ, ಅವರು ಏಪ್ರಿಲ್ 19 ರಂದು ಕರ್ತಾರ್‌ಪುರದ ಗುರುದ್ವಾರ ದರ್ಬಾರ್ ಸಾಹಿಬ್ ಮತ್ತು ಇತರ ಸ್ಥಳಗಳಿಗೆ ಭೇಟಿ ನೀಡಿದ್ದರು.

ಬಳಿಕ ಅಠಾರಿ-ವಾಘಾ ಗಡಿಯ ಮೂಲಕ ಭಾರತಕ್ಕೆ ಮರಳುವಾಗ ಅವರನ್ನು ಜಂಟಿ ಚೆಕ್ ಪೋಸ್ಟ್ ನಲ್ಲಿ ಕಡ್ಡಾಯ ರಾಪಿಡ್ ಆ್ಯಂಟಿಜೆನ್ ಪರೀಕ್ಷೆಗೆ (RAT) ಒಳಪಡಿಸಲಾಗಿತ್ತು. ಈ ವೇಳೆ 815 ಸಿಖ್ ಯಾತ್ರಾರ್ಥಿಗಳ ಪೈಕಿ 100 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ವರದಿಯಲ್ಲಿ ನೆಗೆಟಿವ್ ಬಂದ  ಯಾತ್ರಾರ್ಥಿಗಳನ್ನು ಮಾತ್ರ ಮನೆಗೆ ತೆರಳಲು ಅವಕಾಶ ನೀಡಲಾಗುತ್ತಿದ್ದು, ಸೋಂಕಿತರಿಗೆ ಕೋವಿಡ್ ಕೇರ್ ಸೆಂಟರ್ ನಲ್ಲಿಟ್ಟು ಚಿಕಿತ್ಸೆಗೊಳಪಡಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಂತೆಯೇ ನೆಗೆಟಿನ್ ವರದಿ ಬಂದ ಯಾತ್ರಾರ್ಥಿಗಳನ್ನು ಕೂಡ ಮನೆಯಲ್ಲಿ ಕ್ವಾರಂಟೈನ್ ಆಗುವಂತೆ ಸೂಚಿಸಲಾಗಿದ್ದು, ಯಾತ್ರಾರ್ಥಿಗಳ ಮೇಲೆ ನಿಗಾ ಇಡಲಾಗಿದೆ. ಇನ್ನು ಇಂಡೋ-ಪಾಕ್ ನಡುವೆ ಧಾರ್ಮಿಕ ದೇಗುಲಗಳಿಗೆ ಭೇಟಿ ನೀಡಲು ಈ ಹಿಂದೆ ಉಭಯ ದೇಶಗಳ ಸರ್ಕಾರಗಳು ಒಪ್ಪಂದ  ಮಾಡಿಕೊಂಡಿದ್ದವು. ಅದರಂತೆ ಉಭಯ ದೇಶಗಳ ನಡುವೆ ಯಾತ್ರಾರ್ಥಿಗಳು ಪ್ರಯಾಣ ಬೆಳೆಸಿದ್ದಾರೆ. ಆದರೆ ಕೋವಿಡ್ ಸೋಂಕಿನ ಹಿನ್ನಲೆಯಲ್ಲಿ ನಿರ್ಬಂಧಗಳ ಹೊರತಾಗಿಯೂ ಯಾತ್ರಾರ್ಥಿಗಳು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com