ಮಹಾರಾಷ್ಟ್ರ ಕೋವಿಡ್ ಆಸ್ಪತ್ರೆ ಅಗ್ನಿ ದುರಂತ: ತನಿಖೆಗೆ ಸಿಎಂ ಉದ್ಧವ್ ಠಾಕ್ರೆ ಆದೇಶ, ಮೃತರ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರ

ವಿರಾರ್ ವಿಜಯ ವಲ್ಲಭ್ ಕೋವಿಡ್-19 ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅವಘಡ ಘಟನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ಶುಕ್ರವಾರ ತನಿಖೆಗೆ ಆದೇಶಿಸಿದ್ದಾರೆ.
ರೋಗಿಗಳನ್ನು ಸ್ಥಳಾಂತರ ಮಾಡುತ್ತಿರುವುದು
ರೋಗಿಗಳನ್ನು ಸ್ಥಳಾಂತರ ಮಾಡುತ್ತಿರುವುದು

ಮುಂಬೈ: ವಿರಾರ್ ವಿಜಯ ವಲ್ಲಭ್ ಕೋವಿಡ್-19 ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅವಘಡ ಘಟನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ಶುಕ್ರವಾರ ತನಿಖೆಗೆ ಆದೇಶಿಸಿದ್ದಾರೆ. 

ಈ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ನೀಡಿದ್ದು, ವಿಜಯ ವಲ್ಲಭ್ ಕೋವಿಡ್-19 ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅವಘಡ ಸಂಬಂಧ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ತನಿಖೆಗೆ ಆದೇಶಿಸಿದ್ದಾರೆಂದು ತಿಳಿಸಿದೆ. 

ಇಂದು ಬೆಳಗಿನ ಜಾವ ವಿಜಯ ವಲ್ಲಭ್ ಕೋವಿಡ್-19 ಆಸ್ಪತ್ರೆಯಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 13 ಮಂದಿ ಸಜೀವ ದಹನವಾಗಿದ್ದಾರೆ. 

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ವಿಪತ್ತು ನಿಯಂತ್ರಣ ವಿಭಾಗದ ಮುಖ್ಯಸ್ಥ ವಿವೇಕಾನಂದ್ ಕದಂ ಅವರು, ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅಗ್ನಿ ದುರಂತ ಸಂಭವಿಸಿದೆ. ಆಸ್ಪತ್ರೆಯ ಐಸಿಯು ಎಸಿ ಘಟಕದಲ್ಲಿ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿದೆ. ಈ ವೇಳೆ ಐಸಿಯುವಿನಲ್ಲಿ ಹಲವು ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ. 

ಆಸ್ಪತ್ರೆಯ ವೈದ್ಯ ದಿಲೀಪ್ ಶಾ ಎಂಬುವವರು ಪ್ರತಿಕ್ರಿಯೆ ನೀಡಿ, ಘಟನೆಯಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ, ಅಗ್ನಿ ಅವಘಡ ಸಂಭವಿಸುತ್ತಿದ್ದಂತೆಯೇ ಆಸ್ಪತ್ರೆಯಲ್ಲಿದ್ದ ಗಂಭೀರ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿದ್ದವರು ಸೇರಿ ಒಟ್ಟು 21 ಮಂದಿ ರೋಗಿಗಳನ್ನು ಇತರೆ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

ಈ ನಡುವೆ ದುರ್ಘಟನೆ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. 

ಪಾಲ್ಘರ್ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಹಲವು ರೋಗಿಗಳು ಸಾವನ್ನಪ್ಪಿದ್ದು, ಘಟನೆ ಅತ್ಯಂತ ಬೇಸರ ತರಿಸಿದೆ. ಮೃತ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಶೀಘ್ರಗತಿಯಲ್ಲಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ. 

ಪ್ರಧಾನಿ ಮೋದಿ ಸಂತಾಪ
ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಶೀಘ್ರಗತಿಯಲ್ಲಿ ಗುಣಮುಖರಾಗದಿ ಎಂದು ಹೇಳಿದ್ದಾರೆ. 

ಮೃತರ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರ
ಪ್ರಕಱಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಸಚಿವ ಏಕನಾಥ್ ಶಿಂಧೆ ಅವರು, ಮೃತರ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. 

ಇದೊಂದು ಅತ್ಯಂತ ದೊಡ್ಡ ಪ್ರಕರಣವಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಮೃತ ಕುಟುಂಬಕ್ಕೆ ಸರ್ಕಾರ ರೂ.5 ಲಕ್ಷ ಪರಿಹಾರ ನೀಡಲಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com