ಸರ್ಕಾರದ ಕಠಿಣ ಆದೇಶದ ಹೊರತಾಗಿಯೂ ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆ ತೀವ್ರ: ಅಪೊಲೊ ಎಂಡಿ ಸಂಗೀತಾ ರೆಡ್ಡಿ

ವೈದ್ಯಕೀಯ ಆಮ್ಲಜನಕದ ನಿರಂತರ ಉತ್ಪಾದನೆ ಮತ್ತು ಪೂರೈಕೆಯನ್ನು ಮಾಡಬೇಕೆಂದು ಸರ್ಕಾರದ ಕಠಿಣ ಆದೇಶಗಳ ಹೊರತಾಗಿಯೂ ಆಸ್ಪತ್ರೆಗಳಲ್ಲಿ ಆಮ್ಲಜನಕದ ತೀವ್ರ ಕೊರತೆ ಕಾಡುತ್ತಿದೆ ಎಂದು ಅಪೊಲೊ ಆಸ್ಪತ್ರೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸಂಗೀತಾ ರೆಡ್ಡಿ ದೇಶದ ಕರಾಳ ವಾಸ್ತವವನ್ನು ತೆರೆದಿಟ್ಟಿದ್ದಾರೆ.
ಅಪೊಲೊ ಆಸ್ಪತ್ರೆ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಡಾ ಸಂಗೀತಾ ರೆಡ್ಡಿ
ಅಪೊಲೊ ಆಸ್ಪತ್ರೆ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಡಾ ಸಂಗೀತಾ ರೆಡ್ಡಿ

ನವದೆಹಲಿ: ವೈದ್ಯಕೀಯ ಆಮ್ಲಜನಕದ ನಿರಂತರ ಉತ್ಪಾದನೆ ಮತ್ತು ಪೂರೈಕೆಯನ್ನು ಮಾಡಬೇಕೆಂದು ಸರ್ಕಾರದ ಕಠಿಣ ಆದೇಶಗಳ ಹೊರತಾಗಿಯೂ ಸರಿಯಾಗಿ ಪೂರೈಕೆಯಾಗದೆ ಆಸ್ಪತ್ರೆಗಳಲ್ಲಿ ಆಮ್ಲಜನಕದ ತೀವ್ರ ಕೊರತೆ ಕಾಡುತ್ತಿದೆ, ಇದರಿಂದ ರೋಗಿಗಳು ನರಳಿ ಸಾಯುತ್ತಿದ್ದಾರೆ, ಆಸ್ಪತ್ರೆಗಳು ಕೂಡ ಪರಿತಪಿಸುತ್ತಿವೆ ಎಂದು ಅಪೊಲೊ ಆಸ್ಪತ್ರೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸಂಗೀತಾ ರೆಡ್ಡಿ ದೇಶದ ಕರಾಳ ವಾಸ್ತವವನ್ನು ತೆರೆದಿಟ್ಟಿದ್ದಾರೆ.

ಕಳೆದ ರಾತ್ರಿಯಿಂದಲೇ ದೆಹಲಿಯ ಮ್ಯಾಕ್ಸ್ ಸ್ಮಾರ್ಟ್ ಆಸ್ಪತ್ರೆ ಮತ್ತು ಮ್ಯಾಕ್ಸ್ ಸಾಕೆಟ್ ಆಸ್ಪತ್ರೆಗಳು ನಮ್ಮಲ್ಲಿ ರೋಗಿಗಳಿಗೆ ಇನ್ನೊಂದು ಗಂಟೆಯಷ್ಟೇ ಪೂರೈಸುವ ಆಕ್ಸಿಜನ್ ಇರುವುದು ದಯವಿಟ್ಟು ಶೀಘ್ರವೇ ಆಕ್ಸಿಜನ್ ಕಳುಹಿಸಿಕೊಡಿ ಎಂದು ಸರ್ಕಾರಕ್ಕೆ ಎಸ್ ಒಎಸ್ ಕಳುಹಿಸಿದ್ದವು. ದೆಹಲಿಯ ಗಂಗಾ ರಾಮ್ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳಲ್ಲಿ ಆಕ್ಸಿಜನ್ ಕೊರತೆಯಿಂದ 25 ರೋಗಿಗಳು ಮೃತಪಟ್ಟಿದ್ದರು.

ಈ ಸಂದರ್ಭದಲ್ಲಿ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಸಂಗೀತಾ ರೆಡ್ಡಿ, ಸರ್ಕಾರದ ಆದೇಶದ ಹೊರತಾಗಿಯೂ ಆಸ್ಪತ್ರೆಗಳು ಆಕ್ಸಿಜನ್ ಪೂರೈಕೆ ಕೊರತೆಯನ್ನು ಎದುರಿಸುತ್ತಿವೆ. ಗಂಟೆ ಗಂಟೆಗೆ ಕೆಲವು ಆಸ್ಪತ್ರೆಗಳಿಗೆ ಸವಾಲಾಗಿದೆ. ಪ್ರತಿ ನಿಮಿಷದ ವಿಳಂಬದಿಂದ ಜೀವವೊಂದು ಹೋಗಬಹುದು, ಜೀವ ಅಮೂಲ್ಯ, ಸರಿಯಾಗಿ ಆಕ್ಸಿಜನ್ ಪೂರೈಕೆ ಮಾಡಲು ಕ್ರಮ ಕೈಗೊಳ್ಳಿ ಎಂದು ಕೇಂದ್ರ ಸಚಿವರುಗಳು, ದೆಹಲಿ ಮುಖ್ಯಮಂತ್ರಿ ಮತ್ತು ಇತರ ರಾಜ್ಯ ಸಚಿವರುಗಳನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

ಮ್ಯಾಕ್ಸ್ ಹೆಲ್ತ್ ಕೇರ್ ಟ್ವೀಟ್ ಮಾಡಿ, ಇನ್ನೊಂದು ಗಂಟೆ ಆಕ್ಸಿಜನ್ ಪೂರೈಸುವಷ್ಟು ಮಾತ್ರ ನಮ್ಮಲ್ಲಿ ಸಂಗ್ರಹವಿದೆ, ಮಧ್ಯರಾತ್ರಿ 1 ಗಂಟೆಯಿಂದ ಹೊಸ ಪೂರೈಕೆಯನ್ನು ಇದಿರು ನೋಡುತ್ತಿದ್ದೇವೆ, 700ಕ್ಕೂ ಹೆಚ್ಚು ರೋಗಿಗಳು ದಾಖಲಾಗಿದ್ದು ತುರ್ತು ನೆರವು ಬೇಕಾಗಿದೆ ಎಂದು ತಿಳಿಸಿತ್ತು.

ವೈದ್ಯಕೀಯ ಆಮ್ಲಜನಕದ ನಿರಂತರ ಉತ್ಪಾದನೆ ಮತ್ತು ಪೂರೈಕೆಯನ್ನು ಮಾಡುವಂತೆ ಕೇಂದ್ರವು ರಾಜ್ಯಗಳಿಗೆ ಸೂಚಿಸಿದ್ದು, ಆದೇಶವನ್ನು ಉಲ್ಲಂಘಿಸಿದರೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಸಂಬಂಧಪಟ್ಟ ಜಿಲ್ಲೆಯ ಪೊಲೀಸ್ ಅಧೀಕ್ಷಕರು ಜವಾಬ್ದಾರರಾಗಿರುತ್ತಾರೆ ಎಂದು ಎಚ್ಚರಿಕೆ ನೀಡಿತ್ತು.

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಂತೆ ರಾಷ್ಟ್ರ ರಾಜಧಾನಿ ಮತ್ತು ಇತರ ಪ್ರಮುಖ ನಗರಗಳಲ್ಲಿನ ಆಸ್ಪತ್ರೆಗಳು ತೀವ್ರ ಮಟ್ಟದಲ್ಲಿ ಆಮ್ಲಜನಕದ ಕೊರತೆಯನ್ನು ಎದುರಿಸುತ್ತಿವೆ. ತೀವ್ರ ಅನಾರೋಗ್ಯ ಪೀಡಿತ ರೋಗಿಗಳಿಗೆ ಆಮ್ಲಜನಕ ಪೂರೈಕೆ ಅಗತ್ಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com