ಕೋವಿಡ್-19 ಚಿಕಿತ್ಸೆಗೆ ಹೊಸ ಔಷಧ: ಝೈಡಸ್ ಕ್ಯಾಡಿಲಾದ 'ವಿರಾಫಿನ್' ತುರ್ತು ಬಳಕೆಗೆ 'ಡಿಸಿಜಿಐ' ಅನುಮತಿ

ಮಾರಕ ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಮತ್ತೊಂದು ಬಲ ಬಂದಿದ್ದು, ಕೋವಿಡ್-19 ಚಿಕಿತ್ಸೆಗೆ ಹೊಸ ಔಷಧ ಸೇರ್ಪಡೆಯಾಗಿದೆ.
ಝೈಡಸ್ ಕ್ಯಾಡಿಲಾ
ಝೈಡಸ್ ಕ್ಯಾಡಿಲಾ

ನವದೆಹಲಿ: ಮಾರಕ ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಮತ್ತೊಂದು ಬಲ ಬಂದಿದ್ದು, ಕೋವಿಡ್-19 ಚಿಕಿತ್ಸೆಗೆ ಹೊಸ ಔಷಧ ಸೇರ್ಪಡೆಯಾಗಿದೆ.

ಹೌದು.. ಕೊರೊನಾ ಸೋಂಕಿತರ ಚಿಕಿತ್ಸೆಗೆ ಹೊಸ ಔಷಧ ಬಳಸಲು ಭಾರತೀಯ ಔಷಧ ನಿಯಂತ್ರಕ ಮಹಾಮಂಡಳಿಅನುಮತಿ ನೀಡಿದ್ದು, ಝೈಡಸ್ ಕ್ಯಾಡಿಲಾ ಸಂಸ್ಥೆಯ ವಿರಾಫಿನ್ ಔಷಧವನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸಲು ಭಾರತೀಯ ಔಷಧ ನಿಯಂತ್ರಕ ಮಹಾಮಂಡಳಿ (ಡಿಸಿಜಿಐ) ಬಳಸಲು  ಅನುಮತಿ ನೀಡಿದೆ.

ಮೂಲಗಳ ಪ್ರಕಾರ ಲಘು ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿರುವವರಿಗೆ ಔಷಧದ ರೂಪದಲ್ಲಿ ಝೈಡಸ್ ಕ್ಯಾಡಿಲ್ಲಾ ಸಂಸ್ಥೆಯ 'ವಿರಾಫಿನ್' ಔಷಧ ಬಳಸಲು ಅನುಮತಿ ನೀಡಲಾಗಿದೆ. ಈ ಹಿಂದೆ ನಡೆದಿದ್ದ ಈ ಔಷಧದ ಪ್ರಯೋಗ ಯಶಸ್ವಿಯಾಗಿತ್ತು. ಒಂದು ಡೋಸ್ ಔಷಧಿ ಬಳಕೆಯು ಕೊರೊನಾ  ಸೋಂಕಿತರಲ್ಲಿ ಚೇತರಿಕೆ ಉಂಟುಮಾಡಿದೆ ಎಂದು ಕಂಪನಿ ತಿಳಿಸಿದೆ. 

ಚರ್ಮದ ಒಳಪದರಕ್ಕೆ ಕೊಡುವ ವಿರಾಫಿನ್​ನಲ್ಲಿ PegIFN ಔಷಧವಿದ್ದು, ಈ ಸಿಂಗಲ್ ಡೋಸ್ ಔಷಧಿ ವೈರಾಣು ಸೋಂಕು ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಕೊರೊನಾ ಸೋಂಕು ಪ್ರಕರಣಗಳಲ್ಲೂ ಪರಿಣಾಮಕಾರಿ ಎಂದು ಕ್ಲಿನಿಕಲ್ ಪರೀಕ್ಷೆಗಳಲ್ಲಿ ಸಾಬೀತಾಗಿದೆ ಎಂದು ಕಂಪನಿಯು  ಹೇಳಿಕೊಂಡಿದೆ.

ಆಮ್ಲಜನಕ ನೀಡಬೇಕಾದ ಅಗತ್ಯತೆ ಕಡಿಮೆ ಮಾಡುವ ಔಷಧಿ
ಕೋವಿಡ್-19 ರೋಗಿಗಳಿಗೆ ಈ 'ವಿರಾಫಿನ್' ಔಷಧಿ ನೀಡಿದಾಗ ಕೃತಕ ಆಮ್ಲಜನಕವನ್ನು ನೀಡಬೇಕಾದ ಅಗತ್ಯವೂ ಹೆಚ್ಚಿನ ಸಂದರ್ಭಗಳಲ್ಲಿ ಕಂಡುಬರಲಿಲ್ಲ. ಕೊರೊನಾ ಸೋಂಕಿನಿಂದ ಉಂಟಾಗುವ ಉಸಿರಾಟದ ಹಲವು ಸಮಸ್ಯೆಗಳನ್ನು ವಿರಾಫಿನ್ ಪರಿಣಾಮಕಾರಿಯಾಗಿ ತಡೆದದ್ದು ಪ್ರಯೋಗಗಳ ವೇಳೆ  ದಾಖಲಾಗಿದೆ. ಕೊರೊನಾದಿಂದ ರೋಗಿಗಳು ಚೇತರಿಸಿಕೊಂಡ ನಂತರ ಕಾಣಿಸುವ ಕೆಲ ಇತರ ಆರೋಗ್ಯದ ಸಮಸ್ಯೆಗಳನ್ನೂ ಇದು ತಡೆಯಬಲ್ಲದು. ವಿರಾಫಿನ್ ಚಿಕಿತ್ಸೆಯ ನಂತರ ಕೊರೊನಾ ಸೋಂಕು ದೃಢಪಟ್ಟಿದ್ದ ಶೇ 91.15ರಷ್ಟು ರೋಗಿಗಳಲ್ಲಿ ಆರ್​ಟಿ-ಪಿಸಿಆರ್ ಪರೀಕ್ಷೆ ವೇಳೆ 7 ದಿನಗಳಲ್ಲಿ ನೆಗೆಟಿವ್  ವರದಿ ಬಂದಿತ್ತು ಎಂದು ಕಂಪನಿ ಹೇಳಿಕೊಂಡಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com