ಆಕ್ಸಿಜನ್ ಟ್ಯಾಂಕರ್‌ ಸಾಗಿಸಲು ರೈಲ್ವೆ, ವಾಯುಪಡೆ ವಿಮಾನ ನಿಯೋಜನೆ: ಪ್ರಧಾನಿ ಮೋದಿ

ಕೋವಿಡ್ -19 ಹೋರಾಟದಲ್ಲಿ ಹಲವಾರು ರಾಜ್ಯಗಳು ವೈದ್ಯಕೀಯ ಆಮ್ಲಜನಕದ ಕೊರತೆ ಎದುರಿಸುತ್ತಿದ್ದು,  ಆಕ್ಸಿಜನ್ ಟ್ಯಾಂಕರ್‌ಗಳ ಸಾರಿಗೆ ಸಮಯವನ್ನು ಕಡಿಮೆ ಮಾಡಲು ರೈಲ್ವೆ ಮತ್ತು ವಾಯುಪಡೆಯ ವಿಮಾನಗಳನ್ನು...
ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್
ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್

ನವದೆಹಲಿ: ಕೋವಿಡ್ -19 ಹೋರಾಟದಲ್ಲಿ ಹಲವಾರು ರಾಜ್ಯಗಳು ವೈದ್ಯಕೀಯ ಆಮ್ಲಜನಕದ ಕೊರತೆ ಎದುರಿಸುತ್ತಿದ್ದು,  ಆಕ್ಸಿಜನ್ ಟ್ಯಾಂಕರ್‌ಗಳ ಸಾರಿಗೆ ಸಮಯವನ್ನು ಕಡಿಮೆ ಮಾಡಲು ರೈಲ್ವೆ ಮತ್ತು ವಾಯುಪಡೆಯ ವಿಮಾನಗಳನ್ನು ನಿಯೋಜಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ. 

ಇಂದು 11 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉನ್ನತಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ, ಜೀವ ಉಳಿಸುವ ಅನಿಲ(ಆಕ್ಸಿಜನ್) ಮತ್ತು ಔಷಧಿಗಳ ಅವಶ್ಯಕತೆ ಪೂರೈಸಲು ಎಲ್ಲಾ ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದಿದ್ದಾರೆ.

ಸಾಂಕ್ರಾಮಿಕ ರೋಗದ ಮೊದಲ ಅಲೆಯಲ್ಲಿ ಭಾರತದ ಯಶಸ್ಸಿನ ದೊಡ್ಡ ಆಧಾರವೆಂದರೆ ನಮ್ಮ ಒಗ್ಗಟ್ಟಿನ ಪ್ರಯತ್ನ ಮತ್ತು ಏಕೀಕೃತ ಕಾರ್ಯತಂತ್ರ. ನಾವು ಈಗ ಎರಡನೇ ಅಲೆಯ ಸವಾಲನ್ನು ಅದೇ ರೀತಿಯಲ್ಲಿ ಎದುರಿಸಬೇಕಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಕೊರೋನಾ ವಿರುದ್ಧದ ಹೋರಾಟದಲ್ಲಿ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಪ್ರಧಾನಿ ಭರವಸೆ ನೀಡಿದರು.

ಆಮ್ಲಜನಕದ ಪೂರೈಕೆಯ ಕುರಿತು ರಾಜ್ಯಗಳು ಎತ್ತಿದ ಅಂಶಗಳನ್ನು ಗಮನಿಸಿದ ಮೋದಿ, ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸಲು ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ಪ್ರಧಾನಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಆಕ್ಸಿಜನ್ ಟ್ಯಾಂಕರ್‌ಗಳ ಪ್ರಯಾಣದ ಸಮಯ ಮತ್ತು ವಹಿವಾಟು ಸಮಯವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ಸಾಧ್ಯವಿರುವ ಎಲ್ಲ ಆಯ್ಕೆಗಳನ್ನು ಬಳಸಿಕೊಳ್ಳುತ್ತಿದೆ. ಇದಕ್ಕಾಗಿ ರೈಲ್ವೆ ಆಕ್ಸಿಜನ್ ಎಕ್ಸ್‌ಪ್ರೆಸ್ ಅನ್ನು ಆರಂಭಿಸಲಾಗಿದೆ.
ಒಂದು ಮಾರ್ಗದ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಖಾಲಿ ಆಕ್ಸಿಜನ್ ಟ್ಯಾಂಕರ್‌ಗಳನ್ನು ಸಹ ವಾಯುಪಡೆಯಿಂದ ಸಾಗಿಸಲಾಗುತ್ತಿದೆ ಎಂದು ಹೇಳಿದರು.

ಈಗ ಎದುರಾಗಿರುವ ವಿಪತ್ತನ್ನು ಎದುರಿಸಲು ಆರೋಗ್ಯ ಸೇವಾ ವ್ಯವಸ್ಥೆ ಸುಧಾರಣೆಗೆ ಒತ್ತು ನೀಡುವುದು, ಮುನ್ನೆಚ್ಚರಿಕೆಯ ಕ್ರಮಗಳ ಕಟ್ಟುನಿಟ್ಟಿನ ಪಾಲನೆ, ಅನಗತ್ಯ ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸುವುದು ಹಾಗೂ ಆಮ್ಲಜನಕದ ಸಮರ್ಪಕ ಹಾಗೂ ಮಿತಬಳಕೆಗೆ ಆದ್ಯತೆ ನೀಡುವುದು ಹಾಗೂ ಜನರಲ್ಲಿ ವಿಶ್ವಾಸ ಮೂಡಿಸುವುದು ಅತಿ ಅಗತ್ಯ ಎಂದು ಪ್ರಧಾನಿ ಒತ್ತಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com