ಸುಮಿತ್ರಾ ಮಹಾಜನ್ ಸಾವಿನ ಬಗ್ಗೆ ವದಂತಿ: ಅಪರಿಚಿತ ವ್ಯಕ್ತಿ ವಿರುದ್ಧ ಕೇಸ್ ದಾಖಲು; ಕ್ಷಮೆಯಾಚಿಸಿದ ತರೂರ್!

ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವದಂತಿಗಳನ್ನು ಹಬ್ಬಿಸಿದ್ದಕ್ಕಾಗಿ ಅಪರಿಚಿತ ವ್ಯಕ್ತಿಯ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಸುಮಿತ್ರಾ ಮಹಾಜನ್
ಸುಮಿತ್ರಾ ಮಹಾಜನ್

ಇಂದೋರ್: ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವದಂತಿಗಳನ್ನು ಹಬ್ಬಿಸಿದ್ದಕ್ಕಾಗಿ ಅಪರಿಚಿತ ವ್ಯಕ್ತಿಯ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ.

ಸ್ಥಳೀಯ ಬಿಜೆಪಿ ಮುಖಂಡ ಮತ್ತು ಮಾಜಿ ಕಾರ್ಪೋರೇಟರ್ ಸುಧೀರ್ ಡೆಡ್ಜ್ ದೂರು ನೀಡಿದ್ದು, ಅದರ ಆಧಾರದ ಮೇಲೆ ಅಪರಿಚಿತ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 188ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸರಫಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸುನೀಲ್ ಶರ್ಮಾ ತಿಳಿಸಿದ್ದಾರೆ.

ತನ್ನ ಲಿಖಿತ ದೂರಿನೊಂದಿಗೆ, ಡೆಡ್ಜ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು ಲಗತ್ತಿಸಿದ್ದಾರೆ. ಅದರಲ್ಲಿ 78 ವರ್ಷದ ಮಹಾಜನ್ ಸಾವಿನ ಬಗ್ಗೆ ತಪ್ಪಾಗಿ ಉಲ್ಲೇಖಿಸಲಾಗಿದೆ. ಈ ಸಂಬಂಧ ತನಿಖೆ ನಡೆಸುತ್ತಿದ್ದು ಮೊದಲು ವದಂತಿಯನ್ನು ಹರಡಿದ ವ್ಯಕ್ತಿಯನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಸಿಆರ್‌ಪಿಸಿಯ ಸೆಕ್ಷನ್ 144ರ ಅಡಿಯಲ್ಲಿ ಕಾನೂನು ಸುವ್ಯವಸ್ಥೆಗೆ ತೊಂದರೆ ಉಂಟುಮಾಡುವಂತಹ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಜಿಲ್ಲಾಡಳಿತ ನಿಷೇಧಿಸಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು. ಮಹಾಜನ್ ಅವರ ಬೆಂಬಲಿಗರಾದ ಡೆಡ್ಜ್ ತಮ್ಮ ದೂರಿನಲ್ಲಿ ಮಾಜಿ ಸಂಸದರ ಸಾವಿನ ಕುರಿತಾದ ವದಂತಿಗಳು ಅವರನ್ನು ಮಾನಸಿಕವಾಗಿ ತೀವ್ರವಾಗಿ ನೋಯಿಸಿದೆ. ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 

ಕಾಂಗ್ರೆಸ್ ಮುಖಂಡ ಶಶಿ ತರೂರ್ ಮತ್ತು ಕೆಲವು ಮಾಧ್ಯಮ ಸಂಸ್ಥೆಗಳು ಗುರುವಾರ ಮಹಾಜನ್ ಅವರ ನಿಧನವನ್ನು ಪ್ರಸಾರ ಮಾಡಿದ್ದವು. ಆದರೆ, ಅವರು ಚೆನ್ನಾಗಿದ್ದಾರೆ ಎಂದು ಬಿಜೆಪಿ ನಾಯಕರು ಸೂಚಿಸಿದ ನಂತರ ತರೂರ್ ಮತ್ತು ಇತರರು ಟ್ವೀಟ್‌ಗಳನ್ನು ಡಿಲೀಟ್ ಮಾಡಿದ್ದಾರೆ.

"ಕಳೆದ ರಾತ್ರಿಯ ತಪ್ಪು ಮಾಹಿತಿ ಹಂಚಿಕೊಂಡಿದ್ದಕ್ಕಾಗಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸಲು ಸುಮಿತ್ರಾ ಮಹಾಜನ್ ಜಿ ಅವರ ಮಗನೊಂದಿಗೆ ಮಾತನಾಡಿದ್ದೇನೆ. ಅವರು ಅತ್ಯಂತ ಕರುಣಾಮಯಿ ಮತ್ತು ತಿಳುವಳಿಕೆ ಹೊಂದಿದವರು. ಮಹಾಜನ್ ಅವರು ತುಂಬಾ ಆರೋಗ್ಯವಾಗಿದ್ದಾರೆ ಎಂದು ಕೇಳಿ ಸಂತೋಷವಾಯಿತು. ಅವರಿಗೆ ನನ್ನ ಶುಭಾಶಯಗಳನ್ನು ತಿಳಿಸಿದ್ದೇನೆ" ಎಂದು ಶಶಿ ತರೂರ್ ಇಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com