ಆಕ್ಸಿಜನ್ ಉತ್ಪಾದಿಸಲು ವೇದಾಂತ ಘಟಕವನ್ನು ತಮಿಳುನಾಡು ಸರ್ಕಾರ ಏಕೆ ವಶಕ್ಕೆ ಪಡೆಯಬಾರದು?: ಸುಪ್ರೀಂ

ಆಮ್ಲಜನಕದ ಕೊರತೆಯಿಂದ ಜನರು ಸಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆಕ್ಸಿಜನ್ ಉತ್ಪಾದಿಸಲು ತೂತುಕುಡಿಯಲ್ಲಿರುವ ವೇದಾಂತ ಗ್ರೂಪ್ ನ ಸ್ಟೆರ್ಲೈಟ್ ತಾಮ್ರ ಸಂಸ್ಕರಣಾ ಘಟಕವನ್ನು ಏಕೆ ಸ್ವಾಧೀನಪಡಿಸಿಕೊಳ್ಳಬಾರದು?
ವೇದಾಂತ ಪುನರಾರಂಭದ ವಿರುದ್ಧ ಪ್ರತಿಭಟನೆ
ವೇದಾಂತ ಪುನರಾರಂಭದ ವಿರುದ್ಧ ಪ್ರತಿಭಟನೆ

ನವದೆಹಲಿ: ಆಮ್ಲಜನಕದ ಕೊರತೆಯಿಂದ ಜನರು ಸಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆಕ್ಸಿಜನ್ ಉತ್ಪಾದಿಸಲು ತೂತುಕುಡಿಯಲ್ಲಿರುವ ವೇದಾಂತ ಗ್ರೂಪ್ ನ ಸ್ಟೆರ್ಲೈಟ್ ತಾಮ್ರ ಸಂಸ್ಕರಣಾ ಘಟಕವನ್ನು ಏಕೆ ಸ್ವಾಧೀನಪಡಿಸಿಕೊಳ್ಳಬಾರದು ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ತಮಿಳುನಾಡು ಸರ್ಕಾರವನ್ನು ಪ್ರಶ್ನಿಸಿದೆ.

ಪರಿಸರ ಮಾಲಿನ್ಯ ಉಂಟು ಮಾಡುತ್ತಿದೆ ಎಂಬ ಕಾರಣಕ್ಕೆ 2018ರಿಂದ ಸ್ಟೆರ್ಲೈಟ್ ತಾಮ್ರ ಸಂಸ್ಕರಣಾ ಘಟಕವನ್ನು ಬಂದ್ ಮಾಡಲಾಗಿದೆ.

"ಆ ಘಟಕವನ್ನು ವೇದಾಂತ ಅಥವಾ ಎ, ಬಿ ಅಥವಾ ಸಿ ನಡೆಸುತ್ತಿದೆ ಎಂಬುದರ ಬಗ್ಗೆ ನಮಗೆ ಆಸಕ್ತಿ ಇಲ್ಲ. ಆಮ್ಲಜನಕವನ್ನು ಉತ್ಪಾದಿಸುವ ಬಗ್ಗೆ ನಾವು ಆಸಕ್ತಿ ಹೊಂದಿದ್ದೇವೆ" ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ನ್ಯಾಯಪೀಠ ಹೇಳಿದೆ.

"ಆಮ್ಲಜನಕದ ಕೊರತೆಯಿಂದ ಜನರು ಸಾಯುತ್ತಿರುವುದರಿಂದ ಯಾರಾದರೂ ಏನಾದರೂ ಒಂದು ಸ್ಪಷ್ಟ ನಿರ್ಧಾರ ಹೇಳಬೇಕು" ಎಂದು ನ್ಯಾಯಮೂರ್ತಿಗಳಾದ ಎಲ್.ಎನ್. ರಾವ್ ಮತ್ತು ಎಸ್.ಆರ್. ಭಟ್ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ.

ತಮಿಳುನಾಡು ಸರ್ಕಾರದ ಪರವಾಗಿ ವಿಚಾರಣೆಗೆ ಹಾಜರಾದ ಹಿರಿಯ ವಕೀಲ ಸಿ.ಎಸ್. ವೈದ್ಯನಾಥನ್ ಅವರು, ಅಲ್ಲಿನ "ಕಾನೂನು ಸುವ್ಯವಸ್ಥೆ" ಪರಿಸ್ಥಿತಿಯನ್ನು ಉಲ್ಲೇಖಿಸಿದ್ದು, ಜಿಲ್ಲಾಧಿಕಾರಿಗಳು ಇಂದು ತೂತುಕುಡಿಗೆ ತೆರಳಿ ಈ ವಿಷಯದ ಬಗ್ಗೆ ಅಲ್ಲಿನ ಜನರೊಂದಿಗೆ ಚರ್ಚಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ನಾವು ಎಲ್ಲಾ ಪರಿಸರ ನಿಯಮಗಳನ್ನು ಪಾಲಿಸುತ್ತೇವೆ. ನಮ್ಮ ಘಟಕದಲ್ಲಿ ಆಕ್ಸಿಜನ್ ಪ್ಲಾಂಟ್ ಇದ್ದು, ಅದು ಕಾರ್ಯನಿರ್ವಹಿಸಲು ಅನುಮತಿ ನೀಡಬೇಕು. ಅನುಮತಿ ನೀಡಿದರೆ ನಿತ್ಯ ಒಂದು ಸಾವಿರ ಟನ್ ಆಮ್ಲಜನಕವನ್ನು ಉತ್ಪಾದಿಸಿ, ಅದನ್ನು ಉಚಿತವಾಗಿ ಪೂರೈಕೆ ಮಾಡಲು ಸಿದ್ಧ" ಎಂದು ವೇದಾಂತ ಗ್ರೂಪ್ ಕೋರ್ಟ್ ಗೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com