ದೆಹಲಿಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ: ಸರಿಯಾಗಿ ಆಕ್ಸಿಜನ್ ಪೂರೈಕೆ ಇಲ್ಲದೆ ಆಸ್ಪತ್ರೆಗಳ ಪರಿತಾಪ!

ರಾಜಧಾನಿ ದೆಹಲಿಯ ಕೆಲವು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ತೀವ್ರವಾಗಿ ಕಾಡುತ್ತಿದೆ. ನಿನ್ನೆ ತುರ್ತು ಪೂರೈಕೆಯ ಹೊರತಾಗಿಯೂ ಆಕ್ಸಿಜನ್ ನಲ್ಲಿ ಕೊರತೆಯುಂಟಾಗಿದ್ದು ಶನಿವಾರ ದೆಹಲಿಯ ಜೈಪುರ ಗೋಲ್ಡನ್ ಆಸ್ಪತ್ರೆಯಲ್ಲಿ 20 ರೋಗಿಗಳು ಮೃತಪಟ್ಟಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ರಾಜಧಾನಿ ದೆಹಲಿಯ ಕೆಲವು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ತೀವ್ರವಾಗಿ ಕಾಡುತ್ತಿದೆ. ನಿನ್ನೆ ತುರ್ತು ಪೂರೈಕೆಯ ಹೊರತಾಗಿಯೂ ಆಕ್ಸಿಜನ್ ನಲ್ಲಿ ಕೊರತೆಯುಂಟಾಗಿದ್ದು ಶನಿವಾರ ದೆಹಲಿಯ ಜೈಪುರ ಗೋಲ್ಡನ್ ಆಸ್ಪತ್ರೆಯಲ್ಲಿ 20 ರೋಗಿಗಳು ಮೃತಪಟ್ಟಿದ್ದಾರೆ.

ನಿನ್ನೆ ಎಸ್ ಒಎಸ್ ಕಳುಹಿಸಿದ್ದ ಮ್ಯಾಕ್ಸ್ ಸಾಕೇಟ್ ಆಸ್ಪತ್ರೆಗೆ ಎರಡು ಗಂಟೆಯಲ್ಲಿಯೇ ಆಕ್ಸಿಜನ್ ಪೂರೈಕೆಯಾಗಿತ್ತು ಇಲ್ಲಿ 700ಕ್ಕೂ ಹೆಚ್ಚು ರೋಗಿಗಳು ದಾಖಲಾಗಿದ್ದಾರೆ.

ನಂತರ ರಾತ್ರಿ 9.30ರ ಸುಮಾರಿಗೆ ಮ್ಯಾಕ್ಸ್ ಹೆಲ್ತ್ ಕೇರ್ ಇನ್ನಷ್ಟು ಆಕ್ಸಿಜನ್ ಪೂರೈಕೆಗೆ ಕಾಯುತ್ತಿರುವುದಾಗಿ ಹೇಳಿಕೊಂಡಿತ್ತು.

ನಿನ್ನೆ ಸಾಯಂಕಾಲ 4.20ರ ಸುಮಾರಿಗೆ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದ ಇಂಡಿಯನ್ ಸ್ಪೈನಲ್ ಇಂಜ್ಯುರೀಸ್ ಸೆಂಟರ್ ಕೇವಲ ಒಂದು ಗಂಟೆಗಾಗುವಷ್ಟು ಮಾತ್ರ ಆಕ್ಸಿಜನ್ ನಮ್ಮಲ್ಲಿದೆ, ಕೋವಿಡ್-19 160 ರೋಗಿಗಳಿದ್ದು ಕಳೆದ ರಾತ್ರಿಯಿಂದ ಆಕ್ಸಿಜನ್ ಪೂರೈಕೆಗೆ ಕಾಯುತ್ತಿದ್ದೇವೆ, ಇದುವರೆಗೆ ಬಂದಿಲ್ಲ, ದಯಮಾಡಿ ಸಹಾಯ ಮಾಡಿ ಎಂದು ಅರವಿಂದ್ ಕೇಜ್ರಿವಾಲ್ ಮತ್ತು ಪ್ರಧಾನಿ ಮೋದಿ ಕಚೇರಿಗೆ ಟ್ಯಾಗ್ ಮಾಡಿತ್ತು.

ನಂತರ ಸಾಯಂಕಾಲ ಹೊತ್ತಿಗೆ 18 ಸಿಲೆಂಡರ್ ಆಕ್ಸಿಜನ್ ಪೂರೈಕೆಯಾಯಿತು. ಆದರೆ ಇಷ್ಟು ಸಾಕಾಗುವುದಿಲ್ಲ, ನಮ್ಮ ಆಕ್ಸಿಜನ್ ಕೊರತೆ ತೀವ್ರವಾಗಿದೆ. ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಆಸ್ಪತ್ರೆ ಮಂಡಳಿ ತಿಳಿಸಿತ್ತು.

ಇನ್ನು ದೆಹಲಿಯ ಬಾಟ್ರಾ ಆಸ್ಪತ್ರೆಯಲ್ಲಿ ಕೂಡ ಆಕ್ಸಿಜನ್ ಕೊರತೆ ತೀವ್ರವಾಗಿದೆ. ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಆಕ್ಸಿಜನ್ ಪೂರೈಕೆಯಾಗಿದೆ. ನಂತರ ಸ್ವಲ್ಪ ಹೊತ್ತು ಕಳೆದು ಸರ್ಕಾರ ಕೆಲವು ಸಿಲೆಂಡರ್ ಕಳುಹಿಸಿಕೊಟ್ಟಿದೆ. ನಮ್ಮಲ್ಲಿ ಈಗ 2.5 ಮೆಟ್ರಿಕ್ ಟನ್ ಆಕ್ಸಿಜನ್ ಇದ್ದು ರಾತ್ರಿಯ ಹೊತ್ತಿಗೆ ಖಾಲಿಯಾಗಬಹುದು, ನಮಗೆ ಪ್ರಾಥಮಿಕವಾಗಿ ಪೂರೈಕೆ ಮಾಡುವವರು ಸ್ಪಂದಿಸುತ್ತಿಲ್ಲ, ಸರ್ಕಾರ ನಮ್ಮ ಮನವಿಗೆ ಸ್ಪಂದಿಸಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿತ್ತು.

ದೆಹಲಿಯ ಗಂಗಾ ರಾಮ್ ಆಸ್ಪತ್ರೆಯಲ್ಲಿ ನಿನ್ನೆಯ ಹೊತ್ತಿಗೆ 25 ಮಂದಿ ರೋಗಿಗಳು ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದರು. ತಮಗೆ ಸರ್ಕಾರ ತುರ್ತು ಆಕ್ಸಿಜನ್ ಕಳುಹಿಸಿದ್ದು ಅದು ಕೂಡ ಇನ್ನು ಐದಾರು ಗಂಟೆಯಲ್ಲಿ ಮುಗಿಯಬಹುದು ಎಂದು ಹೋಲಿ ಫ್ಯಾಮಿಲಿ ಆಸ್ಪತ್ರೆ ಹೇಳಿತ್ತು. 20 ಡಿ ವಿಧದ ಆಕ್ಸಿಜನ್ ಸಿಲೆಂಡರ್ ನ್ನು ಹೋಲಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಆಪ್ ಶಾಸಕ ರಾಘವ್ ಚಡ್ಡಾ ತಿಳಿಸಿದ್ದರು.

ಈ ಮಧ್ಯೆ, ದ್ವಾರಕದಲ್ಲಿರುವ ಆಕಾಶ್ ಹೆಲ್ತ್ ಕೇರ್ ಸಣ್ಣ ಪೂರೈಕೆದಾರರ ಮೂಲಕ ಸಿಲೆಂಡರ್ ನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇನ್ನು 14 ಗಂಟೆಯಲ್ಲಿ ಖಾಲಿಯಾಗಬಹುದು ಎಂದು ಡಾ ಕೌಸಾರ್ ಎ ಶಾ ತಿಳಿಸಿದರು.

ಸೈಂಟ್ ಸ್ಟೆಫನ್ಸ್ ಆಸ್ಪತ್ರೆಗೆ ನಿನ್ನೆ ಬೆಳಗಿನ ಹೊತ್ತಿಗೆ ಸಿಲೆಂಡರ್ ಬಂದಿದೆ. ದೆಹಲಿಯಲ್ಲಿ ಕೊರೋನಾ ವೈರಸ್ ತಾಂಡವವಾಡುತ್ತಿರುವಾಗ ರೋಗಿಗಳು ಮತ್ತು ಅವರ ಕುಟುಂಬದವರು ಆಸ್ಪತ್ರೆಯಲ್ಲಿ ಬೆಡ್ ಸಿಗಬಹುದೆಂದು ಹೊರಗೆ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಆಕ್ಸಿಜನ್ ಕೊರತೆ ಸಮಸ್ಯೆ ನಿಂತ ಮೇಲೆ ಬೆಡ್ ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ. ಆಕ್ಸಿಜನ್ ಕೊರತೆಯನ್ನು ಎದುರಿಸುತ್ತಿರುವ ಆಸ್ಪತ್ರೆಗಳು ರೋಗಿಗಳನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com