#ResignModi ಹ್ಯಾಶ್ ಟ್ಯಾಗ್ ತೆಗೆಯುವಂತೆ ಫೇಸ್'ಬುಕ್'ಗೆ ಸೂಚಿಸಿಲ್ಲ, ವರದಿಗಳು 'ಹಾನಿಕಾರಕ': ಕೇಂದ್ರ ಸರ್ಕಾರ

#ResignModi ಹ್ಯಾಶ್ ಟ್ಯಾಗ್ ತೆಗೆಯುವಂತೆ ಫೇಸ್'ಬುಕ್'ಗೆ ಯಾವುದೇ ರೀತಿಯ ಸೂಚನೆಗಳನ್ನೂ ನೀಡಿಲ್ಲ, ವಾಲ್ ಸ್ಟ್ರೀಟ್ ಜರ್ನಲ್ ವರದಿ ಹಾನಿಕಾರಕವಾದದ್ದು ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: #ResignModi ಹ್ಯಾಶ್ ಟ್ಯಾಗ್ ತೆಗೆಯುವಂತೆ ಫೇಸ್'ಬುಕ್'ಗೆ ಯಾವುದೇ ರೀತಿಯ ಸೂಚನೆಗಳನ್ನೂ ನೀಡಿಲ್ಲ, ವಾಲ್ ಸ್ಟ್ರೀಟ್ ಜರ್ನಲ್ ವರದಿ ಹಾನಿಕಾರಕವಾದದ್ದು ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ. 

ಭಾರತದಲ್ಲಿ ಕೋವಿಡ್‌–19 ಪರಿಸ್ಥಿತಿ ತೀವ್ರವಾಗುತ್ತಿದ್ದು, ಸೋಂಕು ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ 'ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕು' ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ನೆಟ್ಟಿಗರು ಅಭಿಯಾನ ಆರಂಭಿಸಿದ್ದಾರೆ. ಅಭಿಯಾನ ಆರಂಭವಾಗುತ್ತಿದ್ದಂತೆಯೇ ರಿಸೈನ್‌ ಮೋದಿ (#ResignModi) ಹ್ಯಾಷ್‌ಟ್ಯಾಗ್‌ ಬಳಸಿ ಮಾಡಿರುವ ಪೋಸ್ಟ್‌ಗಳನ್ನು ಫೇಸ್‌ಬುಕ್‌ ತಾತ್ಕಾಲಿಕವಾಗಿ ನಿರ್ಬಂಧಿಸಿತ್ತು.

ಪೋಸ್ಟ್‌ಗಳು ಬ್ಲಾಕ್‌ ಆಗುತ್ತಿದ್ದಂತೆ ನೆಟ್ಟಿಗರು ಮತ್ತೆ ಸರ್ಕಾರದ ವಿರುದ್ಧ ಹರಿಹಾಯ್ದರು. ಸರ್ಕಾರದ ಆದೇಶದಂತೆ ನಿರ್ಬಂಧಿಸಲಾಗಿದೆ ಎಂದು ಆರೋಪಿಸಲಾಯಿತು.

ಇದಕ್ಕೆ ಸಂಬಂಧಿಸಿದಂತೆ ವಾಲ್ ಸ್ಟ್ರೀಟ್ ಜರ್ನಲ್ ವರದಿಯೊಂದನ್ನು ಪ್ರಕಟಿಸಿತ್ತು, #ResignModi ಹ್ಯಾಶ್‌ಟ್ಯಾಗ್ ಅನ್ನು ನಿರ್ಬಂಧಿಸಿರುವುದು ಸಾರ್ವಜನಿಕರ ಭಿನ್ನಾಭಿಪ್ರಾಯವನ್ನು ನಿಗ್ರಹಿಸುವ ಪ್ರಯತ್ನ ಎಂದು ಆರೋಪಿಸಿತ್ತು. 

ಈ ವರದಿ ಕುರಿತು ಹೇಳಿಕೆ ನೀಡಿರುವ ಕೇಂದ್ರ ಸರ್ಕಾರ, ವಾಲ್ ಸ್ಟ್ರೀಟ್ ಜರ್ನಲ್ ವರದಿಯು ಜನರ ಹಾದಿ ತಪ್ಪಿಸುತ್ತದೆ. ವರದಿ ಹಾನಿಕಾರಕವಾದದ್ದು ಎಂದು ಹೇಳಿದೆ. 

ಹ್ಯಾಶ್ ಟ್ಯಾಗ್ ತೆಗೆಯುವಂತೆ ಸರ್ಕಾರ ಫೇಸ್'ಬುಕ್'ಗೆ ಯಾವುದೇ ಸೂಚನೆಗಳನ್ನೂ ನೀಡಿರಲಿಲ್ಲ. ಈ ಬಗ್ಗೆ ಫೇಸ್ ಬುಕ್ ಕೂಡ ಸ್ಪಷ್ಟನೆ ನೀಡಿದೆ. ತಪ್ಪಾಗಿ ಈ ಹ್ಯಾಷ್‌ಟ್ಯಾಗ್‌ನ್ನು ನಿರ್ಬಂಧಿಸಲಾಗಿತ್ತು, ಭಾರತ ಸರ್ಕಾರ ಈ ಬಗ್ಗೆ ಕ್ರಮವಹಿಸಲು ಕೇಳಿರಲಿಲ್ಲ, ಅದರ ಮೇಲಿನ ತಾತ್ಕಾಲಿಕ ನಿರ್ಬಂಧ ತೆರವುಗೊಳಿಸಲಾಗಿದೆ ಎಂದು ಹೇಳಿದೆ. 

ಮಾರ್ಚ್ 5 ರಂದೂ ಕೂಡ ಭಾರತ ಸರ್ಕಾರದ ವಿರುದ್ಧ ವಾಲ್ ಸ್ಟ್ರೀಟ್ ಜರ್ನಲ್ ಪ್ರಕಟಿಸಿತ್ತು. ಭಾರತ ಸರ್ಕಾರ ಫೇಸ್'ಬುಕ್, ಟ್ವಿಟರ್ ಹಾಗೂ ವಾಟ್ಸಾಪ್ ನೌಕರರಿಗೆ ಜೈಲು ಶಿಕ್ಷೆ ವಿಧಿಸುವ ಬೆದರಿಕೆ ಹಾಕಿದೆ ಎಂದು ಹೇಳಿತ್ತು. ಈ ವರದಿ ಸಂಪೂರ್ಣ ನಕಲಿ ಹಾಗೂ ಪೂರ್ವಗ್ರಹ ಪೀಡಿತ ವರದಿಯಾಗಿತ್ತು. 

ಕೊರೋನಾ ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಮುಂಚೂಣಿ ಹೋರಾಟಗಾರರು ಹಾಗೂ ಆರೋಗ್ಯ ಕಾರ್ಯಕರ್ತರ ಬಲ ಹೆಚ್ಚಿಸುವಲ್ಲಿ ಮಾಧ್ಯಮಗಳ ಕರ್ತವ್ಯ ಬಹುಮುಖ್ಯವಾಗಿದೆ. ಇಂತಹ ಸೂಕ್ಷ್ಮ ಸಮಯದಲ್ಲಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಕೋಟ್ಯಾಂತರ ಭಾರತೀಯರೊಂದಿಗೆ ಒಗ್ಗೂಡಿ ಹೋರಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com