ತಮಿಳುನಾಡು: ಭಾನುವಾರ ಮತ ಎಣಿಕೆ, ಸಂಭ್ರಮಾಚರಣೆ ಬೇಡ; ಪಕ್ಷದ ಕಾರ್ಯಕರ್ತರಲ್ಲಿ ಸ್ಟಾಲಿನ್ ಮನವಿ

ಮೇ 2 ರಂದು ನಡೆಯಲಿರುವ ಮತ ಎಣಿಕೆ ಕೇಂದ್ರಗಳ ಬಳಿ ಹೆಚ್ಚಿನ ಜನ ಸೇರದಂತೆ ಅಥವಾ ಎಲ್ಲಿಯೂ ಸಂಭ್ರಮಾಚರಣೆ ಮಾಡದಂತೆ ಪಕ್ಷದ ಅಧ್ಯಕ್ಷ ಎಂ. ಕೆ. ಸ್ಟಾಲಿನ್ ಕಾರ್ಯಕರ್ತರಲ್ಲಿ ಶುಕ್ರವಾರ ಮನವಿ ಮಾಡಿದ್ದಾರೆ.
ಡಿಎಂಕೆ ಮುಖ್ಯಸ್ಥ ಸ್ಟಾಲಿನ್
ಡಿಎಂಕೆ ಮುಖ್ಯಸ್ಥ ಸ್ಟಾಲಿನ್

ಚೆನ್ನೈ: ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟ ಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ ಎಂದು ವಿವಿಧ ಚುನಾವಣೋತ್ತರ ಸಮೀಕ್ಷೆಗಳು ಊಹಿಸಿರುವಂತೆಯೇ, ಮೇ 2 ರಂದು ನಡೆಯಲಿರುವ ಮತ ಎಣಿಕೆ ಕೇಂದ್ರಗಳ ಬಳಿ ಹೆಚ್ಚಿನ ಜನ ಸೇರದಂತೆ ಅಥವಾ ಎಲ್ಲಿಯೂ ಸಂಭ್ರಮಾಚರಣೆ ಮಾಡದಂತೆ ಪಕ್ಷದ ಅಧ್ಯಕ್ಷ ಎಂ. ಕೆ. ಸ್ಟಾಲಿನ್ ಕಾರ್ಯಕರ್ತರಲ್ಲಿ ಶುಕ್ರವಾರ ಮನವಿ ಮಾಡಿಕೊಂಡಿದ್ದಾರೆ.

ವಿವಿಧ ಸಮೀಕ್ಷೆಗಳ ಪ್ರಕಾರ ಡಿಎಂಕೆ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಸಂತಸದ ಸುದ್ದಿಯಾಗಿದೆ. ತಮಿಳುನಾಡಿನಲ್ಲಿ ಕೋವಿಡ್-19 ಸಾಂಕ್ರಾಮಿಕದ ತೀವ್ರತೆ ಹೆಚ್ಚಿರುವ ಸಂದರ್ಭದಲ್ಲಿ ಅನುಕೂಲಕರ ಫಲಿತಾಂಶ ಬರತೊಡಗಿದ್ದಂತೆಯೇ ಕಾರ್ಯಕರ್ತರು ಮತ ಎಣಿಕೆ  ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಬಾರದು, ಅಥವಾ ಎಲ್ಲಿಯೂ ಸಂಭ್ರಮಾಚರಣೆ ಮಾಡಬಾರದು, ಸೋಂಕು ತಗುಲದಂತೆ ಎಚ್ಚರಿಕೆ ವಹಿಸಬೇಕೆಂದು ಅವರು ಹೇಳಿದ್ದಾರೆ.

ಪಕ್ಷದ ಕಾರ್ಯಕರ್ತರ ಜೀವ ಮುಖ್ಯವಾಗಿದ್ದು, ಮನೆಯಲ್ಲಿಯೇ ಸಂಭ್ರಮಾಚರಣೆ ಮಾಡಿ ಎಂದಿರುವ ಸ್ಟಾಲಿನ್, ಇತರ ಪಕ್ಷಗಳಿಗೂ ಇದೇ ರೀತಿಯಾಗಿ ಮನವಿ ಮಾಡಿದರು. ಬೀದಿಗಳು ನಿರ್ಜನವಾಗಿರಲಿ, ಮನಸುಗಳು ಸಂತೋಷದಿಂದ ತುಂಬಿರಲಿ ಎಂದು ಹೇಳಿದ್ದಾರೆ.

ಏಪ್ರಿಲ್ 6 ರಂದು ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆ ಬರುವ ಭಾನುವಾರ ನಡೆಯಲಿದೆ. ಬಹುತೇಕ ಸಮೀಕ್ಷೆಗಳು 234 ಸ್ಥಾನಗಳ ಪೈಕಿ 160 ಸ್ಥಾನಗಳಲ್ಲಿ ಡಿಎಂಕೆ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com