ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ; ಮ್ಯಾಜಿಸ್ಟ್ರೀಯಲ್ ತನಿಖೆಗೆ ಸಿಎಂ ಕೇಜ್ರಿವಾಲ್ ಆದೇಶ

ದೆಹಲಿ ಕಂಟೋನ್ಮೆಂಟ್‌ನಲ್ಲಿ 9 ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ಪ್ರಕರಣವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬುಧವಾರ ಮ್ಯಾಜಿಸ್ಟ್ರೀಯಲ್ ತನಿಖೆಗೆ ಆದೇಶಿಸಿದ್ದಾರೆ. 
ಮೃತ ಬಾಲಕಿಯ ತಾಯಿಯ ಬಳಿಯಿರುವ ದೆಹಲಿ ಸಿಎಂ
ಮೃತ ಬಾಲಕಿಯ ತಾಯಿಯ ಬಳಿಯಿರುವ ದೆಹಲಿ ಸಿಎಂ

ನವದೆಹಲಿ: ದೆಹಲಿ ಕಂಟೋನ್ಮೆಂಟ್‌ನಲ್ಲಿ 9 ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ಪ್ರಕರಣವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬುಧವಾರ ಮ್ಯಾಜಿಸ್ಟ್ರೀಯಲ್ ತನಿಖೆಗೆ ಆದೇಶಿಸಿದ್ದಾರೆ. 

ಬಾಲಕಿಯ ಕುಟುಂಬಸ್ಥರನ್ನು ಇಂದು ಭೇಟಿ ಮಾಡಿದ ಕೇಜ್ರಿವಾಲ್ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ರೂ.10 ಲಕ್ಷ ಪರಿಹಾರವನ್ನು ಘೋಷಣೆ ಮಾಡಿದ ಅವರು, ಪ್ರಕರಣವನ್ನು ಮ್ಯಾಜಿಸ್ಟ್ರೀಯಲ್ ತನಿಖೆಗೆ ಆದೇಶಿಸಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಲಕಿ ಹಿಂತಿರುಗಿ ಬರಲು ಸಾಧ್ಯವಿಲ್ಲ. ಕುಟುಂಬಸ್ಥರಿಗೆ ಆಗಿರುವ ಅನ್ಯಾಯ ನಿಜಕ್ಕೂ ದುರಾದೃಷ್ಟಕರವಾದದ್ದು. ಇದನ್ನು ಸರಿಪಡಿಸಲು ಸಾಧ್ಯವಿಲ್ಲ ಆದರೆ, ಕುಟುಂಬಸ್ಥರಿಗೆ ಸರ್ಕಾರ ರೂ.10 ಲಕ್ಷ ಪರಿಹಾರ ನೀಡಲಿದೆ ಹಾಗೂ ಪ್ರಕರಣವನ್ನು ಮ್ಯಾಜಿಸ್ಟ್ರೀಯಲ್ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ. 

ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಭದ್ರಪಡಿಸಬೇಕಿದೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಮನವಿ ಮಾಡಿಕೊಲ್ಳುತ್ತೇನೆಂದು ತಿಳಿಸಿದ್ದಾರೆ. 

ಪ್ರಕರಣ ಸಂಬಂಧ ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಸರ್ಕಾರದ ವತಿಯಿಂದ ಉನ್ನತ ಮಟ್ಟದ ವಕೀಲರನ್ನು ನಿಯೋಜನೆಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ. 

ಇನ್ನು ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಡಿಸಿಪಿ ಇಂಗಿತ್ ಪ್ರತಾಪ ಸಿಂಹ ಅವರು, ದೆಹಲಿ ಕಂಟೋನ್ಮೆಂಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಹಾಗೂ ಶವವನ್ನು ಸುಡುತ್ತಿರುವ ಕುರಿತು ಭಾನುವಾರ ರಾತ್ರಿ 10.30ಕ್ಕೆ ದೂರವಾಣಿ ಕರೆ ಬಂದಿತ್ತು. ಅಲ್ಲದೆ, ಹಳೆಯ ನಂಗಲ್‌ನ ಸ್ಮಶಾನದಲ್ಲಿ ಸುಮಾರು 200 ಗ್ರಾಮಸ್ಥರು ಜಮಾಯಿಸಿರುವ ಕುರಿತಂತೆಯೂ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದರು.

ಪ್ರಕರಣ ಸಂಬಂಧ ಬಾಲಕಿಯ ತಾಯಿ ಹೇಳಿಕೆಯನ್ನು ನೀಡಿದ್ದು, ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದೀಗ ಅರ್ಚಕನನ್ನು ಬಂಧನಕ್ಕೊಳಪಡಿಸಲಾಗಿದ್ದು, ಸಾಕ್ಷ್ಯಾಧಾರಗಳ ಸಂಗ್ರಹಕ್ಕೆ ಘಟನಾ ಸ್ಥಳಕ್ಕೆ ಎಫ್‌ಎಸ್‌ಎಲ್ ತಂಡ ಮತ್ತು ಅಪರಾಧ ತಂಡವನ್ನು ರವಾನಿಸಲಾಗಿದೆ ಎಂದು ಹೇಳಿದ್ದಾರೆ. 

9 ವರ್ಷದ ದಲಿತ ಬಾಲಕಿಯ ಮೇಲೆ ದಾರುಣವಾಗಿ ಅತ್ಯಾಚಾರವೆಸಗಿ, ಆಕೆಯ ದೇಹವನ್ನು ಸುಟ್ಟುಹಾಕಿರುವ ಘಟನೆ ಭಾನುವಾರ ನಡೆದಿತ್ತು. ಸ್ಮಶಾನ ಮೈದಾನದಿಂದ ನೀರು ತರಲು ಹೋಗಿದ್ದ 9 ವರ್ಷದ ಬಾಲಕಿಯನ್ನು ಅರ್ಚಕ ಸೇರಿದಂತೆ ಹಲವು ಅತ್ಯಾಚಾರವೆಸಗಿ, ಕೊಲೆ ಮಾಡಿದ್ದರು, 

ವಾಟರ್ ಕೂಲರ್ ನಿಂದ ವಿದ್ಯುತ್ ಸ್ಪರ್ಶವಾಗಿದೆ ಎಂದು ಬಾಲಕಿಯ ತಾಯಿಯನ್ನು ಸ್ಮಶಾನಕ್ಕೆ ಕರೆಸಿದ್ದ ಆರೋಪಿಗಳು ನಂತರ ಪೋಲಿಸರಿಗೆ ಕರೆ ಮಾಡಿದರೆ ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ಅಂಗಾಂಗಗಳನ್ನು ಹೊರತೆಗೆಯಲಾಗುತ್ತದೆ ಎಂದು ಅವರು ಹೆದರಿಸಿದ್ದರು. ಬಳಿಕ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಿ, ಬೇರೆಯವರಿಗೆ ಗೊತ್ತಾಗುವ ಮೊದಲೇ ಅಂತಿಮ ಸಂಸ್ಕಾರ ನೆರವೇರಿಸಿದ್ದರು. 

ಈ ಘಟನೆ ಇದೀಗ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಕುವ ಪೊಲೀಸರು ತನಿಖೆ ಆರಂಭಿಸಿದ್ದು, ಅರ್ಚಕ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com