ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಪ್ರತಿಪಕ್ಷ ನಾಯಕರು ಭಾಗಿ
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ವಿಪಕ್ಷ ನಾಯಕರು ನಿರ್ಧರಿಸಿದ್ದಾರೆ.
Published: 06th August 2021 03:27 PM | Last Updated: 06th August 2021 03:27 PM | A+A A-

ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ವಿಪಕ್ಷ ನಾಯಕರು ನಿರ್ಧರಿಸಿದ್ದಾರೆ.
'ಪೆಗಾಸಸ್ ಸ್ನ್ಯೂಪಿಂಗ್' ವಿವಾದ ಮತ್ತು ಇತರ ವಿಷಯಗಳ ಕುರಿತು ಸಂಸತ್ತಿನಲ್ಲಿ ಕೋಲಾಹಲ ಮುಂದುವರಿದ ಬೆನ್ನಲ್ಲೇ ವಿರೋಧ ಪಕ್ಷದ ನಾಯಕರು ಶುಕ್ರವಾರ ಬೆಳಗ್ಗೆ ಮತ್ತೊಂದು ಕಾರ್ಯತಂತ್ರದ ಸಭೆ ನಡೆಸಿದರು.
14 ವಿರೋಧ ಪಕ್ಷಗಳ ನಾಯಕರು ಭಾಗವಹಿಸಿದ್ದ ಈ ಸಭೆಯಲ್ಲಿ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗುವ ಮೂಲಕ ರೈತರಿಗೆ ಬೆಂಬಲ ಘೋಷಿಸುವ ಮತ್ತು ಒಗ್ಗಟ್ಟು ಪ್ರದರ್ಶಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಭಾಗವಹಿಸಿದ್ದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜನ್ ಖರ್ಗೆ ಅವರು, ರಾಹುಲ್ ಗಾಂಧಿ ಸೇರಿದಂತೆ ಪ್ರತಿಪಕ್ಷ ನಾಯಕರು ಜಂತರ್ ಮಂತರ್‌ನ ಕಿಸಾನ್ ಸಂಸದ್‌ನಲ್ಲಿ ಭಾಗವಹಿಸುತ್ತಾರೆ ಮತ್ತು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂಬ ರೈತರ ಬೇಡಿಕೆಯನ್ನು ಬೆಂಬಲಿಸುತ್ತಾರೆ ಎಂದು ತಿಳಿಸಿದರು.
"ಪ್ರತಿಪಕ್ಷ ನಾಯಕರ ಸಭೆಯಲ್ಲಿ ಜಂತರ್ ಮಂತರ್‌ನಲ್ಲಿ ಮಧ್ಯಾಹ್ನ 1 ಗಂಟೆಗೆ ಪ್ರತಿಭಟನೆ ನಡೆಸಲು ಮತ್ತು ಪ್ರತಿಭಟನಾ ನಿರತ ರೈತರೊಂದಿಗೆ ಧರಣಿ ಕುಳಿತುಕೊಳ್ಳಲು ನಿರ್ಧರಿಸಲಾಯಿತು" ಎಂದು ಹಿರಿಯ ನಾಯಕರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.