ಉತ್ತರ ಭಾರತದಲ್ಲಿ ಇದೇ ಮೊದಲು: ವೈದ್ಯರಿಂದ ಅತ್ಯಾಧುನಿಕ ರೊಬೋಟಿಕ್ ವ್ಯವಸ್ಥೆ ಮೂಲಕ ಗರ್ಭಕೋಶ ಶಸ್ತ್ರಚಿಕಿತ್ಸೆ

ತೀವ್ರ ಋತುಸ್ರಾವ ಹಾಗೂ ಶ್ರೋಣಿಯ ನೋವಿನಿಂದ ಬಳಲುತ್ತಿದ್ದ 47 ವರ್ಷದ ಮಹಿಳೆಯ ಗರ್ಭಕೋಶ ತೆಗೆಯುವ ಶಸ್ತ್ರಚಿಕಿತ್ಸೆಯನ್ನು ರಾಷ್ಟ್ರ ರಾಜಧಾನಿಯ ವೈದ್ಯರು ಇದೇ ಮೊದಲ ಬಾರಿಗೆ ಅತ್ಯಾಧುನಿಕ ರೊಬೋಟಿಕ್ ವ್ಯವಸ್ಥೆ ಮೂಲಕ ನಡೆಸಿದ್ದಾರೆ. 
ಶಸ್ತ್ರಚಿಕಿತ್ಸೆ (ಸಂಗ್ರಹ ಚಿತ್ರ)
ಶಸ್ತ್ರಚಿಕಿತ್ಸೆ (ಸಂಗ್ರಹ ಚಿತ್ರ)

ನವದೆಹಲಿ: ತೀವ್ರ ಋತುಸ್ರಾವ ಹಾಗೂ ಶ್ರೋಣಿಯ ನೋವಿನಿಂದ ಬಳಲುತ್ತಿದ್ದ 47 ವರ್ಷದ ಮಹಿಳೆಯ ಗರ್ಭಕೋಶ ತೆಗೆಯುವ ಶಸ್ತ್ರಚಿಕಿತ್ಸೆಯನ್ನು ರಾಷ್ಟ್ರ ರಾಜಧಾನಿಯ ವೈದ್ಯರು ಇದೇ ಮೊದಲ ಬಾರಿಗೆ ಅತ್ಯಾಧುನಿಕ ರೊಬೋಟಿಕ್ ವ್ಯವಸ್ಥೆ ಮೂಲಕ ನಡೆಸಿದ್ದಾರೆ. 

ಪಿಎಸ್ಆರ್ ಐ ಆಸ್ಪತ್ರೆಯಲ್ಲಿ ಸ್ತ್ರೀರೋಗ ಶಾಸ್ತ್ರ (ಗೈನಕಾಲಜಿ) ವಿಭಾಗದ ಮುಖ್ಯಸ್ಥರಾಗಿರುವ ಡಾ.ರಾಹುಲ್ ಮಂಚಂಡ ಈ ಬಗ್ಗೆ ಮಾಹಿತಿ ನೀಡಿದ್ದು,  "ಸಮಸ್ಯೆ ಎದುರಿಸುತ್ತಿದ್ದ ಮಹಿಳೆಗೆ ಹಿಮೋಗ್ಲೊಬಿನ್ ಅಂಶ ಕಡಿಮೆ ಇತ್ತು. ಎಂಡೋಮೆಟ್ರಿಯಮ್ ನ ಬಯಾಪ್ಸಿಯಲ್ಲಿ ಕ್ಯಾನ್ಸರ್ ನ ಪ್ರಾರಂಭದ ಲಕ್ಷಣಗಳು ಗೋಚರಿಸುತ್ತಿದ್ದವು. ಈ ಕಾರಣದಿಂದ ಗರ್ಭಾಶಯವನ್ನು ತೆಗೆಯುವುದೊಂದೇ ಆರೋಗ್ಯ ಚೇತರಿಕೆಗೆ ಇದ್ದ ಮಾರ್ಗವಾಗಿತ್ತು" ಎಂದು ಹೇಳಿದ್ದಾರೆ. 

"ಮಹಿಳೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಸಲಹೆ ನೀಡಲಾಗಿತ್ತು. ಇತರ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಳಿಗೂ ರೊಬೋಟಿಕ್ ಶಸ್ತ್ರಚಿಕಿತ್ಸೆಗೂ ಇರುವ ವ್ಯತ್ಯಾಸ, ಉಪಯೋಗಗಳ ಬಗ್ಗೆ ಮಹಿಳೆಗೆ ಮನವರಿಕೆ ಮಾಡಿಕೊಡಲಾಯಿತು. ಕೊನೆಗೆ ಮಹಿಳೆಯ ಅನುಮತಿ ಪಡೆದು ಅತ್ಯಾಧುನಿಕ ರೊಬೋಟಿಕ್ ವ್ಯವಸ್ಥೆ ಮೂಲಕ ಗರ್ಭಕೋಶ ತೆಗೆಯುವ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು, 24 ಗಂಟೆಗಳಲ್ಲಿ ಮಹಿಳೆ ಡಿಸ್ಚಾರ್ಜ್ ಆಗಿ ಮನೆಗೆ ವಾಪಸ್ ತೆರಳುವುದಕ್ಕೆ ಸಾಧ್ಯವಾಯಿತು" ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. 

"ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗೆ ಹೋಲಿಕೆ ಮಾಡಿದರೆ ಅತ್ಯಾಧುನಿಕ ರೊಬೋಟಿಕ್ ಶಸ್ತ್ರಚಿಕಿತ್ಸೆಯಲ್ಲಿ 3ಡಿ ವಿಷನ್ ಹಾಗೂ ನಿಖರತೆ ಇರುತ್ತದೆ. ಸತತ 2 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆದಿದ್ದು, ನಿಖರತೆ ಹೆಚ್ಚಿರುವುದರ ಪರಿಣಾಮ ರಕ್ತಸ್ರಾವದ ಪ್ರಮಾಣವೂ ಕಡಿಮೆ ಇರುತ್ತದೆ" ಎನ್ನುತ್ತಾರೆ ವೈದ್ಯರು

ಇದೇ ಶಸ್ತ್ರಚಿಕಿತ್ಸೆಯನ್ನು ಸಾಂಪ್ರದಾಯಿಕ ವಿಧಾನದಲ್ಲಿ ನಡೆಸಿದರೆ ರೋಗಿ 4-5 ದಿನಗಳ ಕಾಲ ಆಸ್ಪತ್ರೆಯಲ್ಲಿರಬೇಕಾಗುತ್ತದೆ ಹಾಗೂ ಸೋಂಕಿನ ಅಪಾಯ ಹೆಚ್ಚು ಇರುತ್ತದೆ. ಆದರೆ ಅತ್ಯಾಧುನಿಕ ರೊಬೋಟಿಕ್ ಶಸ್ತ್ರಚಿಕಿತ್ಸೆಯಿಂದ ಮಹಿಳೆಗೆ ಕೇವಲ 24 ಗಂಟೆಗಳಲ್ಲಿ ಸ್ವತಃ ತಾವೇ ಶೌಚಾಲಯಕ್ಕೆ ಹೋಗುವ ಮಟ್ಟಿಗೆ ಸುಧಾರಣೆ ಸಾಧ್ಯವಿದೆ ಹಾಗೂ 24 ಗಂಟೆಗಳ ನಂತರ ಮನೆಗೆ ಡಿಸ್ಚಾರ್ಜ್ ಮಾಡುವ ಸಾಧ್ಯತೆಗಳಿವೆ ಎಂದು ಡಾ. ಮಂಚಂಡ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com