ಪಕ್ಷದ ಅಧಿಕೃತ ಖಾತೆ ಸೇರಿದಂತೆ ಹಲವು ನಾಯಕರ ಟ್ವಿಟ್ಟರ್ ಖಾತೆ ಬ್ಲಾಕ್: ಮೋದಿ ಸರ್ಕಾರ ವಿರುದ್ಧ ಕಾಂಗ್ರೆಸ್ ಆಕ್ರೋಶ 

ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಗೆ ಮತ್ತು ಅದರ ಬಹುತೇಕ ನಾಯಕರು ಮತ್ತು ಕಾರ್ಯಕರ್ತರ ಟ್ವಿಟ್ಟರ್ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಗೆ ಮತ್ತು ಅದರ ಬಹುತೇಕ ನಾಯಕರು ಮತ್ತು ಕಾರ್ಯಕರ್ತರ ಟ್ವಿಟ್ಟರ್ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

9 ವರ್ಷದ ಅತ್ಯಾಚಾರಕ್ಕೀಡಾಗಿ ಕೊಲೆಯಾಗಿರುವ ಬಾಲಕಿಯ ಕುಟುಂಬಸ್ಥರ ಫೋಟೋವನ್ನು ಶೇರ್ ಮಾಡಿ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣ ನೀಡಿ ರಾಹುಲ್ ಗಾಂಧಿಯವರ ಟ್ವಿಟ್ಟರ್ ಖಾತೆಯನ್ನು ಕಳೆದ ವಾರ ಬ್ಲಾಕ್ ಮಾಡಲಾಗಿತ್ತು. ಅದಾದ ಬಳಿಕ ಇದೀಗ ಹಲವು ನಾಯಕರ ಮತ್ತು ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಬ್ಲಾಕ್ ಮಾಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥ ರೋಹನ್ ಗುಪ್ತ, ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆ ಮತ್ತು ಸುಮಾರು 50 ಸಾವಿರ ಉನ್ನತ ನಾಯಕರು ಮತ್ತು ಕಾರ್ಯಕರ್ತರ ಟ್ವಿಟ್ಟರ್ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ. ಸರ್ಕಾರದ ಒತ್ತಡದ ಮೇರೆಗೆ ಕಾಂಗ್ರೆಸ್ ನಾಯಕರ ವಿರುದ್ಧ ಟ್ವಿಟ್ಟರ್ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಆಪಾದಿಸಿದ್ದಾರೆ.

ಟ್ವಿಟ್ಟರ್ ಸ್ಪಷ್ಟವಾಗಿ ಸರ್ಕಾರದ ಒತ್ತಡದಲ್ಲಿ ಕೆಲಸ ಮಾಡುತ್ತಿರುವುದು ಇಲ್ಲಿ ಕಂಡುಬರುತ್ತಿದೆ. ಏಕೆಂದರೆ ಕೆಲ ದಿನಗಳ ಹಿಂದೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ ಅದೇ ಫೋಟೋವನ್ನು ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿತ್ತು, ಆದರೆ ಆಯೋಗ ಫೋಟೋವನ್ನು ತೆಗೆಯಲಿಲ್ಲ ಎಂದು ಹೇಳಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೆವಾಲಾ, ಕೆ ಸಿ ವೇಣುಗೋಪಾಲ್, ಅಜಯ್ ಮಕೇನ್, ಪಕ್ಷದ ಸಚೇತನ ಮಣಿಕ್ಕಮ್ ಠಾಕೋರ್, ಅಸ್ಸಾಂ ಕಾಂಗ್ರೆಸ್ ಉಸ್ತುವಾರಿ ಮತ್ತು ಕೇಂದ್ರದ ಮಾಜಿ ಸಚಿವ ಜಿತೇಂದ್ರ ಸಿಂಗ್ ಮತ್ತು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಶ್ಮಿತಾ ದೇವ್ ಅವರ ಟ್ವಿಟ್ಟರ್ ಖಾತೆಗಳನ್ನು ಸಹ ಬ್ಲಾಕ್ ಮಾಡಲಾಗಿದೆ.

ಈ ಕುರಿತು ನಿನ್ನೆ ರಾತ್ರಿ ಪಕ್ಷದ ಸಂವಹನ ವಿಭಾಗದ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಪ್ರಣವ್ ಜಾ ಟ್ವೀಟ್ ಮಾಡಿದ್ದು ಕೊನೆಗೆ ಅವರ ಖಾತೆಯೂ ಬ್ಲಾಕ್ ಆಗಿದೆ.

ಕಳೆದ ವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 9 ವರ್ಷದ ಅತ್ಯಾಚಾರಕ್ಕೀಡಾಗಿ ಹತ್ಯೆಗೀಡಾದ ಬಾಲಕಿಯ ಕುಟುಂಬಸ್ಥರ ಫೋಟೋ ಶೇರ್ ಮಾಡಿದ ನಂತರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗ ಟ್ವಿಟ್ಟರ್ ಕೆ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com