ಟ್ವಿಟರ್ ತಟಸ್ಥ ವೇದಿಕೆಯಾಗಿ ಉಳಿದಿಲ್ಲ... ಆಯಾ ಸರ್ಕಾರದ ಕೈಗೊಂಬೆಯಾಗಿದೆ: ರಾಹುಲ್ ಗಾಂಧಿ ಆರೋಪ

ಟ್ವಿಟರ್ ತನ್ನ ಅಧಿಕೃತ ಖಾತೆಯನ್ನು ಲಾಕ್ ಮಾಡುವ ಮೂಲಕ ಭಾರತದ ರಾಜಕೀಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಟ್ವಿಟರ್ ತನ್ನ ಅಧಿಕೃತ ಖಾತೆಯನ್ನು ಲಾಕ್ ಮಾಡುವ ಮೂಲಕ ಭಾರತದ ರಾಜಕೀಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ.

ಈ ಕುರಿತಂತೆ ತಮ್ಮ ಅಧಿಕೃತ ಯೂಟ್ಯೂಬ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ರಾಹುಲ್ ಗಾಂಧಿ, 'ಪ್ರಜಾಪ್ರಭುತ್ವದ ಮೇಲೆ ಪದೇ ಪದೇ ದಾಳಿ ಮಾಡಲಾಗುತ್ತಿದೆ. ಈ ಕುರಿತಂತೆ ಸಂಸತ್ತಿನಲ್ಲಿ ಮಾತನಾಡಲು ನಮಗೆ ಅವಕಾಶ ನೀಡುತ್ತಿಲ್ಲ, ಮಾಧ್ಯಮಗಳನ್ನು ಅಧಿಕಾರ ಬಲದಿಂದ ನಿಯಂತ್ರಿಸಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವೇದಿಕೆಯಾಗಬೇಕಿದ್ದ ಟ್ವಿಟರ್‌ನಲ್ಲಿ ನಾವು ಯೋಚಿಸಿದ್ದನ್ನು ಹಾಕುವ ವ್ಯವಸ್ಥೆ ಮೇಲೆ ಕಣ್ಣಿಡಲಾಗುತ್ತಿದೆ. ನಿಸ್ಸಂದೇಹವಾಗಿ ಟ್ವಿಟರ್ ಪೂರ್ವಾಗ್ರಹಪೀಡಿತವಾಗಿದ್ದು, ಇದು 'ಆ ದಿನದ ಸರ್ಕಾರ' ಹೇಳುವುದನ್ನು ಕೇಳುತ್ತದೆ ಎಂದು ಆರೋಪಿಸಿದ್ದಾರೆ.

ಅಲ್ಲದೆ ನಮ್ಮ ರಾಜಕೀಯವನ್ನು ವ್ಯಾಖ್ಯಾನಿಸಲು ಕಂಪನಿಯು ಕೆಲಸ ಮಾಡುತ್ತಿದೆ. ಓರ್ವ ರಾಜಕಾರಣಿಯಾಗಿ ನನಗೆ ಅದು ಇಷ್ಟವಿಲ್ಲ. ಇದು ದೇಶದ ಪ್ರಜಾಪ್ರಭುತ್ವ ರಚನೆಯ ಮೇಲಿನ ದಾಳಿಯಾಗಿದೆ. ಇದು ರಾಹುಲ್ ಗಾಂಧಿ ಮೇಲಿನ ದಾಳಿಯಲ್ಲ, ಇದು ಕೇವಲ ರಾಹುಲ್ ಗಾಂಧಿಯನ್ನು ಮುಚ್ಚುವ ಕೆಲಸವಲ್ಲ.. ಬದಲಿಗೆ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಪ್ರಕ್ರಿಯೆಯಾಗಿದೆ. ಟ್ವಿಟರ್ ನಲ್ಲಿ ನಾನು 19-20 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದೇನೆ, ನೀವು ಅವರನ್ನು ತಮ್ಮ ಅಭಿಪ್ರಾಯ ಮಂಡಿಸುವುದರಿಂದ ನಿರಾಕರಿಸುತ್ತಿದ್ದೀರಿ. ನೀವು ಅವರಿಗೆ ಅಭಿಪ್ರಾಯದ ಹಕ್ಕನ್ನು ನಿರಾಕರಿಸುತ್ತಿದ್ದೀರಿ. ಇದು ಕೇವಲ ಅನ್ಯಾಯವಲ್ಲ... ಟ್ವಿಟರ್ ಒಂದು ತಟಸ್ಥ ವೇದಿಕೆ ಎಂಬ ಕಲ್ಪನೆಯನ್ನು ಉಲ್ಲಂಘಿಸುತ್ತದೆ. ಹೂಡಿಕೆದಾರರಿಗೆ, ಇದು ತುಂಬಾ ಅಪಾಯಕಾರಿ ವಿಷಯ. ರಾಜಕೀಯ ಸನ್ನಿವೇಶದಲ್ಲಿ ಪಕ್ಷಗಳನ್ನು ತೆಗೆದುಕೊಳ್ಳುವುದು ಟ್ವಿಟರ್‌ಗೆ ಪರಿಣಾಮ ಬೀರುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 

ಟ್ವಿಟರ್‌ನ ಅಪಾಯಕಾರಿ ಆಟ
ಟ್ವಿಟರ್ ಪಕ್ಷಪಾತದ ವೇದಿಕೆಯಾಗಿದೆ. ಟ್ವಿಟರ್ ವಾಸ್ತವವಾಗಿ ಒಂದು ತಟಸ್ಥ, ವಸ್ತುನಿಷ್ಠ ವೇದಿಕೆಯಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಇದು ಪಕ್ಷಪಾತದ ವೇದಿಕೆಯಾಗಿದೆ. ಇದು ಆ ದಿನದ ಸರ್ಕಾರ ಹೇಳುವುದನ್ನು ಕೇಳುತ್ತದೆ. ಕಂಪನಿಗಳು ಭಾರತ ಸರ್ಕಾರಕ್ಕೆ ಬದ್ಧರಾಗಿರುವುದರಿಂದ ನಾವು ನಮ್ಮ ರಾಜಕೀಯವನ್ನು ವ್ಯಾಖ್ಯಾನಿಸಲು ಅವಕಾಶ ನೀಡುತ್ತೇವೆಯೇ? ಅದಕ್ಕೇನಾಗುತ್ತದೆಯೋ? ಅಥವಾ ನಾವು ವ್ಯಾಖ್ಯಾನಿಸಲಿದ್ದೇವೆ. ನಮ್ಮ ರಾಜಕೀಯ ನಮ್ಮದೇ? ಎಂದು  ನಾವು ಭಾರತೀಯರಾಗಿ ಈ ಪ್ರಶ್ನೆಯನ್ನು ಕೇಳಬೇಕು ಎಂದು ಹೇಳಿದರು.

ಅಂತೆಯೇ ಸಂಸತ್ತಿನ ಮುಂಗಾರು ಅಧಿವೇಶನದ ಹಠಾತ್ ಅಂತ್ಯದ ಬಗ್ಗೆ ಮಾತನಾಡಿದ ರಾಹುಲ್, ಪ್ರಜಾಪ್ರಭುತ್ವದ ಮೇಲೆ ಮತ್ತೆ ದಾಳಿಯಾಗಿದೆ.  ಸಂಸತ್ತಿನಲ್ಲಿ ನಮಗೆ ಮಾತನಾಡಲು ಅವಕಾಶವಿಲ್ಲ. ಮಾಧ್ಯಮಗಳು ನಿಯಂತ್ರಿಸಲ್ಪಡುತ್ತಿವೆ. ಮತ್ತು ನಾವು ಟ್ವಿಟರ್‌ನಲ್ಲಿ ನಾವು ಯೋಚಿಸಿದ್ದನ್ನು ಹಾಕುವ ಪ್ರಕ್ರಿಯೆ ಮೇಲೆ ಕಣ್ಣಿಡಲಾಗುತ್ತಿದೆ. ಆ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡಲಾಗುತ್ತಿದೆ ಎಂದು ಹೇಳಿದರು.

ಇತ್ತೀಚೆಗಷ್ಟೇ ಟ್ವಿಟರ್ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇರೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಇತರೆ ಕಾಂಗ್ರೆಸ್ ನಾಯಕರ ಟ್ವಿಟರ್ ಖಾತೆಗಳನ್ನು ಲಾಕ್ ಮಾಡಲಾಗಿತ್ತು. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಮತ್ತು ಟ್ವಿಟರ್ ಸಂಸ್ಥೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com