'ರಾಹುಲ್ ಗಾಂಧಿ ಸಕ್ರಿಯವಾಗಿದ್ದ ಆ ಏಕೈಕ ಸ್ಥಳದಿಂದಲೂ ಗೇಟ್ ಪಾಸ್': ಟ್ವಿಟರ್ ಖಾತೆ ಅಮಾನತಿಗೆ ಬಿಜೆಪಿ ವ್ಯಂಗ್ಯ

ರಾಹುಲ್ ಗಾಂಧಿ ಅವರು ಸಕ್ರಿಯವಾಗಿದ್ದ ಏಕೈಕ ಸ್ಥಳ ಟ್ವಿಟರ್ ಆಗಿದ್ದು, ಈಗ ಅಲ್ಲಿಂದಲೂ ಕಾಂಗ್ರೆಸ್ ನಾಯಕನನ್ನು ಹೊರ ಹಾಕಲಾಗಿದೆ ಎಂದು ಬಿಜೆಪಿ ಶುಕ್ರವಾರ ವ್ಯಂಗ್ಯವಾಡಿದೆ.
ಸಂಸದ ತೇಜಸ್ವಿ ಸೂರ್ಯ
ಸಂಸದ ತೇಜಸ್ವಿ ಸೂರ್ಯ

ನವದೆಹಲಿ: ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. 

ರಾಹುಲ್ ಗಾಂಧಿ ಅವರು ಸಕ್ರಿಯವಾಗಿದ್ದ ಏಕೈಕ ಸ್ಥಳ ಟ್ವಿಟರ್ ಆಗಿದ್ದು, ಈಗ ಅಲ್ಲಿಂದಲೂ ಕಾಂಗ್ರೆಸ್ ನಾಯಕನನ್ನು ಹೊರ ಹಾಕಲಾಗಿದೆ ಎಂದು ಬಿಜೆಪಿ ಶುಕ್ರವಾರ ವ್ಯಂಗ್ಯವಾಡಿದೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಸಂಸದ ಹಾಗೂ ಪಕ್ಷದ ಯುವ ಘಟಕದ ಅಧ್ಯಕ್ಷ ತೇಜಸ್ವಿ ಸೂರ್ಯ, ಸಾಮಾಜಿಕ ಮಾಧ್ಯಮ ವೇದಿಕೆ ಬಳಕೆದಾರರನ್ನು "ಸಬಲೀಕರಣಗೊಳಿಸಲು" ಮೋದಿ ಸರ್ಕಾರ ಹೊಸ ನಿಯಮಗಳನ್ನು ರೂಪಿಸಿದಾಗ ಅದೇ ಕಾಂಗ್ರೆಸ್ ಗಟ್ಟಿಯಾಗಿ ಅಳುತ್ತಿದೆ ಮತ್ತು ಸರ್ಕಾರದ ಮೇಲೆ ದಾಳಿ ಮಾಡುತ್ತಿದೆ. ಆದರೆ ಈಗ ರಾಹುಲ್ ಗಾಂಧಿ ಅವರ ಖಾತೆಯನ್ನು ಮರುಸ್ಥಾಪಿಸಲು ಮೋದಿ ಸರ್ಕಾರ ಜಾರಿಗೊಳಿಸಿದ ಹೊಸ ಸಾಮಾಜಿಕ ಮಾಧ್ಯಮ ನಿಯಮಗಳನ್ನೇ ಬಳಸಬೇಕು ಎಂದಿದ್ದಾರೆ.

ಈಗ, ರಾಹುಲ್ ಗಾಂಧಿ ಅವರು ಅತ್ಯಾಚಾರ ಮತ್ತು ಹತ್ಯೆಗೀಡಾದವರ ಕುಟುಂಬದ ಸದಸ್ಯರ ಚಿತ್ರವನ್ನು ಟ್ವೀಟ್ ಮಾಡಿದ ನಂತರ ಅಭಿವ್ಯಕ್ತಿ ಸ್ವಾತಂತ್ರ್ಯದ ವಾದ ಮಂಡಿಸಲು ಸಾಧ್ಯವಿಲ್ಲ. ಇದು "ಅಸಭ್ಯ, ಕಾನೂನುಬಾಹಿರ ಮತ್ತು ಅಮಾನವೀಯ" ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

ಅತ್ಯಾಚಾರಕ್ಕೊಳಗಾದವರ ವಿಳಾಸ ಅಥವಾ ಆಕೆಯ ಕುಟುಂಬದ ಸದಸ್ಯರ ವಿವರಗಳು ಸೇರಿದಂತೆ ಅವರ ಗುರುತನ್ನು ಬಹಿರಂಗಪಡಿಸುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ ಎದು ಬಿಜೆಪಿ ಸಂಸದ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com