ಆಗಸ್ಟ್ 14 ಇನ್ನು ಮುಂದೆ 'ವಿಭಜನೆಯ ಕರಾಳ ನೆನಪಿನ ದಿನ': ಪ್ರಧಾನಿ ಮೋದಿ ಘೋಷಣೆ

ಆಗಸ್ಟ್​ 14ನ್ನು ದೇಶ ವಿಭಜನೆಯ ಕರಾಳ ನೆನಪಿನ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ. 
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಆಗಸ್ಟ್​ 14ನ್ನು ದೇಶ ವಿಭಜನೆಯ ಕರಾಳ ನೆನಪಿನ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ‘ವಿಭಜನೆಯ ನೋವನ್ನು ಎಂದಿಗೂ ಮರೆಯಲಾಗದು. ದ್ವೇಷ ಮತ್ತು ಹಿಂಸಾಚಾರದಿಂದಾಗಿ ನಮ್ಮ ಲಕ್ಷಾಂತರ ಸಹೋದರ ಸಹೋದರಿಯರು ಸ್ಥಳಾಂತರಗೊಂಡಿದ್ದರು. ಅನೇಕರು ಪ್ರಾಣ ಕಳೆದುಕೊಂಡಿದ್ದರು. ನಮ್ಮ ಜನರು ಪಟ್ಟ ಪಾಡುಗಳು ಮತ್ತು ತ್ಯಾಗದ ನೆನಪಿಗಾಗಿ ಆಗಸ್ಟ್ 14 ಅನ್ನು ವಿಭಜನೆಯ ಕರಾಳ ನೆನಪಿನ ದಿನವನ್ನಾಗಿ ಪರಿಗಣಿಸಲಾಗುವುದು’ ಎಂದು ಹೇಳಿದ್ದಾರೆ. 

‘ವಿಭಜನೆಯ ಕರಾಳ ನೆನಪಿನ ದಿನ’ವು ಸಾಮಾಜಿಕ ವಿಭಜನೆ, ಅಸಾಮರಸ್ಯದ ವಿಷವನ್ನು ತೆಗೆದುಹಾಕುವ ಅಗತ್ಯವನ್ನು ನೆನಪಿಸುತ್ತದೆ. ಏಕತೆ, ಸಾಮಾಜಿಕ ಸಾಮರಸ್ಯ ಮತ್ತು ಮಾನವ ಸಬಲೀಕರಣದ ಮನೋಭಾವವನ್ನು ಇನ್ನಷ್ಟು ಬಲಪಡಿಸಲಿದೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ಆಶಿಸಿದ್ದಾರೆ.

ಈ ನಡುವೆ ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿಂದು ಸ್ವಾತಂತ್ರ್ಯ ದಿನ ಆಚರಿಸಲಾಗುತ್ತಿದೆ. ಆಗಸ್ಟ್ 14ರ ದಿನವನ್ನು ದೇಶದ ಇತಿಹಾಸದಲ್ಲಿ ಕಣ್ಣೀರಿನಿಂದ ಬರೆಯಲಾಗಿದೆ. ದೇಶ ವಿಭಜನೆಯಾದ ದಿನ ಇದು. 

ಪಾಕಿಸ್ತಾನವನ್ನು 14 ಆಗಸ್ಟ್ 1947 ರಂದು ಮತ್ತು ಭಾರತವನ್ನು 15 ಆಗಸ್ಟ್ 1947 ರಂದು ಪ್ರತ್ಯೇಕ ರಾಷ್ಟ್ರವೆಂದು ಘೋಷಿಸಲಾಯಿತು. ಈ ವಿಭಜನೆಯ ಮೂಲಕ ಭಾರತವನ್ನು ಎರಡು ಭಾಗಗಳಾಗಿ ವಿಂಗಡಿಸುವುದರ ಜೊತೆಗೆ  ಬಂಗಾಳವನ್ನು ಕೂಡ ವಿಭಜಿಸಲಾಯಿತು ಮತ್ತು ಬಂಗಾಳದ ಪೂರ್ವ ಭಾಗವನ್ನು ಭಾರತದಿಂದ ಬೇರ್ಪಡಿಸಿ ಪೂರ್ವ ಪಾಕಿಸ್ತಾನವನ್ನು ರೂಪಿಸಲಾಯಿತು, ಅದು 1971 ರ ಯುದ್ಧದ ನಂತರ ಬಾಂಗ್ಲಾದೇಶವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com