ಸ್ವಾತಂತ್ರ್ಯದ ಶತಮಾನೋತ್ಸವ ವೇಳೆಗೆ 'ಆದರ್ಶ ಭಾರತ ನಿರ್ಮಾಣ'ದ ಗುರಿ ಮುಟ್ಟಿರಬೇಕು: ಪ್ರಧಾನಿ ಮೋದಿ

ಕೊರೋನಾತಂಕ ನಡುವೆಯೇ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ. ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದು, ದೇಶದ ಜನತೆಯನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದಾರೆ. 
ದೇಶವನ್ನುದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಿ ಮೋದಿ
ದೇಶವನ್ನುದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಿ ಮೋದಿ

ನವದೆಹಲಿ: ಕೊರೋನಾತಂಕ ನಡುವೆಯೇ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ. ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದು, ದೇಶದ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. 

ಭಾಷಣ ಆರಂಭಿಸಿರುವ ಪ್ರಧಾನಿ ಮೋದಿಯವರು ಮೊದಲಿಗೆ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು. ಗಾಂಧಿ, ಚಂದ್ರಶೇಖರ್ ಆಜಾದ್, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ದೇಶದ ಪ್ರಥಮ ಗೃಹ ಸಚಿವ ವಲ್ಲಭ್ ಭಾಯಿ ಪಟೇಲ್ ಅವರನ್ನು ಸ್ಮರಿಸಿದರು. 

ದೇಶದ ಸ್ವಾತಂತ್ರ್ಯಕ್ಕಾಗಿ ಹಲವರು ಹೋರಾಡಿದ್ದಾರೆ. ಅವರೆಲ್ಲರಿಗೂ ನನ್ನ ನಮನಗಳು ಎಂದು ಹೇಳಿದರು. 

ಮಹಾಮಾರಿ ಕೊರೋನಾ ಸಂಕಷ್ಟದ ಸಮಯದಲ್ಲಿ ನಮ್ಮ ವೈದ್ಯರು, ದಾದಿಯರು, ಅರೆ ವೈದ್ಯಕೀಯ ಸಿಬ್ಬಂದಿ, ನೈರ್ಮಲ್ಯ ಕೆಲಸಗಾರರು, ವಿಜ್ಞಾನಿಗಳು ಮತ್ತು ಕೋಟ್ಯಾಂತರ ನಾಗರೀಕರು ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದ್ದಾರೆ. ಈ ಅವಧಿಯಲ್ಲಿ ಇತರರ ಸೇವೆಗಾಗಿ ಪ್ರತಿ ಕ್ಷಣವನ್ನೂ ಮೀಸಲಿಟ್ಟವರು ನಮ್ಮ ಮೆಚ್ಚುಗೆಗೆ ಅರ್ಹರು ಎನ್ನುವ ಮೂಲಕ ಕೊರೋನಾ ವಾರಿಯರ್ಸ್ ಗಳಿಗೆ ಅಭಿನಂದನೆ ಸಲ್ಲಿಸಿದರು. 

ಬಳಿಕ ಟೊಕಿಯೊ ಒಲಂಪಿಕ್ಸ್ ಕುರಿತು ಮಾತನಾಡಿ, ಜಪಾನ್'ನ ಟೊಕಿಯೋದಲ್ಲಿ ನಡೆದ ಒಲಂಪಿಕ್ಸ್ ನಲ್ಲಿ ನಮಗೆ ಹೆಮ್ಮೆ ತಂದ ಕ್ರೀಡಾಪಟುಗಳು ಇಂದು ನಮ್ಮ ನಡುವೆ ಇದ್ದಾರೆ. ಅವರ ಸಾಧನೆಯನ್ನು ಶ್ಲಾಘಿಸುವಂತೆ ನಾನು ರಾಷ್ಟ್ರವನ್ನು ಒತ್ತಾಯಿಸುತ್ತೇನೆ. ಅವರ ಸಾಧನೆಯನ್ನು ಶ್ಲಾಘಿಸುವಂತೆ ನಾನು ರಾಷ್ಟ್ರವನ್ನು ಒತ್ತಾಯಿಸುತ್ತೇನೆ. ಅವರು ನಮ್ಮ ಹೃದಯವನ್ನು ಗೆಲ್ಲುವುದಲ್ಲದೆ ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡಿದ್ದಾರೆ ಎನ್ನುವ ಮೂಲದ ಚಪ್ಪಾಳೆ ತಟ್ಟಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದರು. 

ಇದೇ ವೇಳೆ ದೇಶದ ವಿಭಜನೆಯನ್ನು ನೆನೆದ ಪ್ರಧಾನಿ ಮೋದಿ ವಿಭಜನೆ ಸಮಯದಲ್ಲಿ ಭಾರತದ ಜನರು ಅನುಭವಿಸಿದ ನೋವು ಮತ್ತು ಸಂಕಷ್ಟಗಳನ್ನು ಸ್ಮರಿಸಲು ನಾವು ಆಗಸ್ಟ್ 14ನ್ನು ವಿಭಜನೆಯ ಕರಾಳ ದಿನವನ್ನಾಗಿ ಆಚರಿಸಲು ನಾವು ನಿರ್ಧಾರ ಕೈಗೊಂಡಿದ್ದೇವೆಂದು ತಿಳಿಸಿದರು.

ಭಾರತೀಯರು ಕೋವಿಡ್ ವಿರುದ್ಧ ಯುದ್ಧದಲ್ಲಿ ಬಹಳ ತಾಳ್ಮೆಯಿಂದ ಹೋರಾಡಿದ್ದಾರೆ. ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ನಾವು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದರೂ, ಪ್ರತಿಯೊಂದು ಕ್ಷೇತ್ರದಲ್ಲಿಯೂ ಅಸಾಧಾರಣ ವೇಗದಲ್ಲಿ ನಾವು ಕೆಲಸ ಮಾಡಿದ್ದೇವೆ. ನಮ್ಮ ಕೈಗಾರಿಕೋದ್ಯಮಿಗಳು ಮತ್ತು ವಿಜ್ಞಾನಿಗಳ ಶಕ್ತಿಯ ಪರಿಣಾಮದಿಂದ ಇದು ಸಾಧ್ಯವಾಗಿದೆ. ಇಂದು ಭಾರತವು ಲಸಿಕೆಗಳಿಗಾಗಿ ಬೇರೆ ಯಾವುದೇ ರಾಷ್ಟ್ರವನ್ನು ಅವಲಂಬಿಸುವ ಅಗತ್ಯವಿಲ್ಲ. ಭಾರತದಲ್ಲಿ ಅತಿದೊಡ್ಡ ಕೊರೋನಾ ಲಸಿಕೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ನಾವು ಹೆಮ್ಮೆಯಿಂದ ಹೇಳಬಹುದು. ಇದೂವರೆಗೆ ರೂ.54 ಕೋಟಿಗೂ ಹೆಚ್ಚು ಜನರು ಲಸಿಕೆ ಪಡೆದುಕೊಂಡಿದ್ದಾರೆಂದು ಹೇಳಿದರು.

ಪ್ರತಿ ರಾಷ್ಟ್ರದ ಅಭಿವೃದ್ಧಿ ಪಯಣದಲ್ಲಿ ಆ ರಾಷ್ಟ್ರವು ತನ್ನನ್ನು ಹೊಸ ತುದಿಯಿಂದ ವ್ಯಾಖ್ಯಾನಿಸಿಕೊಳ್ಳುವ ಸಮಯ ಬರುತ್ತದೆ. ಬಳಿಕ ಆ ರಾಷ್ಟ್ರ ಹೊಸ ನಿರ್ಣಯಗಳೊಂದಿಗೆ ತನ್ನನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ಇಂದು, ಭಾರತದ ಅಭಿವೃದ್ಧಿ ಪಯಣದಲ್ಲಿ ಆ ಸಮಯ ಬಂದಿದೆ. ಹೊಸ ಸಂಕಲ್ಪದೊಂದಿಗೆ ಹೊಸ ಭಾರತ ಆರಂಭವಾಗಬೇಕಿದೆ. ಮುಂದಿನ 25 ವರ್ಷಗಳಲ್ಲಿ ಭಾರತ ಸ್ವಾತಂತ್ರ್ಯ ಶತಮಾನೋತ್ಸವ ಆಚರಿಸಲಾಗುತ್ತದೆ. ಅಲ್ಲಿಯವರೆಗೆ ನಮ್ಮ ಗುರಿ ಭಾರತದ ನಿರ್ಮಾಣ ಆಗಿರಬೇಕು. ಯಾವ ರಾಷ್ಟ್ರಕ್ಕೂ ನಾವು ಕಡಿಮೆ ಇಲ್ಲ ಎನ್ನುವಂತೆ ಬೆಳೆಯಬೇಕು. ನಮ್ಮ ಎಲ್ಲಾ ಗುರಿಗಳ ಸಾಧನೆಗೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ಬಹಳ ಮುಖ್ಯವಾಗಿದೆ. 

ಕಳೆದ 7 ವರ್ಷಗಳಲ್ಲಿ ಆರಂಭವಾದ ಅನೇಕ ಯೋಜನೆಗಳ ಪ್ರಯೋಜನಗಳು ಕೋಟ್ಯಾಂತರ ಬಡವರ ಮನೆಬಾಗಿಲನ್ನು ತಲುಪಿವೆ. ಉಜ್ವಲದಿಂದ ಆಯುಷ್ಮಾನ್ ಭಾರತ್ ವರೆಗೆ ರಾಷ್ಟ್ರದ ಬಡವರಿಗೆ ಯೋಜನೆಗಳ ಸಾಮರ್ಥ್ಯದ ಬಗ್ಗೆ ತಿಳಿದಿದೆ. ಇಂದು ಸರ್ಕಾರದ ಯೋಜನೆಗಳು ವೇಗವನ್ನು ಪಡೆದುಕೊಂಡಿದ್ದು, ಶೀಘ್ರಗತಿಯಲ್ಲಿ ಜನರನ್ನು ತಲುಪುತ್ತಿವೆ. 

21ನೇ ಶತಮಾನದಲ್ಲಿ ಭಾರತದ ಸಾಮರ್ಥ್ಯಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಯೋಜನೆಗಳನ್ನು ಸಂಪೂರ್ಣವಾಗಿ ಬಳಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಇದಕ್ಕಾಗಿ ನಾವು ಹಿಂದುಳಿದಿರುವ ವಿಭಾಗ, ಹಿಂದುಳಿದಿರುವ ಪ್ರದೇಶವನ್ನು ಕೈ ಹಿಡಿಯಬೇಕಿದೆ ಎಂದು ತಿಳಿಸಿದರು. 

ಅಭಿವೃದ್ಧಿ ಅಂತರ್ಗತವಾಗಿರಬೇಕು. ಈಶಾನ್ಯ ಭಾಗ, ಹಿಮಾಲಯ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಕರಾವಳಿ ಪ್ರದೇಶ ಮತ್ತು ಬುಡಕಟ್ಟು ಪ್ರದೇಶಗಳು ಭವಿಷ್ಯದಲ್ಲಿ ಭಾರತದ ಅಭಿವೃದ್ಧಿಗೆ ಅಡಿಪಾಯಗಳಾಗಲಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ನಿರ್ಣಯದ ಆಯೋಗವನ್ನು ರಚಿಸಲಾಗಿದೆ. ಭವಿಷ್ಯದಲ್ಲಿ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳೂ ನಡೆಯುತ್ತಿವೆ. ಒಂದೆಡೆ, ಲಡಾಖ್ ಆಧುನಿಕ ಮೂಲಸೌಕರ್ಯಗಳ ಸೃಷ್ಟಿಗೆ ಸಾಕ್ಷಿಯಾಗಿದ್ದರೆ, ಮತ್ತೊಂದೆಡೆ ಇಂಡಸ್ ಸೆಂಟ್ರಲ್ ಯೂನಿವರ್ಸಿಟಿಯು ಲಡಾಖ್ ಅನ್ನು ಉನ್ನತ ಶಿಕ್ಷಣದ ಕೇಂದ್ರವನ್ನಾಗಿಸುತ್ತಿದೆ. 

ಮೂಲ ಸೌಲಭ್ಯಗಳ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ, ದಲಿತರು, ಹಿಂದುಳಿದವರು, ಬುಡಕಟ್ಟುಗಳು, ಸಾಮಾನ್ಯ ವರ್ಗ ಜನರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳ ಜನರಿಗೆ ಇತ್ತೀಚೆಗೆ ವೈದ್ಯಕೀಯ ಶಿಕ್ಷಣದಲ್ಲಿ ಅಖಿಲ ಭಾರತ ಕೋಟಾದ ಅಡಿಯಲ್ಲಿ ಮೀಸಲಾತಿಯನ್ನು ನೀಡಲಾಗಿದೆ. ರಾಜ್ಯಗಳಿಗೆ ಒಬಿಟಿ ಪಟ್ಟಿ ಸಿದ್ಧಪಡಿಸುವ ಹಕ್ಕನ್ನೂ ನೀಡಲಾಗಿದೆ. 

ಇಂದು ನಮ್ಮ ದೇಶದ ಹಳ್ಳಿಗಳು ವೇಗವಾಗಿ ಬದಲಾಗುತ್ತಿವೆ. ಕೆಲವು ವರ್ಷಗಳಲ್ಲಿ ಹಳ್ಳಿಗಳಿಗೆ ರಸ್ತೆ ಹಾಗೂ ವಿದ್ಯುತ್ ಸೌಲಭ್ಯಗಳನ್ನು ಒದಲಿಸಲಾಗಿದೆ. ಆಪ್ಟಿಕಲ್ ಫೈಬರ್ ನೆಟ್ವರ್ಕ್ ಹಳ್ಳಿಗಳಿಗೆ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುತ್ತಿದೆ. ಹಳ್ಳಿಗಳಲ್ಲೂ ಡಿಜಿಟಲ್ ಉದ್ಯಮಿಗಳು ತಯಾರಾಗುತ್ತಿದ್ದಾರೆ. ಮುಂಬರುವ ವರ್ಷಗಳಲ್ಲಿ, ದೇಶದ ಸಣ್ಣ ರೈತರ ಶಕ್ತಿಯನ್ನು ಹೆಚ್ಚಿಸಬೇಕಿದೆ. ಅವರಿಗೆ ಹೊಸ ಸೌಲಭ್ಯಗಳನ್ನು ನೀಡಬೇಕು. ಅವರು ದೇಶದ ಹೆಮ್ಮೆಯಾಗಬೇಕು. ಮುಂದಿನ ತಲೆಮಾರಿನ ಮೂಲಸೌಕರ್ಯ, ವಿಶ್ವ ದರ್ಜೆಯ ಉತ್ಪಾದನೆ, ಹೊಸತನ ಮತ್ತು ಹೊಸ ಯುಗದ ತಂತ್ರಜ್ಞಾನಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡಬೇಕಿದೆ.

ಮುಂದಿನ ದಿನಗಳಲ್ಲಿ, ಪ್ರಧಾನಿ ಗತಿ ಶಕ್ತಿ ಯೋಜನೆಯನ್ನು ಪ್ರಾರಂಭಿಸುತ್ತೇವೆ, 100 ಲಕ್ಷ ಕೋಟಿ ರಾಷ್ಟ್ರೀಯ ಮೂಲಸೌಕರ್ಯ ಮಾಸ್ಟರ್ ಪ್ಲಾನ್ ಇದಾಗಿದ್ದು, ಈ ಯೋಜನೆ ಸಮಗ್ರ ಮೂಲಸೌಕರ್ಯಕ್ಕೆ ಅಡಿಪಾಯವನ್ನು ನೀಡಲಿದೆ ಮತ್ತು ನಮ್ಮ ಆರ್ಥಿಕತೆಗೆ ಸಮಗ್ರ ಮಾರ್ಗವನ್ನು ನೀಡುತ್ತದೆ. 75 ವಂದೇ ಭಾರತ್ ರೈಲುಗಳು ಸ್ವಾತಂತ್ರ್ಯದ ಅಮೃತ್ ಮಹೋತ್ಸವದ ಹಿನ್ನೆಲೆಯಲ್ಲಿ 75 ವಾರಗಳಲ್ಲಿ ಭಾರತದ ಮೂಲೆ ಮೂಲೆಯನ್ನು ಸಂಪರ್ಕಿಸಲಿದೆ. ದೊಡ್ಡ ಬದಲಾವಣೆಗಳನ್ನು, ದೊಡ್ಡ ಸುಧಾರಣೆಗಳನ್ನು ತರಲು ರಾಜಕೀಯ ಇಚ್ಛಾಶಕ್ತಿ ಅಗತ್ಯವಿದೆ. ಇಂದು, ಭಾರತದಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಲ್ಲ ಎಂಬುದನ್ನು ಇಡೀ ಜಗತ್ತು ನೋಡುತ್ತಿದೆ. ಸುಧಾರಣೆಗಳನ್ನು ತರಲು ಉತ್ತಮ ಮತ್ತು ಚುರುಕಾದ ಆಡಳಿತದ ಅಗತ್ಯವಿದೆ. ಭಾರತವು ಆಡಳಿತದ ಹೊಸ ಅಧ್ಯಾಯವನ್ನು ಹೇಗೆ ಬರೆಯುತ್ತಿದೆ ಎಂಬುದಕ್ಕೆ ಇಂದು ಇಡೀ ಜಗತ್ತು ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ. 

ನಮ್ಮ ಸೇವೆಗಳು ದೇಶದ ಕೊನೆಯ ವ್ಯಕ್ತಿಯನ್ನೂ ತಲುಪುವಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ. ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ, ಜನರ ಜೀವನದಲ್ಲಿ ಸರ್ಕಾರದ ಮತ್ತು ಸರ್ಕಾರದ ಕಾರ್ಯವಿಧಾನಗಳ ಅನಗತ್ಯ ಹಸ್ತಕ್ಷೇಪವನ್ನು ಕೊನೆಗೊಳಿಸುವುದು ಅತ್ಯಗತ್ಯವಾಗಿದೆ. ಮೊದಲು ಸರ್ಕಾರ ಚಾಲಕನ ಸೀಟಿನಲ್ಲಿ ಕುಳಿತಿತ್ತು. ಬಹುಶಃ ಅದು ಆ ಸಮಯದಲ್ಲಿ ಬೇಕಾಗಿರಬಹುದು. ಆದರೆ ಈಗ ಸಮಯ ಬದಲಾಗಿದೆ. ಅನಗತ್ಯ ಕಾನೂನುಗಳು ಮತ್ತು ಕಾರ್ಯವಿಧಾನಗಳಿಂದ ಜನರನ್ನು ಮುಕ್ತಗೊಳಿಸಲು ಕಳೆದ 7 ವರ್ಷಗಳಲ್ಲಿ ಪ್ರಯತ್ನಗಳನ್ನು ಹೆಚ್ಚಿಸಲಾಗಿದೆ. ಇಲ್ಲಿಯವರೆಗೆ ಹಲವಾರು ಅನಗತ್ಯ ಕಾನೂನುಗಳನ್ನು ರದ್ದುಗೊಳಿಸಲಾಗಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com