ಹತನಾಗಿದ್ದ ಹಿಜ್ಬುಲ್​ ಮುಜಾಹಿದ್ದೀನ್​ ಉಗ್ರನ ತಂದೆಯಿಂದ ಪುಲ್ವಾಮಾದಲ್ಲಿ ರಾಷ್ಟ್ರ ಧ್ವಜಾರೋಹಣ!

ಹಿಜ್ಬುಲ್​ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್​ ಬುರ್ಹಾನ್​​ ವಾನಿಯ ತಂದೆ ಮುಜಾಫರ್​ ವಾನಿ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಪುಲ್ವಾಮಾದ ಟ್ರಾಲ್​ನಲ್ಲಿ ಧ್ವಜಾರೋಹಣ ಮಾಡಿದ್ದು, ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 
ಧ್ವಜಾರೋಹಣ ಮಾಡುತ್ತಿರುವ ಉಗ್ರ ಬುರ್ಹಾನ್ ವಾನಿ ತಂದೆ
ಧ್ವಜಾರೋಹಣ ಮಾಡುತ್ತಿರುವ ಉಗ್ರ ಬುರ್ಹಾನ್ ವಾನಿ ತಂದೆ

ಪುಲ್ವಾಮ: ಭಾರತೀಯ ಸೇನಾಪಡೆಗಳ ಕಾರ್ಯಾಚರಣೆ ವೇಳೆ ಹತನಾಗಿದ್ದ ಹಿಜ್ಬುಲ್​ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್​ ಬುರ್ಹಾನ್​​ ವಾನಿಯ ತಂದೆ ಮುಜಾಫರ್​ ವಾನಿ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಪುಲ್ವಾಮಾದ ಟ್ರಾಲ್​ನಲ್ಲಿ ಧ್ವಜಾರೋಹಣ ಮಾಡಿದ್ದು, ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

75ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಪುಲ್ವಾಮಾದ ಸರ್ಕಾರಿ ಶಾಲೆಯೊಂದರಲ್ಲಿ ಧ್ವಜಾರೋಹಣ ನೆರವೇರಿದ್ದು, ವೃತ್ತಿಯಲ್ಲಿ ಶಿಕ್ಷಕರಾಗಿರುವ ಮುಜಾಫರ್ ವಾನಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ. 

ಮೃತ ಉಗ್ರನ ತಂದೆ ಧ್ವಜಾರೋಹಣ ಮಾಡಿರುವ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.
ಮುಜಾಫರ್​ ವಾನಿ ಮಗ ಬುರ್ಹಾನ್​ ವಾನಿ ಹಿಜ್ಬುಲ್​ ಮುಜಾಹಿದ್ದೀನ್​ ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದ. ತನ್ನ ಸೋಷಿಯಲ್ ಮೀಡಿಯಾ ಅಕೌಂಟ್​ಗಳ ಮೂಲಕ ಕಾಶ್ಮೀರಿ ಯುವಕರನ್ನು ಉಗ್ರಸಂಘಟನೆಗೆ ಸೆಳೆಯುವ ಪ್ರಯತ್ನವನ್ನು ಸದಾ ಮಾಡುತ್ತಿದ್ದ. 

2016ರಲ್ಲಿ ಈತನ ವಿರುದ್ಧ ಕಾರ್ಯಾಚರಣೆ ಮಾಡಿ ಹತ್ಯೆ ಮಾಡಲಾಗಿತ್ತು. ಬುರ್ಹಾನ್​ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಪೊಲೀಸ್​ ಐಪಿಎಸ್​ ಅಧಿಕಾರಿ ಅಬ್ದುಲ್​ ಜಬ್ಬರ್​​ಗೆ, ಕಳೆದ ವರ್ಷ ಗಣರಾಜ್ಯೋತ್ಸವದಂದು ಪೊಲೀಸ್​ ಮೆಡಲ್​ ಕೊಟ್ಟು ಪುರಸ್ಕರಿಸಲಾಗಿತ್ತು.

ಬುರ್ಹಾನ್​ ತನ್ನ 15ನೇ ವಯಸ್ಸಿನಲ್ಲಿಯೇ ಮನೆಬಿಟ್ಟಿದ್ದ. 2010ರಲ್ಲಿ ಮನೆಯನ್ನು ತೊರೆದು ಹೋಗಿ ಹಿಜ್ಬುಲ್ ಮುಜಾಹಿದ್ದೀನ್​ ಸಂಘಟನೆ ಸೇರಿಕೊಂಡಿದ್ದ. ಬುರ್ಹಾನ್ ವಾನಿ ಹತ್ಯೆಯನ್ನು ಖಂಡಿಸಿ ಕಾಶ್ಮೀರದಲ್ಲಿ ಸುಮಾರು 5 ತಿಂಗಳ ಕಾಲ ಅವನ ಅನುಯಾಯಿಗಳು ಮುಷ್ಕರ ನಡೆಸಿದ್ದವು. ಆಗಲೂ ಘರ್ಷಣೆ ನಡೆದು ನೂರು ಮಂದಿ ಸಾವನ್ನಪ್ಪಿದ್ದರು. ಅಂತಹ ದೊಡ್ಡ ಉಗ್ರನ ತಂದೆ ಇಂದು ರಾಷ್ಟ್ರಧ್ವಜ ಹಾರಿಸಿದ್ದು ಪ್ರಶಂಸೆಗೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com