ಯುಎಪಿಎ ಈಗಿನ ಸ್ವರೂಪದಲ್ಲಿ ಪ್ರಜಾಪ್ರಭುತ್ವಕ್ಕೆ ಮಾರಕವಾಗಬಲ್ಲದು: ಮಾಜಿ ಅಧಿಕಾರಿಗಳಿಂದ ಬಹಿರಂಗ ಪತ್ರ
ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಯುಎಪಿಎ ಈಗಿನ ಸ್ವರೂಪದಲ್ಲಿ ಪ್ರಜಾಪ್ರಭುತ್ವ ಹಾಗೂ ಪ್ರಜೆಗಳ ಸ್ವಾತಂತ್ರ್ಯಕ್ಕೆ ಮಾರಕವಾಗಬಲ್ಲದು ಎಂದು ಮಾಜಿ ಅಧಿಕಾರಿಗಳ ಗುಂಪೊಂದು ಬಹಿರಂಗ ಪತ್ರ ಬರೆದಿದ್ದಾರೆ.
Published: 17th August 2021 11:36 AM | Last Updated: 17th August 2021 11:36 AM | A+A A-

ಸಾಂಕೇತಿಕ ಚಿತ್ರ
ನವದೆಹಲಿ: ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಯುಎಪಿಎ ಈಗಿನ ಸ್ವರೂಪದಲ್ಲಿ ಪ್ರಜಾಪ್ರಭುತ್ವ ಹಾಗೂ ಪ್ರಜೆಗಳ ಸ್ವಾತಂತ್ರ್ಯಕ್ಕೆ ಮಾರಕವಾಗಬಲ್ಲದು ಎಂದು ಮಾಜಿ ಅಧಿಕಾರಿಗಳ ಗುಂಪೊಂದು ಬಹಿರಂಗ ಪತ್ರ ಬರೆದಿದ್ದಾರೆ.
"ಸರ್ಕಾರ ಯುಎಪಿಎ ಕಾಯ್ದೆಗೆ ತಿದ್ದುಪಡಿ ತಂದು ಈಗಿರುವ ಸ್ವರೂಪದಿಂದ ಯುಎಪಿಎಯನ್ನು ಬದಲಾವಣೆ ಮಾಡಬೇಕು" ಎಂದು ಅಧಿಕಾರಿಗಳ ತಂಡ ಪತ್ರ ಬರೆದಿದೆ.
ಯುಎಪಿಎ ಗೆ ಅತ್ಯಂತ ವರ್ಣರಂಜಿತ ಇತಿಹಾಸವಿದೆ. 1967 ರಲ್ಲಿ ಕೋಮುವಾದ, ಜಾತೀಯತೆ, ಧಾರ್ಮಿಕತೆ, ಭಾಷಾ ದುರಭಿಮಾನಗಳನ್ನು, ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ಎದುರಿಸಲು ರಾಷ್ಟ್ರೀಯ ಏಕೀಕರಣ ಮಂಡಳಿಯ ಶಿಫಾರಸ್ಸುಗಳನ್ನು ಆಧರಿಸಿ ಯುಎಪಿಎಯ ಕಾನೂನನ್ನು ಜಾರಿಗೊಳಿಸಲಾಗಿತ್ತು. ಕ್ರಮೇಣ ಯುಎಪಿಎ ತನ್ನ ಸ್ವರೂಪ ಬದಲಿಸಿಕೊಂಡು ಹೊಸ ಅಪರಾಧಗಳ ವಿಭಾಗ ಹಾಗೂ ಶಿಕ್ಷೆಗಳನ್ನೊಳಗೊಂಡಿದೆ. 5 ದಶಕಗಳಿಂದ ಅಸ್ತಿತ್ವದಲ್ಲಿರುವ ಯುಎಪಿಎಗೆ ಇತ್ತೀಚಿನ ದಿನಗಳಲ್ಲಿ ಕಠಿಣ, ದಮನಕಾರಿ ಕಾನೂನಾಗಿ ಮಾರ್ಪಾಡಾಗಿದ್ದು ಆಳುವ ರಾಜಕಾರಣಿಗಳು, ಪೊಲೀಸರು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಸಾಂವಿಧಾನಿಕ ನೀತಿ ತಂಡದ 108 ಮಂದಿ ಮಾಜಿ ಅಧಿಕಾರಿಗಳು ಬಹಿರಂಗ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಯುಎಪಿಎ ಕಾನೂನು ಈಗಿನ ಸ್ವರೂಪದಲ್ಲಿ ಹಲವು ಲೋಪದೋಷಗಳಿಂದ ಕೂಡಿದ್ದು, ರಾಜಕಾರಣಿಗಳು, ಪೊಲೀಸರಿಂದ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಆದ್ದರಿಂದ ಕಾನೂನಿಗೆ ತಿದ್ದುಪಡಿ ತರಬೇಕೆಂದು ಅಧಿಕಾರಿಗಳು ಪತ್ರದಲ್ಲಿ ಹೇಳಿದ್ದಾರೆ.
ಇದೇ ವೇಳೆ ಬ್ರಿಟನ್ ನಲ್ಲಿ ನಡೆದ ಜಿ-7 ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಮೋದಿ "ಪ್ರಜಾಪ್ರಭುತ್ವ ಹಾಗೂ ಸ್ವಾತಂತ್ರ್ಯ ಭಾರತೀಯ ತತ್ವಗಳ ಭಾಗ ಎಂದು ಹೇಳಿದ್ದನ್ನು ಉಲ್ಲೇಖಿಸಿರುವ ಅಧಿಕಾರಿಗಳು, "ಮೋದಿ ತಮ್ಮ ಮಾತಿಗೆ ಬದ್ಧರಾಗಿರುವುದಾದರೆ ಅವರ ಸರ್ಕಾರ ಕಾನೂನು ತಜ್ಞರ ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕು ಹಾಗೂ ಈಗಿರುವ ಸ್ವರೂಪದಿಂದ ಯುಎಪಿಎಯನ್ನು ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.