ಬಿಜೆಪಿಯ 'ಜನ ಆಶೀರ್ವಾದ ಯಾತ್ರೆ' ಕೊರೋನಾ 3ನೇ ಅಲೆಗೆ ಆಹ್ವಾನ: ಶಿವಸೇನೆ ಸಂಸದ ಸಂಜಯ್ ರಾವತ್

ಬಿಜೆಪಿಯ ಜನ ಆಶೀರ್ವಾದ ಯಾತ್ರೆ ಕೊರೋನಾ ಮೂರನೇ ಅಲೆಗೆ ಆಹ್ವಾನ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಟೀಕಿಸಿದ್ದಾರೆ.
ಸಂಸದ ಸಂಜಯ್ ರಾವತ್
ಸಂಸದ ಸಂಜಯ್ ರಾವತ್

ಮುಂಬೈ: ಬಿಜೆಪಿಯ ಜನ ಆಶೀರ್ವಾದ ಯಾತ್ರೆ ಕೊರೋನಾ ಮೂರನೇ ಅಲೆಗೆ ಆಹ್ವಾನ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಟೀಕಿಸಿದ್ದಾರೆ.

ಮುಂಬೈಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಕೇಂದ್ರ ಸಚಿವರು ವಿವಿಧ ರಾಜ್ಯಗಳಲ್ಲಿ ಆರಂಭಿಸಿರುವ ಜನ ಆಶೀರ್ವಾದ ಯಾತ್ರೆ ಸಂದರ್ಭದಲ್ಲಿ ನೂರಾರು, ಸಾವಿರಾರು ಜನ ಸೇರುತ್ತಾರೆ. ಕೊರೋನಾ ನಿಯಮಗಳನ್ನು ಪಾಲಿಸುತ್ತಿಲ್ಲ, ಇದರಿಂದ ಕೊರೋನಾ ವ್ಯಾಪಕವಾಗಿ ಮುಂದಿನ ದಿನಗಳಲ್ಲಿ ಹರಡುವ ಸಾಧ್ಯತೆ ಹೆಚ್ಚಾಗಿದೆ. ಬಿಜೆಪಿ ಇದನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡಿರುವ ಮಹಾರಾಷ್ಟ್ರದ ಭಾರ್ತಿ ಪವಾರ್, ಕಪಿಲ್ ಪಾಟೀಲ್ ಮತ್ತು ಭಾಗವತ್ ಕರಡ್ ಜನ ಆಶೀರ್ವಾದ ಯಾತ್ರೆಯನ್ನು ಆರಂಭಿಸಿದ್ದು ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಕೊರೋನಾ 3ನೇ ಅಲೆ ವ್ಯಾಪಕವಾಗಿ ಹರಡುವ ಸಾಧ್ಯತೆಯಿದೆ ಎಂದರು.

ಮಾಧ್ಯಮ ಸಂಸ್ಥೆಗಳು ಆಯೋಜಿಸಿದ್ದ ದೇಶದ ಟಾಪ್ 5 ಮುಖ್ಯಮಂತ್ರಿಗಳಲ್ಲಿ ಉದ್ಧವ್ ಠಾಕ್ರೆಯವರ ಹೆಸರು ಇದ್ದು ಆ ಬಗ್ಗೆ ಕೇಳಿದಾಗ, ಈ ಸಮೀಕ್ಷೆಯನ್ನು ತಳ್ಳಿಹಾಕಲು ಬಿಜೆಪಿ ಯತ್ನಿಸುತ್ತಿದೆ. ಯಾಕೆಂದರೆ ಟಾಪ್ 5ರಲ್ಲಿ ಬಿಜೆಪಿಯ ಯಾವೊಬ್ಬ ಮುಖ್ಯಮಂತ್ರಿಗಳೂ ಇಲ್ಲ, ಯಾಕೆ ಬಿಜೆಪಿಯ ಮುಖ್ಯಮಂತ್ರಿಗಳು ಸ್ಥಾನ ಪಡೆದಿಲ್ಲ ಎಂದು ಕೇಳಿದರು.

ಮುಂದಿನ ದಿನಗಳಲ್ಲಿ ಉದ್ಧವ್ ಠಾಕ್ರೆಯವರು ದೇಶದಲ್ಲಿಯೇ ನಂಬರ್ 1 ಮುಖ್ಯಮಂತ್ರಿ ಎನಿಸಿಕೊಳ್ಳಲಿದ್ದಾರೆ, ನೋಡುತ್ತಿರಿ, ಇದು ಅವರ ಮತ್ತು ಪಕ್ಷದ ಕಾರ್ಯಕರ್ತರ ಶ್ರಮದಿಂದ ಆಗಿದೆ. ಬಿಜೆಪಿಯಲ್ಲಿ ಬರೀ ಪ್ರಚಾರ ಪ್ರಿಯರು ಇರುವುದಷ್ಟೆ ಎಂದರು.

ಕೋವಿಡ್ ಸೋಂಕಿನ ಸಮಯದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೊರಗೆ ಕಾಣಿಸಿಕೊಂಡಿದ್ದು ಕಡಿಮೆ ಎಂಬ ಟೀಕೆಗೆ ಉತ್ತರಿಸಿದ ಅವರು, ಹಾಗಾದರೆ ಟಾಪ್ 5 ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಹೇಗೆ ಬರಲು ಸಾಧ್ಯ, ಮನೆಯಲ್ಲಿ ಕುಳಿತುಕೊಂಡಿದ್ದರೆ ಸಮೀಕ್ಷೆಯಲ್ಲಿ ಟಾಪ್ 5ರಲ್ಲಿ ಬರುತ್ತಿದ್ದರೇ, ಕೋವಿಡ್ ಸೋಂಕನ್ನು ತಡೆಯಲು ನಮ್ಮ ಮುಖ್ಯಮಂತ್ರಿಗಳು ಸಾಕಷ್ಟು ಯೋಜನೆ, ಕ್ರಮಗಳನ್ನು ತರುತ್ತಿದ್ದಾರೆ ಎಂದರು.

ಸಿಎಂ ಅವರ ಕಾರ್ಯವೈಖರಿಯನ್ನು ನ್ಯಾಯಾಲಯ ಕೂಡ ಪ್ರಶಂಸಿಸಿದೆ, ಶಿಕ್ಷಣ, ಅಭಿವೃದ್ಧಿ, ಮೂಲಭೂತ ಸೌಕರ್ಯಗಳಿಗೆ ಸಿಎಂ ಅವರ ಕೆಲಸಗಳನ್ನು ಪ್ರತಿಯೊಬ್ಬರೂ ಗುರುತಿಸಿ ಪ್ರಶಂಸಿಸುತ್ತಿದ್ದಾರೆ, ಇಡೀ ದೇಶ ಇಂದು ಮಹಾರಾಷ್ಟ್ರ ಸರ್ಕಾರದತ್ತ ತಿರುಗಿ ನೋಡುತ್ತಿದೆ ಎಂದು ಶಿವಸೇನೆ ವಕ್ತಾರರು ಕೂಡ ಆಗಿರುವ ಸಂಜಯ್ ರಾವತ್ ಶ್ಲಾಘಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com