3.86 ಕೋಟಿಗೂ ಹೆಚ್ಚು ಜನ ನಿಗದಿತ ಸಮಯದಲ್ಲಿ 2ನೇ ಡೋಸ್ ಕೋವಿಡ್ ಲಸಿಕೆ ಪಡೆದಿಲ್ಲ: ಕೇಂದ್ರ
3.86 ಕೋಟಿಗೂ ಹೆಚ್ಚು ಜನರು ನಿಗದಿತ ಸಮಯದಲ್ಲಿ ತಮ್ಮ ಎರಡನೇ ಡೋಸ್ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆ ಪಡೆದಿಲ್ಲ ಎಂದು ಕೇಂದ್ರ ಸರ್ಕಾರ ಆರ್‌ಟಿಐ ಪ್ರಶ್ನೆಗೆ ಉತ್ತರ ನೀಡಿದೆ.
Published: 19th August 2021 07:14 PM | Last Updated: 19th August 2021 07:14 PM | A+A A-

ಲಸಿಕೆ ಪಡೆದುಕೊಳ್ಳುತ್ತಿರುವ ಮಹಿಳೆ
ನವದೆಹಲಿ: 3.86 ಕೋಟಿಗೂ ಹೆಚ್ಚು ಜನರು ನಿಗದಿತ ಸಮಯದಲ್ಲಿ ತಮ್ಮ ಎರಡನೇ ಡೋಸ್ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆ ಪಡೆದಿಲ್ಲ ಎಂದು ಕೇಂದ್ರ ಸರ್ಕಾರ ಆರ್‌ಟಿಐ ಪ್ರಶ್ನೆಗೆ ಉತ್ತರ ನೀಡಿದೆ.
ಕೊವಿನ್ ಪೋರ್ಟಲ್‌ನಲ್ಲಿರುವ ಮಾಹಿತಿಯ ಪ್ರಕಾರ, ಗುರುವಾರ ಮಧ್ಯಾಹ್ನದ ವೇಳೆಗೆ 44,22,85,854 ಜನರು ತಮ್ಮ ಮೊದಲ ಡೋಸ್ ಪಡೆದಿದ್ದಾರೆ, ಆದರೆ 12,59,07,443 ಜನರು ತಮ್ಮ ಎರಡನೇ ಡೋಸ್ ತೆಗೆದುಕೊಂಡಿದ್ದಾರೆ.
ಸಾಮಾಜಿಕ ಕಾರ್ಯಕರ್ತ ರಮಣ್ ಶರ್ಮಾ ಅವರು ಮಾಹಿತಿ ಹಕ್ಕು ಕಾಯಿದೆಯಡಿ(ಕೋವಿಶೀಲ್ಡ್ ಮತ್ತು ಕೋವಕ್ಸಿನ್) ಮೊದಲ ಡೋಸ್ ಲಸಿಕೆಗಳನ್ನು ಪಡೆದ ಜನ ಸಂಖ್ಯೆಯ ವಿವರ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಕೇಂದ್ರ ಆರೋಗ್ಯ ಸಚಿವಾಲಯದ ಕೋವಿಡ್ -19 ಲಸಿಕೆ ಆಡಳಿತ ಕೋಶ ಉತ್ತರ ನೀಡಿದೆ.
ಕೋವಿಶೀಲ್ಡ್‌ನ ಎರಡನೇ ಡೋಸ್ ಅನ್ನು 84-112 ದಿನಗಳ ನಂತರ ತೆಗೆದುಕೊಳ್ಳಲು ಶಿಫಾರಸು ಮಾಡಲಾಗಿದೆ. ಆದರೆ ಕೋವಾಕ್ಸಿನ್‌ನ ನಡುವಿನ ಅಂತರವು 28-42 ದಿನಗಳ ನಡುವೆ ಇರಬೇಕು.
ಕೋ-ವಿನ್ ಪೋರ್ಟಲ್‌ನ ಅಂತಿಮ ವರದಿಯ ಪ್ರಕಾರ, ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದ ಲಸಿಕೆದಾರರು(ಫಲಾನುಭವಿಗಳು) ಭಾರತ ಸರ್ಕಾರ ನಿಗದಿಪಡಿಸಿದ ಅವಧಿಯೊಳಗೆ ತಮ್ಮ ಎರಡನೇ ಡೋಸ್ ಅನ್ನು ಪಡೆಯದಿರುವವರ ಸಂಖ್ಯೆ 3,40 , 72,993(17 ನೇ ಆಗಸ್ಟ್ 2021ರ ಮಾಹಿತಿ) ಎಂದು" ಪ್ರತಿಕ್ರಿಯೆ ನೀಡಿದೆ.
ಇನ್ನು ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದ ಫಲಾನುಭವಿಗಳಲ್ಲಿ 46,78,406 (ಡೇಟಾ 17 ಆಗಸ್ಟ್ 2021 ರಂತೆ) ಮಂದಿ ಸರ್ಕಾರ ನಿಗದಿಪಡಿಸಿದ ಅವಧಿಯೊಳಗೆ ತಮ್ಮ ಎರಡನೇ ಡೋಸ್ ಲಸಿಕೆ ಪಡೆದಿಲ್ಲ ಎಂದು ಆರೋಗ್ಯ ಸಚಿವಾಲಯದ ಕೋವಿಡ್ -19 ಲಸಿಕೆ ಆಡಳಿತ ಕೋಶ ತಿಳಿಸಿದೆ.