ಅಸ್ಸಾಂ: ಗುಂಡು ಹಾರಿಸಿ ಮೂವರು ಡಕಾಯಿತರನ್ನು ಹತ್ಯೆ ಮಾಡಿದ ಪೊಲೀಸರು!
ಅಪರಾಧಿಗಳ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರೆಸಿರುವ ಅಸ್ಸಾಂ ಪೊಲೀಸರು ಭಾನುವಾರ ಮುಂಜಾನೆ ನಡೆಸಿದ ಎನ್ ಕೌಂಟರ್ ನಲ್ಲಿ ಮೂವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇತರ ಮೂವರು ದರೋಡೆಕೋರರು ಪರಾರಿಯಾಗಿದ್ದಾರೆ.
Published: 22nd August 2021 04:14 PM | Last Updated: 22nd August 2021 04:14 PM | A+A A-

ಸಾಂದರ್ಭಿಕ ಚಿತ್ರ
ಗುವಾಹಟಿ: ಅಪರಾಧಿಗಳ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರೆಸಿರುವ ಅಸ್ಸಾಂ ಪೊಲೀಸರು ಭಾನುವಾರ ಮುಂಜಾನೆ ನಡೆಸಿದ ಎನ್ ಕೌಂಟರ್ ನಲ್ಲಿ ಮೂವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇತರ ಮೂವರು ದರೋಡೆಕೋರರು ಪರಾರಿಯಾಗಿದ್ದಾರೆ.
ಡಕಾಯಿತರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಸಹ ಗುಂಡಿನ ದಾಳಿ ನಡೆಸಿದಾಗ ಗಾಯಗೊಂಡು ಮೂವರು ಹತ್ಯೆಯಾಗಿರುವುದಾಗಿ ಅಸ್ಸಾಂ ಡಿಜಿಪಿ ಭಾಸ್ಕರ್ ಜ್ಯೋತಿ ಮಹಾಂತ್ ಟ್ವೀಟ್ ಮಾಡಿದ್ದಾರೆ. ಅವರುಗಳಿಂದ ವಾಹನಗಳು, ಸಲಕರಣೆಗಳು, ಗ್ಯಾಸ್ ಕಟ್ಟರ್ , ಆಕ್ಸಿಜನ್ ಸಿಲಿಂಡರ್ ಜೊತೆಗೆ ಎರಡು ಪಿಸ್ತೂಲ್ ಗಳನ್ನು ವಶಕ್ಕೆ ಪಡೆದಿರುವುದಾಗಿ ಅವರು ತಿಳಿಸಿದ್ದಾರೆ.
ಅಲಹಾಬಾದ್ ಬ್ಯಾಂಕ್ ಶಾಖೆಯನ್ನು ಡರೋಡೆ ಮಾಡಲು ಆರು ಸದಸ್ಯರನ್ನೊಳಗೊಂಡ ಗ್ಯಾಂಗ್ ಬಂದಿದೆ. ಆದರೆ, ಅದೇ ಸಮಯಕ್ಕೆ ಸ್ಥಳಕ್ಕೆ ಬಂದ ಪೊಲೀಸರನ್ನು ಕಂಡು ಎರಡು ವಾಹನಗಳನ್ನು ಅಲ್ಲಿಂದ ಪರಾರಿಯಾಗುತ್ತಿದ್ದಾಗ ಬೆನ್ನಟ್ಟಿದ್ದ ಪೊಲೀಸರು ಮೂವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಆಗ ಅವರು ಗಾಯಗೊಂಡು ಬಳಿಕ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಇಡಲಾಗಿದೆ. ಪರಾರಿಯಾಗಿರುವ ಉಳಿದ ಮೂವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಡಿಜಿಪಿ ತಿಳಿಸಿದ್ದಾರೆ.
ಅತಿದೊಡ್ಡ ಬ್ಯಾಂಕ್ ದರೋಡೆಯನ್ನು ತಡೆಗಟ್ಟಿರುವ ಅಸ್ಸಾಂ ಪೊಲೀಸರ ಕಾರ್ಯವನ್ನು ಮುಖ್ಯಮಂತ್ರಿ ಹಿಮಾಂತ್ ಬಿಸ್ವಾಸ್ ಶರ್ಮಾ ಶ್ಲಾಘಿಸಿದ್ದಾರೆ ಎಂದು ಡಿಜಿಪಿ ತಿಳಿಸಿದ್ದಾರೆ. ಅತ್ಯಾಚಾರ, ಕೊಲೆ, ಕಳವು ಪ್ರಕರಣಗಳನ್ನು ತಡೆಗಟ್ಟಿ, ಅಸ್ಸಾಂನ್ನು ಅಪರಾಧ ಮುಕ್ತ ಮಾಡುವುದೇ ನಮ್ಮ ಗುರಿ ಎಂದು ಅವರು ಹೇಳಿದ್ದಾರೆ.