ಬಳೆ ಮಾರಾಟ ಮಾಡುತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ, ಸಂತ್ರಸ್ಥನಿಂದ ಪೊಲೀಸರಿಗೆ ದೂರು!
ಅನ್ಯಕೋಮಿನ ವ್ಯಕ್ತಿ ಎಂಬ ಒಂದೇ ಕಾರಣಕ್ಕೆ ಬಳೆ ಮಾರಾಟ ಮಾಡುತ್ತಿದ್ದ ವ್ಯಕ್ತಿ ಮೇಲೆ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.
Published: 23rd August 2021 03:09 PM | Last Updated: 23rd August 2021 03:20 PM | A+A A-

ಸಾಂದರ್ಭಿಕ ಚಿತ್ರ
ಭೋಪಾಲ್: ಅನ್ಯಕೋಮಿನ ವ್ಯಕ್ತಿ ಎಂಬ ಒಂದೇ ಕಾರಣಕ್ಕೆ ಬಳೆ ಮಾರಾಟ ಮಾಡುತ್ತಿದ್ದ ವ್ಯಕ್ತಿ ಮೇಲೆ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.
ಇಂದೋರ್ ನ ಗೋವಿಂದ ನಗರದಲ್ಲಿ ಬಳೆ ಮಾರಾಟಕ್ಕಾಗಿ ಆಗಮಿಸಿದ್ದ ಅನ್ಯಕೋಮಿನ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಬೇರೇ ಕೋಮಿನವನಾದ ನೀನು ಇಲ್ಲಿ ಬಳೆ ಮಾರಾಟ ಮಾಡಬಾರದು ಎಂದು ಎಚ್ಚರಿಸಿದ್ದಾರೆ. ಅಲ್ಲದೆ ಮತ್ತೊಮ್ಮೆ ಇಲ್ಲಿಗೆ ಬರಬೇಡ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ವಿಚಾರ ತಿಳಿದ ಕೂಡಲೇ ಸ್ಖಳಕ್ಕಾಗಮಿಸಿದ ಇಂದೋರ್ ಎಸ್ ಪಿ ಅಶುತೋಷ್ ಬಗ್ರಿ ಅವರು, 'ವೈರಲ್ ಆದ ವೀಡಿಯೋದಲ್ಲಿ, ಬಂಗಂಗಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಬಳೆ ಮಾರಾಟಗಾರನನ್ನು ಥಳಿಸಲಾಗಿದೆ. ಆತನ ವಿರುದ್ಧ ಆಕ್ಷೇಪಾರ್ಹ ಭಾಷೆಯನ್ನು ಬಳಸಲಾಗಿದೆ. ಈ ಕುರಿತಂತೆ ಎಫ್‌ಐಆರ್ ದಾಖಲಿಸಲಾಗಿದ್ದು, ಆರೋಪಿಗಳನ್ನು ವಿಡಿಯೋ ಮೂಲಕ ಗುರುತಿಸಲಾಗುತ್ತಿದೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ವರದಿಗಳ ಪ್ರಕಾರ ಸಂತ್ರಸ್ತ ಈಗ ಇಂದೋರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಕೋಮು ಬಣ್ಣ ಬೇಡ ಎಂದ ಸಂಸದ
ಇನ್ನು ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಂಸದ ಎಚ್‌ಎಂ ನರೋತ್ತಮ್ ಮಿಶ್ರ, 'ಇದಕ್ಕೆ ಕೋಮು ಬಣ್ಣವನ್ನು ನೀಡಬಾರದು. ಒಬ್ಬ ಮನುಷ್ಯ ತನ್ನ ಹೆಸರು, ಜಾತಿ ಮತ್ತು ಧರ್ಮವನ್ನು ಮರೆಮಾಡಿದರೆ ಯಾರಿಗಾದರೂ ಅನುಮಾನ ಬರುತ್ತದೆ. ನಮ್ಮ ಹೆಣ್ಣು ಮಕ್ಕಳು ಬಳೆಗಳನ್ನು ಧರಿಸುತ್ತಾರೆ ಮತ್ತು ಸಾವನ್ ಸಮಯದಲ್ಲಿ ಗೋರಂಟಿ ಹಚ್ಚುತ್ತಾರೆ. ಹೀಗಾಗಿ ಅವರು ಬಳೆ ಮಾರಾಟಗಾರರ ಬಳಿ ಹೋಗುತ್ತಾರೆ. ಈ ವೇಳೆ ಗೊಂದಲ ಉಂಟಾಯಿತು ಮತ್ತು ಅವರ ಐಡಿ ನೋಡಿದ ನಂತರ ಸತ್ಯ ಹೊರಬಂದಿತು ಎಂದು ಹೇಳಿದ್ದಾರೆ.
ಘಟನೆಗೆ ಆಘಾತ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಲ್ಪಸಂಖ್ಯಾತ ಸೆಲ್ ನ ರಾಷ್ಟ್ರೀಯ ಅಧ್ಯಕ್ಷ ಇಮ್ರಾನ್ ಪ್ರತಾಪಗರ್ಹಿ , ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂದೋರ್ನಲ್ಲಿ ಸಾರ್ವಜನಿಕವಾಗಿ ವ್ಯಕ್ತಿಯೊಬ್ಬನ ಮೇಲೆ ಗುಂಪೊಂದು ಥಳಿಸಿದ್ದು ಅಮಾನವೀಯ ಎಂದು ಹೇಳಿದ್ದಾರೆ.