ಎರಡನೇ ಅಲೆ ಇನ್ನೂ ಮುಗಿದಿಲ್ಲ, ಹಬ್ಬಗಳನ್ನು ಎಚ್ಚರಿಕೆಯಿಂದ ನಿಯಮ ಪಾಲಿಸಿ ಆಚರಿಸಿ: ಕೇಂದ್ರ ಸರ್ಕಾರ

ಕೋವಿಡ್-19 ಸೋಂಕು ತಡೆ ನಿರ್ವಹಣೆಯಲ್ಲಿ ಸೆಪ್ಟೆಂಬರ್-ಅಕ್ಟೋಬರ್ ತಿಂಗಳು ನಿರ್ಣಾಯಕವಾಗಿದ್ದು ಹಬ್ಬಗಳ ತಿಂಗಳುಗಳಾಗಿರುವುದರಿಂದ ಎಚ್ಚರಿಕೆಯಿಂದ ಇರಬೇಕೆಂದು ಜನತೆಗೆ ಕೇಂದ್ರ ಸರ್ಕಾರ ಕರೆ ನೀಡಿದೆ.
ಕೋವಿಡ್-19 ಸೋಂಕು ಪತ್ತೆ ಪರೀಕ್ಷೆ
ಕೋವಿಡ್-19 ಸೋಂಕು ಪತ್ತೆ ಪರೀಕ್ಷೆ

ನವದೆಹಲಿ: ಕೋವಿಡ್-19 ಸೋಂಕು ತಡೆ ನಿರ್ವಹಣೆಯಲ್ಲಿ ಸೆಪ್ಟೆಂಬರ್-ಅಕ್ಟೋಬರ್ ತಿಂಗಳು ನಿರ್ಣಾಯಕವಾಗಿದ್ದು ಹಬ್ಬಗಳ ತಿಂಗಳುಗಳಾಗಿರುವುದರಿಂದ ಎಚ್ಚರಿಕೆಯಿಂದ ಇರಬೇಕೆಂದು ಜನತೆಗೆ ಕೇಂದ್ರ ಸರ್ಕಾರ ಕರೆ ನೀಡಿದೆ.

ಆ.26 ರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ದೇಶದಲ್ಲಿ ಇನ್ನೂ ಎರಡನೇ ಅಲೆ ಮುಕ್ತಾಯಗೊಂಡಿಲ್ಲ ಆದ್ದರಿಂದ ಹಬ್ಬಗಳನ್ನು ಎಚ್ಚರದಿಂದ ಕೋವಿಡ್-19 ನಿಯಮಗಳಿಗೆ ಅನುಗುಣವಾಗಿ ಆಚರಿಸಬೇಕು ಎಂದು ಹೇಳಿದ್ದಾರೆ. 

ಇನ್ನು ಐಸಿಎಂಆರ್ ನ ಪ್ರಧಾನ ನಿರ್ದೇಶಕ ಬಲರಾಮ್ ಭಾರ್ಗವ "ಲಸಿಕೆಗಳು ರೋಗದ ತೀವ್ರತೆಯನ್ನು ಕಡಿಮೆ ಮಾಡುತ್ತದೆಯೇ ಹೊರತು ರೋಗ ಬಾರದ ಹಾಗೆ ಮಾಡುವುದಿಲ್ಲ. ಆದ್ದರಿಂದ ಲಸಿಕೆಗಳನ್ನು ಪಡೆದ ನಂತರವೂ ಸಹ ಮಾಸ್ಕ್ ಧರಿಸಿ ಕೋವಿಡ್-19 ಸೋಂಕು ತಡೆ ನಿಯಮಗಳನ್ನು ಪಾಲನೆ ಮಾಡುವುದು ಮುಖ್ಯ" ಎಂದು ಹೇಳಿದ್ದಾರೆ.

ಭೂಷಣ್ ಮಾತನಾಡಿ, 41 ಜಿಲ್ಲೆಗಳಲ್ಲಿ ಕೋವಿಡ್-19 ಪಾಸಿಟಿವಿಟಿ ದರ ಶೇ.10 ಕ್ಕಿಂತ ಹೆಚ್ಚಿದೆ ಎಂಬ ಮಾಹಿತಿ ನೀಡಿದ್ದಾರೆ.

ಸರ್ಕಾರದ ಪ್ರಕಾರ ಭಾರತದ ಶೇ.58.4 ರಷ್ಟು ಸೋಂಕು ಪ್ರಕರಣಗಳು ಕೇರಳದಿಂದ ವರದಿಯಾಗಿತ್ತು ಎಂದು ಹೇಳಿದ್ದಾರೆ.

ಕೇರಳ ಒಂದೇ ರಾಜ್ಯ 1 ಲಕ್ಷಕ್ಕಿಂತ ಹೆಚ್ಚು ಸಕ್ರಿಯ ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿದೆ. ನಾಲ್ಕು ರಾಜ್ಯಗಳು 10,000 ದಿಂದ 1 ಲಕ್ಷ ಸಕ್ರಿಯ ಪ್ರಕರಣಗಳನ್ನು ಹೊಂದಿದ್ದರೆ, 31 ರಾಜ್ಯಗಳು 10,000 ಕ್ಕಿಂತಲೂ ಕಡಿಮೆ ಸಕ್ರಿಯ ಪ್ರಕರಣಗಳನ್ನು ಹೊಂದಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಈ ವರೆಗೂ ಆಫ್ಘಾನಿಸ್ತಾನದಿಂದ ಬಂದಿರುವ ಮಂದಿಯ ಪೈಕಿ 400 ಕ್ಕೂ ಹೆಚ್ಚು ಮಂದಿಗೆ ಕೋವಿಡ್-19 ಸೋಂಕು ಪತ್ತೆ ಪರೀಕ್ಷೆ ಮಾಡಿಸಲಾಗಿದೆ ಈ ಪೈಕಿ ಕೆಲವರಿಗೆ ಸೋಂಕು ದೃಢಪಟ್ಟಿದೆ ಎಂದೂ ಕೇಂದ್ರ ಸರ್ಕಾರ ಇದೇ ವೇಳೆ ಮಾಹಿತಿ ನೀಡಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com