ದೇಶಾದ್ಯಂತ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ: ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ಶುಭಾಶಯ

ದೇಶಾದ್ಯಂತ ಇಂದು ಸೋಮವಾರ ಶ್ರೀ ಕೃಷ್ಣ ಪರಮಾತ್ಮನ ಹುಟ್ಟಿದ ದಿನವನ್ನು ಶ್ರದ್ಧಾ, ಭಕ್ತಿ, ಸಂಭ್ರಮ-ವಿನೋದಗಳಿಂದ ಭಕ್ತರು ಆಚರಿಸುತ್ತಿದ್ದಾರೆ.
ನೊಯ್ಡಾದ ಇಸ್ಕಾನ್ ದೇವಸ್ಥಾನದಲ್ಲಿ
ನೊಯ್ಡಾದ ಇಸ್ಕಾನ್ ದೇವಸ್ಥಾನದಲ್ಲಿ

ನವದೆಹಲಿ/ಬೆಂಗಳೂರು:ದೇಶಾದ್ಯಂತ ಇಂದು ಸೋಮವಾರ ಶ್ರೀ ಕೃಷ್ಣ ಪರಮಾತ್ಮನ ಹುಟ್ಟಿದ ದಿನವನ್ನು ಶ್ರದ್ಧಾ, ಭಕ್ತಿ, ಸಂಭ್ರಮ-ವಿನೋದಗಳಿಂದ ಭಕ್ತರು ಆಚರಿಸುತ್ತಿದ್ದಾರೆ. ಮನೆಗಳಲ್ಲಿ ಬೆಳಗ್ಗೆಯಿಂದಲೇ ಮನೆಯನ್ನು ಸಾರಿಸಿ ತಳಿರು ತೋರಣಗಳನ್ನು, ಹೂವಿನ ಹಾರಗಳನ್ನು ದೇವರ ಮುಂದೆ ಮನೆ ಬಾಗಿಲಿಗೆ ಹಾಕಿ ರಂಗೋಲಿ ರಚಿಸಿ ಹೆಂಗಳೆಯರು ಸ್ನಾನ ಮಾಡಿ ಹೊಸ ಉಡುಪು ತೊಟ್ಟು ಸಂಭ್ರಮಿಸುತ್ತಿದ್ದಾರೆ.

ಶ್ರೀಕೃಷ್ಣನಿಗೆ ಪ್ರಿಯವಾದ ಲಡ್ಡು, ಕಜ್ಜಾಯ, ಅವಲಕ್ಕಿ, ಚಕ್ಕುಲಿ, ಕೃಷ್ಣ ಜನ್ಮಾಷ್ಠಮಿ ಸಿಹಿ ಉಂಡೆ ಮಾಡಿ ದೇವರಿಗೆ ನೈವೇದ್ಯ ಮಾಡಿ ಮನೆಯವರೆಲ್ಲರೂ ಖುಷಿಯಿಂದ ಸೇರಿ, ನಂಟರಿಷ್ಠರು, ಬಂಧು-ಬಳಗವನ್ನು ಕರೆದು ಹಬ್ಬದಡುಗೆ ಸಂಭ್ರಮವನ್ನು ಉಣಬಡಿಸಿ ತಾವು ಕೂಡ ತಿಂದು ಖುಷಿಪಡುತ್ತಾರೆ.

ಮಕ್ಕಳಿಗೆ ಕೃಷ್ಣನಂತೆ ವೇಷ ತೊಡಿಸಿ ಅವರ ಆಟ-ವಿನೋಗಳನ್ನು ನೋಡುತ್ತಿದ್ದಾರೆ. ಈ ಶುಭ ಸಂದರ್ಭವು ಭಗವಾನ್ ಶ್ರೀಕೃಷ್ಣನ ಪವಾಡಗಳನ್ನು ನೆನಪಿಸುತ್ತದೆ, ರಕ್ಷಣೆ, ಕರುಣೆ ಮತ್ತು ಪ್ರೀತಿಯ ದೇವರೆಂದು ಹೆಸರಾಗಿರುವ ಶ್ರೀ ಕೃಷ್ಣನ ಹುಟ್ಟು, ಬಾಲ್ಯ, ಪವಾಡಗಳನ್ನು ಕೇಳುವುದೇ ಚೆಂದ. 

ಮಥುರ, ಇಸ್ಕಾನ್ ದೇವಾಲಯ ಸೇರಿದಂತೆ ಶ್ರೀಕೃಷ್ಣನ ದೇವಾಲಯಗಳಲ್ಲಿ ಇಂದು ಮುಂಜಾನೆಯಿಂದ ರಾತ್ರಿಯವರೆಗೆ ಹಲವು ವಿಶೇಷ ಕಾರ್ಯಕ್ರಮಗಳು, ಪೂಜೆ ಪುನಸ್ಕಾರಗಳು ನೆರವೇರುತ್ತಿವೆ.

ಭಕ್ತಾದಿಗಳು ದೇವಸ್ಥಾನಗಳಿಗೆ ತೆರಳಿ ಕೃಷ್ಣನನ್ನು ಪೂಜಿಸುವ ದಿನ. ಉತ್ತರ ಪ್ರದೇಶದ ಮಥುರಾ ಮತ್ತು ಬೃಂದಾವನದಲ್ಲಿ ಹಬ್ಬದ ಸಡಗರ ಹೆಚ್ಚಾಗಿದೆ. ಬನ್ಕೆ ಬಿಹಾರಿ ದೇವಸ್ಥಾನ, ಪ್ರೇಮ್ ಮಂದಿರ್, ಇಸ್ಕಾನ್ ಮತ್ತು ಮಥುರಾದ ಕೃಷ್ಣ ದೇವಸ್ಥಾನಗಳಲ್ಲಿ ಜನ್ಮಾಷ್ಠಮಿ ಸಂಭ್ರಮ ಕಂಡು ಬಂದಿದೆ. ಮಥುರಾ ದೇವಸ್ಥಾನವನ್ನು ಹೂವು ಮತ್ತು ದೀಪಾಲಂಕಾರಗಳಿಂದ ಶೃಂಗರಿಸಲಾಗಿದೆ.

ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ದೇಶದ ಜನತೆಗೆ ಶುಭ ಕೋರಿದ್ದಾರೆ. ಕೋವಿಡ್ ನಿಯಮ, ನಿರ್ಬಂಧನೆಗಳ ನಡುವೆ ಸರಳವಾಗಿ ಈ ವರ್ಷ ಹಬ್ಬವನ್ನು ಆಚರಿಸಲಾಗುತ್ತಿದ್ದು, ಪ್ರಮುಖ ದೇವಾಲಯಗಳು ಆನ್ ಲೈನ್ ನಲ್ಲಿ ಭಕ್ತರಿಗೆ ದೇವರ ದರ್ಶನದ ವ್ಯವಸ್ಥೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com